ನಾಳೆ ಹಸೆಮಣೆಯಲ್ಲಿ ನಟಿ ನಯನತಾರಾ, ವಿಘ್ನೇಶ್ ಜೋಡಿ​: ಕೊನೇ ಕ್ಷಣ ತಿರುಪತಿಯಲ್ಲಿ ಮದ್ವೆ ಕ್ಯಾನ್ಸಲ್​!

nayanatara
Published on

ಚೆನ್ನೈ: ‘ಲೇಡಿ ಸೂಪರ್​ಸ್ಟಾರ್’ ಬಿರುದಾಂಕಿತೆ ನಯನತಾರಾ ಮತ್ತು ಜನಪ್ರಿಯ ನಿರ್ದೇಶಕ ವಿಘ್ನೇಶ್​ ಶಿವನ್​ ಅವರ ಮದುವೆ ನಾಳೆ (ಜೂನ್​ 9) ನಡೆಯಲಿದೆ. ಕಳೆದ ನಾಲ್ಕು ವರ್ಷಗಳಿಂದ ಡೇಟಿಂಗ್​ ಮಾಡುತ್ತಿದ್ದ ಈ ಜೋಡಿ ಇದೀಗ ಹಸೆಮಣೆ ಏರುತ್ತಿದೆ. ರಹಸ್ಯವಾಗಿ ಮದುವೆ ಆಗಿದ್ದಾರೆ ಎಂಬ ಸುದ್ದಿಯನ್ನೆಲ್ಲಾ ಸುಳ್ಳು ಮಾಡಿ ಆಪ್ತರ ಸಮ್ಮುಖದಲ್ಲಿ ಈ ತಾರಾ ಜೋಡಿ ಮದುವೆಯಾಗುತ್ತಿದ್ದಾರೆ.

ಇವರು ಈ ಮೊದಲು ತಮ್ಮ ಇಷ್ಟದ ಸ್ಥಳವಾದ ತಿರುಪತಿ ದೇವಸ್ಥಾನದಲ್ಲಿ ಮದುವೆ ಆಗಲಿದ್ದಾರೆ ಎಂದು ಹೇಳಲಾಗಿತ್ತು. ಇದಾದ ಬಳಿಕ ತಮ್ಮ ಸ್ನೇಹಿತರು ಹಾಗೂ ಸಹೋದ್ಯೋಗಿಗಳಿಗೆ ಮಾಲ್ಡೀವ್ಸ್​ನಲ್ಲಿ ಮದುವೆ ಪಾರ್ಟಿಯನ್ನು ಆಯೋಜಿಸಿದ್ದಾರೆ ಎಂಬ ಸುದ್ದಿ ಕೂಡ ಕೇಳಿಬಂದಿತ್ತು. ಈ ಜೋಡಿ ತಿರುಪತಿ ದೇವಸ್ಥಾನಕ್ಕೆ ಭೇಟಿ ಮಾಡುತ್ತಿರುತ್ತಾರೆ. ಇಬ್ಬರಿಗೆ ಈ ಸ್ಥಳ ತುಂಬಾ ಇಷ್ಟ. ಆದ್ದರಿಂದ ಇಲ್ಲಿಯೇ ಮದುವೆಯಾಗಲಿದ್ದಾರೆ ಎಂದು ಹೇಳಲಾಗಿತ್ತು.

ಆದರೆ ಕೊನೆ ಕ್ಷಣ ಇವರಿಬ್ಬರೂ ಮನಸ್ಸನ್ನು ಬದಲಾಯಿಸಿದ್ದಾರೆ. ಇವರು ಮಹಾಬಲಿಪುರಂನಲ್ಲಿ ವಿವಾಹವಾಗಲಿದ್ದಾರೆ. ಇನ್ನು ನಮ್ಮ ಎರಡು ಕುಟುಂಬಗಳ ಜೊತೆಗೆ ಕೆಲವು ಆಪ್ತ ಸ್ನೇಹಿತರು ಮಾತ್ರ ನಮ್ಮ ಮದುವೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ವಿಘ್ನೇಶ್ ತಿಳಿಸಿದ್ದಾರೆ. ಅಲ್ಲದೇ, ಮಹಾಬಲಿಪುರಂನಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಮದುವೆ ನಡೆಯಲಿದೆ.

ತಿರುಪತಿಯಲ್ಲಿ ಮದುವೆ ಏಕೆ ಆಗುತ್ತಿಲ್ಲ ಎಂದು ಸ್ಪಷ್ಟಪಡಿಸಿರುವ ಜೋಡಿ, ಮೊದಲು ತಿರುಪತಿಯಲ್ಲಿ ಮದುವೆಯಾಗಬೇಕೆಂದುಕೊಂಡಿದ್ದೆವು, ಆದರೆ ಸೆಲೆಬ್ರಿಟಿಗಳು ಅಲ್ಲಿಗೆ ಬರಲು ಕೂಡ ಕಷ್ಟವಾಗುತ್ತದೆ. ಯಾರಿಗೂ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಮದುವೆಯ ಸ್ಥಳವನ್ನು ಮಹಾಬಲಿಪುರಂಗೆ ಬದಲಾಯಿಸಿದ್ದೇವೆ ಎಂದಿದೆ.

ಮದುವೆಯ ಎಲ್ಲಾ ಫೋಟೋಗಳನ್ನು ಮಧ್ಯಾಹ್ನದ ನಂತರ ನಾವು ನಿಮಗೆ ನೀಡುತ್ತೇವೆ. ಅದೇ ರೀತಿ ಜೂನ್ 11ರಂದು ನಾನು ಮತ್ತು ನಯನತಾರಾ ನಿಮ್ಮೆಲ್ಲರನ್ನೂ ಪ್ರತ್ಯೇಕವಾಗಿ ಭೇಟಿಯಾಗುತ್ತೇನೆ ಎಂದು ಮಾಧ್ಯಮಗಳಿಗೆ ವಿಘ್ನೇಶ್ ಶಿವನ್ ತಿಳಿಸಿದ್ದು, ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲಿರಲಿ ಎಂದು ಕೇಳಿಕೊಂಡಿದ್ದಾರೆ.

Nayanthara-Vignesh Shivan to tie knot at a temple?, Nayanthara wedding

2011ರಲ್ಲಿ ತೆರೆಕಂಡ ‘ಶ್ರೀ ರಾಮ ರಾಜ್ಯಂ’ ಸಿನಿಮಾದ ಮೂಲಕ ಸಿನಿಮಾದಿಂದ ವಿರಾಮ ಪಡೆದಿದ್ದ ನಯನತಾರಾ, 2015ರಲ್ಲಿ ವಿಘ್ನೇಶ್ ಶಿವನ್ ಅಭಿನಯದ ‘ನಾನೂಂ ರೌಡಿ ಥಾನ್’ ಸಿನಿಮಾದಿಂದ ಮತ್ತೆ ಬಣ್ಣದ ಜಗತ್ತಿನ ಹೊಸ ಪ್ರಯಾಣವನ್ನು ಆರಂಭಿಸಿದ್ದಾರೆ. ನಾನು ರೌಡಿ ಥಾನ್​ ಚಿತ್ರದ ಸೆಟ್‌ನಲ್ಲೇ ನಯನಾ ಮತ್ತು ವಿಘ್ನೇಶ್​ ನಡುವೆ ಪ್ರೇಮಾಂಕುರವಾಗಿತ್ತು. ಚಿತ್ರವು ಸೂಪರ್ ಹಿಟ್ ಆಯಿತು ಮತ್ತು ಹಲವಾರು ಪ್ರಶಸ್ತಿಗಳನ್ನು ಗೆದ್ದುಕೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net