

ಕೀವ್: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧಕ್ಕೆ ಇಂದು 20ನೇ ದಿನ. ಯೂಕ್ರೇನ್ ಮೇಲೆ ರಷ್ಯಾದ ಅಟ್ಟಹಾಸ ಮುಂದುವರೆದಿದ್ದು, ನಾಗರಿಕರ ಮೇಲೂ ದಾಳಿ ನಡೆಸುತ್ತಿದೆ.
ರಷ್ಯಾ ಸೈನಿಕರನ್ನು ಕಂಡ್ರೆ ಯೂಕ್ರೇನ್ ಜನತೆ ಹೆದರುವಂತಾಗಿದೆ. ಯಾವಾಗ, ಎಲ್ಲಿ ದಾಳಿ ನಡೆಸುತ್ತಾರೋ ಅನ್ನೋ ಆತಂಕದಲ್ಲಿದ್ದಾರೆ. ತಮ್ಮ ದೇಶದ ರಕ್ಷಣೆಗಾಗಿ ಜನರು ಮುಂದಾಗಬೇಕು ಎಂಬ ಕರೆಯನ್ನು ಯೂಕ್ರೇನ್ ಅಧ್ಯಕ್ಷರು ನೀಡಿದ್ದಾರೆ. ಈ ಹಿನ್ನೆಲೆ ನಾಗರಿಕರಿಗೆ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡಲಾಗುತ್ತಿದೆ.
ಇಂಥ ಸನ್ನಿವೇಶದಲ್ಲಿ ವೃದ್ಧ ದಂಪತಿಯೊಬ್ಬರ ಧೈರ್ಯದ ವಿಡಿಯೋ ಸಕತ್ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ರಷ್ಯಾದ ಸೈನಿಕರನ್ನು ವೃದ್ಧ ದಂಪತಿ ಹೇಗೆ ಹಿಮ್ಮೆಟ್ಟಿಸಿದ್ದಾರೆ ಎನ್ನುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.
ಇದು ನಡೆದಿರುವುದು ಕೀವ್‌ನಲ್ಲಿ. ಕೀವ್‌ನಲ್ಲಿರುವ ಅಮೆರಿಕದ ರಾಯಭಾರ ಕಚೇರಿಯ ಟ್ವಿಟರ್‌ನಲ್ಲಿ ವೃದ್ಧ ದಂಪತಿಯ ವಿಡಿಯೋವನ್ನು ಹಂಚಿಕೊಂಡಿದೆ.
ಕೆಲವು ಶಸ್ತ್ರಸಜ್ಜಿತ ರಷ್ಯಾದ ಸೈನಿಕರು ವೃದ್ಧ ದಂಪತಿಯ ಮನೆಗೆ ನುಗ್ಗುತ್ತಾರೆ. ಸೈನಿಕರು ಗುಂಡು ಹಾರಿಸಿ ವೃದ್ಧ ದಂಪತಿಗೆ ಮನೆಯಿಂದ ಹೊರ ಬರುವಂತೆ ಹೇಳುತ್ತಾರೆ. ಹೊರಗೆ ಗುಂಡಿನ ಸದ್ದು ಕೇಳುತ್ತಿದ್ದಂತೆ ಹೊರ ಬರುವ ವೃದ್ಧ ದಂಪತಿ, ರಷ್ಯಾದ ಸೈನಿಕರ ಜೊತೆ ಜಗಳ ಮಾಡಲು ಪ್ರಾರಂಭಿಸುತ್ತಾರೆ. ಕೆಲ ಕಾಲ ಮಾತುಕತೆ ನಡೆಯುತ್ತದೆ. ನಂತರ ದಂಪತಿ ಜೊತೆ ನಿಂತಿದ್ದ ಸೈನಿಕರು ಕೆಲ ಸಮಯದ ಬಳಿಕ ಅಲ್ಲಿಂದ ಹಿಂದಿರುಗುತ್ತಾರೆ.
ಎದುರಿಗೆ ಶಸ್ತ್ರಸಜ್ಜಿತ ಸೈನಿಕರು ನಿಂತಿದ್ದರೂ ವೃದ್ಧ ದಂಪತಿ ಸಾಹಸ ಮೆರೆದು ಅವರನ್ನು ಹಿಮ್ಮೆಟ್ಟಿಸಿರುವ ಈ ವಿಡಿಯೋ ನೋಡಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಸಿಸಿಟಿವಿ ದೃಶ್ಯಾವಳಿಗಳು ಈಗಾಗಲೇ ಎರಡು ಲಕ್ಷಕ್ಕೂ ಹೆಚ್ಚು ವ್ಯೂವ್ ಪಡೆದುಕೊಂಡಿದೆ.
ಇಲ್ಲಿದೆ ನೋಡಿ ವಿಡಿಯೋ