ಪತಿಯ ಕಾಟ ಸಹಿಸದೇ ಆಗಿದ್ದಾಗಲೆಂದು ರುಂಡ-ಮುಂಡ ಬೇರೆ ಮಾಡಿ ಚೀಲಕ್ಕೆ ಹಾಕಿ ಠಾಣೆಗೆ ಹೋದ ಪತ್ನಿ!

bag
Published on

ಚಿತ್ತೂರು (ಆಂಧ್ರಪ್ರದೇಶ) : ಪತಿಯ ಹಿಂಸೆ ತಾಳದೇ ಪತ್ನಿಯೊಬ್ಬಳು ಗಂಡನ ರುಂಡವನ್ನು ಕಡಿದು ಅದನ್ನು ಚೀಲದೊಳಕ್ಕೆ ಹಾಕಿಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ ಭಯಾನಕ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆ ರೇಣಿಗುಂಟದಲ್ಲಿ ನಡೆದಿದೆ.

ಇಂಥದ್ದೊಂದು ಕೃತ್ಯ ಎಸಗಿದವಳನ್ನು ವಸುಂಧರಾ ಎಂದು ತಿಳಿದುಬಂದಿದೆ. ಕೊಲೆಯಾದ ಪತಿ ರವಿಚಂದ್ರನ್ (53).ಈ ದಂಪತಿಗೆ 20 ವರ್ಷದ ಮಗನಿದ್ದಾನೆ.

ಮೊದಲಿನಿಂದಲೂ ಗಂಡ ಜಗಳವಾಡುತ್ತಿದ್ದ. ಆತನ ಹಿಂಸೆ ತಾಳಿಕೊಂಡು ಸಾಕಾಗಿಹೋಗಿತ್ತು. 20 ವರ್ಷಕ್ಕೂ ಹೆಚ್ಚು ಕಾಲ ಹೇಗೋ ಸಂಸಾರ ಮಾಡಿದೆ. ಆದರೆ ಇನ್ನು ಆತನ ಹಿಂಸೆಯನ್ನು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಆಗಿದ್ದು ಆಗಲಿ ಎಂದು ರುಂಡ ಕಡಿದು ಹಾಕಿದ್ದೇನೆ. ಪೊಲೀಸರಿಗೆ ಶರಣಾಗಿದ್ದೇನೆ. ಏನು ಶಿಕ್ಷೆ ಕೊಟ್ಟರೂ ಎದುರಿಸಲು ಸಿದ್ಧ ಎಂದಿದ್ದಾಳೆ ವಸುಂಧರಾ!

ಬೆಳಗ್ಗೆ ದಂಪತಿ ನಡುವೆ ಸಣ್ಣಪುಟ್ಟ ಜಗಳ ನಡೆದಿದೆ. ಈ ಹಿನ್ನೆಲೆ ಕುಪಿತಳಾದ ವಸುಂಧರಾ, ಚಾಕುವಿನಿಂದ ತನ್ನ ಪತಿ ಮೇಲೆ ಬರ್ಬರವಾಗಿ ಹಲ್ಲೆ ಮಾಡಿ ತಲೆ ಕತ್ತರಿಸಿದ್ದಾಳೆ. ನಂತರ ರುಂಡವನ್ನು ಚೀಲದಲ್ಲಿ ತುಂಬಿಕೊಂಡು ಬಂದು ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

ರಕ್ತ ಸೋರುತ್ತಿದ್ದ ಚೀಲ ನೋಡಿ ಬೆಚ್ಚಿಬಿದ್ದಿದ್ದಾರೆ ಪೊಲೀಸರು. ನಂತರ ಆಕೆಯಿಂದ ವಿಷಯ ತಿಳಿದು ಘಟನಾ ಸ್ಥಳಕ್ಕೆ ಹೋಗಿ ಮೃತದೇಹವನ್ನು ತಿರುಪತಿ ಎಸ್‌ವಿ ವೈದ್ಯಕೀಯ ಕಾಲೇಜಿಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net