

ವಾರಣಾಸಿ: ದೇಶಕ್ಕೆ ಕ್ರಾಂತಿ ಬದಲು ವಿಕಾಸದ ಅಗತ್ಯವಿದೆ. ನಾವು ನಮ್ಮಲ್ಲಿರುವ ಎಲ್ಲ ತಂತ್ರಜ್ಞಾನಗಳನ್ನು ಬಳಸಿಕೊಂಡು ತಾಂತ್ರಿಕ ಉನ್ನತೀಕರಣದತ್ತ ಸಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದ ಅಖಿಲ ಭಾರತ ಮೇಯರ್‌ಗಳ ಸಮ್ಮೇಳನದಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಭಾಗವಹಿಸಿ ಮಾತನಾಡಿದರು.
ಭಾರತದ ಬಹುಪಾಲು ನಗರಗಳು ಸಾಂಪ್ರದಾಯಿಕ ನಗರಗಳಾಗಿವೆ. ಸ್ಥಳೀಯ ಕೌಶಲಗಳನ್ನು ಮತ್ತು ಉತ್ಪನ್ನಗಳನ್ನು ಬಳಸಿಕೊಂಡು ಆ ನಗರವನ್ನು ಇನ್ನಷ್ಟು ಉನ್ನತಿಗೆ ಕೊಂಡೊಯ್ಯಲು ಸಹಕರಿಬೇಕು. ಅಂಥ ಸ್ಥಳಗಳೇ ನಮ್ಮ ಗುರುತಾಗುವ ಸಾಧ್ಯತೆ ಇದ್ದು, ಅವುಗಳತ್ತ ನಾವು ಹೆಜ್ಜೆ ಇಡಬೇಕು ಎಂದು ಪ್ರಧಾನಿ ಹೇಳಿದರು.
ಭಾರತದ ಇತಿಹಾಸ ಮತ್ತು ಸಂಪ್ರದಾಯವು ಅಭಿವೃದ್ಧಿಯ ಜತೆಜತೆಯಲ್ಲಿಯೇ ಸಾಗಬೇಕು. ಆಧುನೀಕರಣದ ಈ ಯುಗದಲ್ಲಿ ಈ ನಗರಗಳ ಪ್ರಾಚೀನತೆಯೂ ಅಷ್ಟೇ ಮಹತ್ವದ್ದಾಗಿದೆ ಎಂದ ಮೋದಿ, ಇದೇ ವೇಳೆ ಕಾಶಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡಿದರು. ಇಡೀ ದೇಶದ ಅಭಿವೃದ್ಧಿಗೆ ಕಾಶಿ ಮಾರ್ಗಸೂಚಿಯಾಗಬಹುದು. ಪ್ರಪಂಚದಾದ್ಯಂತ ಪ್ರವಾಸಿಗರು ಗಂಗಾ ಘಾಟ್‍ಗೆ ಆಗಮಿಸುತ್ತಾರೆ. ಕಾಶಿಯ ಆರ್ಥಿಕತೆಯನ್ನು ನಿಭಾಯಿಸುವಲ್ಲಿ ಗಂಗಾ ಮಾತೆಯ ಮಹತ್ವದ ಕೊಡುಗೆ ಹೊಂದಿದ್ದೇವೆ. ನಾವೆಲ್ಲರೂ ನಮ್ಮ ನಗರಗಳಲ್ಲಿನ ನದಿಯ ಬಗ್ಗೆ ಸೂಕ್ಷ್ಮವಾದ ವಿಧಾನವನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.
ಹಲವಾರು ರಾಜ್ಯಗಳ ಒಟ್ಟು 120 ಮೇಯರ್‌ಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಅವರನ್ನು ಉದ್ದೇಶಿಸಿದ ಮಾತನಾಡಿದ ಮೋದಿ, ಚೆನ್ನಾಗಿರುವ ವಾರ್ಡ್ಗಳಿಗೆ ಪ್ರಶಸ್ತಿ ನೀಡುವಂತೆ ಸಲಹೆ ನೀಡಿದರು. ಯಾವ ವಾರ್ಡ್ ಸುಂದರವಾಗಿದೆ ಎಂಬುದನ್ನು ಗಮನಿಸುವ ಸ್ಪರ್ಧೆ ನಡೆಸಿ. ಆ ಸ್ಪರ್ಧೆಯಲ್ಲಿ ಸ್ವಚ್ಛತೆ ಹಾಗೂ ನಗರ ಸೌಂದರ್ಯವನ್ನು ಮಾನದಂಡ ಮಾಡಬೇಕು ಎಂದು ಹೇಳಿದರು.
ಪ್ರಧಾನಿ ಮೋದಿಯವರು ಮಾತನಾಡಿದ 40 ನಿಮಿಷಗಳ ವಿಡಿಯೋ ಇಲ್ಲಿದೆ: