

ಬೆಂಗಳೂರು: ಕೆಲವು ದೇಶಗಳಲ್ಲಿ ಕರೊನಾ ಹೊಸ ರೂಪಾಂತರಿ ಒಮಿಕ್ರಾನ್ ಪ್ರಭೇದ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ವಿದೇಶದಿಂದ ಬರುವ ಎಲ್ಲರಿಗೂ ಇಂದಿನಿಂದ ಆರ್ ಟಿಪಿಸಿಆರ್ ಟೆಸ್ಟ್ ಕಡ್ಡಾಯಗೊಳಿಸಿದ್ದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇದಕ್ಕಾಗಿ ಮಾಡಿರುವ ಸಿದ್ಧತೆಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಖುದ್ದು ಪರಿಶೀಲಿಸಿದರು.
ನಂತರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಆರ್ ಟಿಪಿಸಿಆರ್ ಟೆಸ್ಟ್ ನಿಂದ ನೆಗೆಟಿವ್ ವರದಿ ಬಂದರೂ ಅವರ ಮನೆಯಲ್ಲೇ ಏಳು ದಿನಗಳ ಕಾಲ ಕ್ವಾರಂಟೈನ್ ನಲ್ಲಿ ಇರಬೇಕು. ರೋಗ ಲಕ್ಷಣಗಳಿದ್ದು, ವರದಿಯಲ್ಲಿ ನೆಗೆಟಿವ್ ತೋರಿಸಿದರೆ ಐದು ದಿನಗಳ ಕಾಲ ಹೋಂ ಕ್ವಾರಂಟೈನ್ ಬಳಿಕ ಮತ್ತೊಮ್ಮೆ ಪರೀಕ್ಷಿಸಲಾಗುವುದು. ಆಗಲೂ ನೆಗೆಟಿವ್ ಬಂದರೆ, ಮತ್ತೆ ಏಳು ದಿನಗಳ ಹೋಂ ಕ್ವಾರಂಟೈನ್ ಕಡ್ಡಾಯವಾಗಿದೆ.
ಪಾಸಿಟಿವ್ ವರದಿ ಬಂದವರಿಗೆ ನೇರ ಪ್ರತ್ಯೇಕವಾಗಿ ತೆರೆದ ಐಸೋಲೇಟೆಡ್ ವಾರ್ಡ್ ಗೆ ಸ್ಥಳಾಂತರಿಸಿ ಸೂಕ್ತ ಚಿಕಿತ್ಸೆ, ಆರೈಕೆ ವ್ಯವಸ್ಥೆ ಮಾಡಲಾಗುವುದು. ಮುಖ್ಯಮಂತ್ರಿ ಸೂಚನೆಯಂತೆ ಸ್ವಲ್ಪ ಹೆಚ್ಚಿನ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ವಿವರಿಸಿದರು.
ಪ್ರತ್ಯೇಕ ವ್ಯವಸ್ಥೆ
ಒಂದು ವೇಳೆ ಒಮಿಕ್ರಾನ್ ಬಾಧಿತರು ಪತ್ತೆಯಾದರೆ, ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ವಿಶೇಷ ವಾರ್ಡ್ ತೆರೆದು ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಮುನ್ನೆಚ್ಚರಿಕೆ ಕ್ರಮ ಮಾಹಿತಿ, ಅಗತ್ಯ ನಿರ್ದೇಶನ ಪಡೆಯುವ ಉದ್ದೇಶದಿಂದ ಇನ್ನೆರಡು ದಿನಗಳಲ್ಲಿ ಕೇಂದ್ರ ಆರೋಗ್ಯ ಸಚಿವರೊಂದಿಗೆ ಸಿಎಂ ಬಸವರಾಜ ಬೊಮ್ಮಾಯಿ ಮಾತುಕತೆ ನಡೆಸಲಿದ್ದಾರೆ ಎಂದು ಡಾ.ಸುಧಾಕರ್ ತಿಳಿಸಿದರು.