

ಕಿಯೊಂಜಾರ್ (ಒಡಿಶಾ): ಅಂತ್ಯಕ್ರಿಯೆಗೆ ಹೋದ ಸಂದರ್ಭದಲ್ಲಿ ವೃದ್ಧನೊಬ್ಬನಿಗೆ ಎಚ್ಚರವಾಯ್ತು... ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ ಮಹಿಳೆ ಸ್ಮಶಾನಕ್ಕೆ ಹೋಗುವಾಗ ಕಣ್ತೆರೆದಳು... ಶವಾಗಾರದಲ್ಲಿ ಇಟ್ಟ ವ್ಯಕ್ತಿಯ ಕೈಕಾಲು ಅಲುಗಾಡಿ ಉಸಿರಾಡಿಸಿದ... ಹೆಣದ ಮುಂದೆ ಕುಟುಂಬಸ್ಥರು ಗೋಳೋ ಎಂದು ಅಳುತ್ತಿರುವಾಗಲೇ ಆ ವ್ಯಕ್ತಿ ಎದ್ದು ಕುಳಿತ...
ಇತ್ತೀಚಿನ ದಿನಗಳಲ್ಲಿ ನಂಬಲಸಾಧ್ಯ ಎನ್ನುವಂಥ ಇಂಥ ಅವೆಷ್ಟೋ ಘಟನೆಗಳು ನಡೆಯುತ್ತಲೇ ಇವೆ. ಈ ವ್ಯಕ್ತಿ ಮೃತಪಟ್ಟಿದ್ದಾನೆ, ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ ನಂತರ ಅಂಥ ವ್ಯಕ್ತಿಗಳು ಬದುಕಿ ಬರುತ್ತಿರುವ ಘಟನೆಗಳು ಇವಾಗಿದ್ದು, ಈ ಪವಾಡಗಳ ಸಾಲಿಗೆ ಇದೀಗ ನವಜಾತ ಶಿಶುವೊಂದು ಸೇರಿದೆ.
ಒಡಿಶಾದ ಕಿಯೋಂಜರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಕರಾಂಜಿಯಾ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡಿದ್ದಾಳೆ. ಈ ವೇಳೆ ಮಗು ಅಳದೇ ಸುಮ್ಮನಿತ್ತು. ಅದರ ಉಸಿರಾಟವನ್ನು ಗಮನಿಸಿದಾಗ ಅದು ಉಸಿರಾಡುತ್ತಿರಲಿಲ್ಲ. ಅಷ್ಟೇ ಅಲ್ಲದೇ ಅದರ ನಾಡಿಮಿಡಿತ ಎಲ್ಲವೂ ಸ್ತಬ್ದವಾಗಿತ್ತು. ಇದರಿಂದ ವೈದ್ಯರು ಮಗು ಬದುಕಲಿಲ್ಲ ಎಂದು ಹೇಳಿದರು.
ಹುಟ್ಟಿದ ಮಗುವನ್ನು ಕಳೆದುಕೊಂಡ ಆ ತಾಯಿಯ ಕಣ್ಣೀರು ನೋಡಲು ಆಗುತ್ತಿರಲಿಲ್ಲ. ಹಾಗೂ ಹೀಗೂ ಮಗಳನ್ನು ಸಮಾಧಾನ ಮಾಡಿದ ಅಮ್ಮ ಮಗುವಿನ ಅಂತ್ಯಸಂಸ್ಕಾರಕ್ಕೆ ಸಕಲ ಸಿದ್ಧತೆ ನಡೆಸಿದರು. ಮಗುವನ್ನು ಸ್ಮಶಾನಕ್ಕೂ ಕರೆದುಕೊಂಡು ಹೋಗಲಾಯಿತು. ಆದರೆ ಅಷ್ಟರಲ್ಲಿಯೇ ಮಗು ಜೋರಾಗಿ ಅಳಲು ಶುರು ಮಾಡಿದೆ!
ಗಾಬರಿಗೊಂಡ ಕುಟುಂಬಸ್ಥರು ಮಗುವನ್ನು ಎತ್ತಿಕೊಂಡಿದ್ದಾರೆ. ಮಗು ಅಳುತ್ತಲೇ ಇತ್ತು. ಕೂಡಲೇ ಆಸ್ಪತ್ರೆಗೆ ಅವರು ಧಾವಿಸಿದಾಗ ಮಗು ಬದುಕಿರುವುದಾಗಿ ವೈದ್ಯರು ಹೇಳಿದರು. ವೈದ್ಯರು ಮಗುವನ್ನು ಸರಿಯಾಗಿ ತಪಾಸಣೆ ಮಾಡದೇ ಮೃತಪಟ್ಟಿದೆ ಎಂದು ಘೋಷಿಸಿರುವುದಕ್ಕೆ ಆಸ್ಪತ್ರೆ ವಿರುದ್ಧ ಕುಟುಂಬಸ್ಥರು ದೂರು ದಾಖಲು ಮಾಡಿದ್ದಾರೆ.