

ನಾನು ಕೆಲಸಕ್ಕೆ ಸೇರಿ ಸಾಲವನ್ನು ತೀರಿಸಿದ್ದೇನೆ. ನನ್ನ ಹೆಂಡತಿಯೂ ಬಡವರ ಮನೆಯಿಂದಲೇ ಬಂದವಳು. ಆದರೂ ನನಗೆ ಈ ಬೆಂಗಳೂರಿನಲ್ಲಿ ಒಂದು ಸ್ವಂತ ಮನೆ ಕಟ್ಟಬೇಕೆನ್ನುವ ಕನಸು. ನನ್ನ ಹೆಂಡತಿ ಬೇಡವೆಂದು ಹೇಳಿದರೂ ಕೇಳದೇ ಯಾರದೋ ಮಾತಿಗೆ ಮರುಳಾಗಿ, ಸೈಟ್ ಕೊಳ್ಳಲು ಒಂದು ಲಕ್ಷ ರೂಪಾಯಿ ಕೊಟ್ಟೆ. ನಂತರ ಆ ಹಣ ತೆಗೆದುಕೊಂಡವರು ನಾಪತ್ತೆಯಾದರು. ಎರಡು ವರ್ಷವಾಯಿತು. ಅವರ ಮನೆಗೆ ಅಲೆದದ್ದೇ ಬಂತು ಸೈಟೂ ಇಲ್ಲ, ಆ ವ್ಯಕ್ತಿಯೂ ಇಲ್ಲ. " ಹೋದದ್ದು ಒಂದೇ ಲಕ್ಷ ತಾನೆ ಹೋಗಲಿ ಬಿಡು " ಎಂದು ನನ್ನ ಹೆಂಡತಿ ಸಮಾಧಾನ ಮಾಡುತ್ತಾಳೆ. ನಾನೂ ಈಗ ಸಮಾಧಾನ ಮಾಡಿಕೊಂಡಿದ್ದೇನೆ. ಆದರೆ ನನ್ನ ಸುತ್ತ ಕೆಲವು ವಿಚಿತ್ರ ಘಟನೆಗಳು ನಡೆಯುತ್ತಿವೆ ಎನಿಸುತ್ತಿದೆ.
೧ ದಿನಕ್ಕೊಮ್ಮೆಯಾದರೂ ಆಫ಼ೀಸಿನಲ್ಲಿ ಅಥವಾ ಸಮಾರಂಭಗಳಲ್ಲಿ ಯಾರಾದರೂ ಸೈಟು ಮನೆಗಳ ಬಗ್ಗೆ ನನ್ನ ಹತ್ತಿರವೇ ಮಾತಾಡುತ್ತಾರೆ.
೨ ನಮ್ಮ ಮನೆಗೆ ಬರುವ ದಿನ ಪತ್ರಿಕೆಯಲ್ಲಿ ಪ್ರತಿನಿತ್ಯ ಸೈಟು ಮನೆಗಳ ಜಾಹೀರಾತುಗಳಿರುವ ಕರಪತ್ರಗಳು ರಾಶಿರಾಶಿಯಾಗಿ ಬಂದು ಬೀಳುತ್ತವೆ.
೩ ನನ್ನ ಹೆಂಡತಿಯ ಕಸಿನ್ ಅಣ್ಣ ನನಗಿಂತಾ ಕಡಿಮೆ ಸಂಬಳ ಬರುವವನು ಮನೆಕಟ್ಟಿ ಗೃಹಪ್ರವೇಶಕ್ಕೆ ಕರೆಯುತ್ತಾನೆ.
೪ ಹೊಸವರ್ಷದ ಕ್ಯಾಲೆಂಡರ್ ಹಿಂದೆ ಇರುವ ವರ್ಷ ಭವಿಷ್ಯದಲ್ಲಿ ನನ್ನ ರಾಶಿಗೆ ’ ಈ ವರ್ಷ ಹೊಸಮನೆ ಕಟ್ಟುವ ಯೋಗ ’ ಎಂದಿದೆ. ಹೀಗೇ ಇನ್ನೂ ಹತ್ತಾರು ಕೋ ಇನ್ಸಿಡೆನ್ಸ್ ಆಗುತ್ತಿವೆ. ಇದು ಯಾಕೆ ಹೀಗೆ ಆಗುತ್ತಿದೆ ಎಂದು ಕಳವಳವಾಗುತ್ತದೆ. ಈ ಘಟನೆಗಳೆಲ್ಲಾ " ನೀನು ಮೂರ್ಖ ದುಡ್ಡು ಕಳಕೊಂಡೆ " ಎಂದು ಹಂಗಿಸುತ್ತಿವೆಯೇ? ಅಥವಾ ಖಂಡಿತಾ ನನಗೆ ಮುಂದೆ ಸ್ವಂತಮನೆಯಾಗುವ ಯೋಗವಿದೆ ಎಂದೇ ಹೇಳುತ್ತಿವೆಯೇ? ನನ್ನ ತಲೆಯಲ್ಲಿ ಇಂಥಾ ನೂರಾರು ಪ್ರಶ್ನೆಗಳು ಏಳುತ್ತಾ ಕೆಲಸದಲ್ಲಿ ಗಮನ ಹರಿಸಲು ಕಷ್ಟವಾಗುತ್ತಿದೆ. ರಾತ್ರಿ ನಿದ್ದೆ ಬರುವುದಿಲ್ಲ. ಒಮ್ಮೊಮ್ಮೆ ಊಟಸಹ ಬೇಡವೆನಿಸುತ್ತದೆ. ಇದನ್ನು ನನ್ನ ಹೆಂಡತಿಗೆ ಹೇಳಿದರೆ ಅವಳು ನಗುತ್ತಾಳೇನೋ ಎನ್ನುವ ಚಿಂತೆ. ಈ ಕೊರಗನ್ನು ಹೇಗೆ ದಾಟಲಿ ತಿಳಿಸಿ. ನನಗೆ ಮಾನಸಿಕ ರೋಗವೇನಾದರೂ ಬರುತ್ತಿದೆಯೇ?
ಉತ್ತರ: ಖಂಡಿತಾ ನಿಮಗೆ ಈಗ ಸಧ್ಯಕ್ಕೆ ಯಾವ ಮಾನಸಿಕ ರೋಗವೂ ಇಲ್ಲ. ಮಧ್ಯಮವರ್ಗದ ಜನರಿಗೆ ಒಂದು ಲಕ್ಷ ರೂಪಾಯಿ ಕಳೆದುಕೊಳ್ಳುವುದು ನಿಜಕ್ಕೂ ನೋವಿನ ಸಂಗತಿಯೇ. ಆದರೆ ನೀವು ಧೈರ್ಯವಂತರು . ಆ ಆಘಾತವನ್ನು ದಾಟಿ ಬಂದಿದ್ದೀರಿ. ನಿಮ್ಮ ಅದೃಷ್ಟಕ್ಕೆ ನಿಮ್ಮ ಹೆಂಡತಿಯೂ ನಿಜವಾದ ಸಹಧರ್ಮಿಣಿಯಾಗಿ ನಿಮಗೆ ಸಮಾಧಾನ ಮಾಡಿದ್ದಾರೆ. ಆದರೂ ನಿಮ್ಮ ಒಳ ಮನಸ್ಸಿನಲ್ಲಿ ಎರಡು ನೋವು ಉಳಿದುಬಿಟ್ಟಿದೆ.
ಮನೆಕಟ್ಟುವ ಆಸೆಗೆ ಪೆಟ್ಟು ಬಿದ್ದದ್ದೊಂದಾದರೆ, ಕೂಡಿಟ್ಟ ಲಕ್ಷ ರೂಪಾಯಿ ಮೋಸದಿಂದ ಕಳೆದು ಹೋದದ್ದು ಒಂದು. ಎಂಥವರಿಗೇ ಆದರೂ ಇದು ನೋವಿನ ಸಂಗತಿಯೇ. ಆ ನೋವನ್ನು ಮರೆಯಲು ನಿಮ್ಮ ಮಿದುಳು ಸುತ್ತ ನಡೆಯುವ ಎಲ್ಲಾ ವ್ಯವಹಾರಗಳಲ್ಲಿ ಮನೆಗೆ ಸಂಬಂಧಿಸಿದ ವಿಷಯವನ್ನೇ ಗಮನಿಸಲು ಪ್ರೇರೇಪಿಸುತ್ತಿದೆ. ನಮ್ಮ ಬದುಕಿನಲ್ಲಿ ಬೆಳಗಿನಿಂದ ರಾತ್ರಿಯವರೆಗೆ ನಿಮಿಷಕ್ಕೊಂದರಂತೆ ಲಕ್ಷಗಟ್ಟಲೇ ಬದುಕಿನ ವ್ಯಾಪಾರಗಳು ನಡೆಯುತ್ತಲೇ ಇರುತ್ತವೆ. ಹೀಗೆ ನಡೆಯುವ ಏನಾದರೂ ಒಂದು ವಿಚಾರವನ್ನು ನಾವು ಗಮನಿಸುತ್ತಲೇ ಇರುತ್ತೇವೆ. ಅದಕ್ಕೆ ನಾವು ಪ್ರಾಮುಖ್ಯತೆಯನ್ನು ಕೊಡುವುದಿಲ್ಲ. ಆದರೆ ಮನಸ್ಸಿನಲ್ಲಿ ಒಂದು ವಿಷಯ ಗಟ್ಟಿಯಾಗಿ ಕೂತಿದ್ದಾಗ ನಮ್ಮ ಸುತ್ತಾ ನಡೆಯುತ್ತಿರುವುದಕ್ಕೆ ಮನಸ್ಸು ಅದಕ್ಕೆ ಥಳಕು ಹಾಕುತ್ತದೆ.
ಉದಾಹರಣೆಗೆ ಮದುವೆಗೆಂದು ನಿಮಗೆ ಒಂದು ಹೆಣ್ಣನ್ನು ತೋರಿಸಿರುತ್ತಾರೆ, ನೀವೂ ಒಪ್ಪಿಗೆ ಕೊಟ್ಟಿರುತ್ತೀರಿ, ಆ ನಂತರ ರಸ್ತೆಯಲ್ಲಿ ಹೋಗುವ ಹುಡುಗಿಯರಲ್ಲಿ ಕೆಲವರು ನೀವು ಮೆಚ್ಚಿದ ಹುಡುಗಿಯ ಹಾಗೇ ಕಾಣುತ್ತಾರೆ. ’ ಅಯ್ಯೋ ಎಷ್ಟೊಂದು ಜನ ಹುಡುಗಿಯರು ಅವಳ ಹಾಗೇ ಇದ್ದಾರಲ್ಲ? ಎಂದು ಅಚ್ಚರಿಗೊಳ್ಳುತ್ತೀರಿ. ಸ್ಕೂಟರ್ ತೆಗೆದುಕೊಂಡಿರುತ್ತೀರಿ, ಅದನ್ನು ರಸ್ತೆಯಲ್ಲಿ ಓಡಿಸುವಾಗ ಅದೇ ಕಂಪನಿಯ ಮತ್ತು ಅದೇ ಬಣ್ಣದ ಹಲವಾರು ಸ್ಕೂಟರ್ ಗಳು ನಿಮ್ಮ ಕಣ್ಣಿಗೆ ಬೀಳುತ್ತವೆ. ಛೇ ಅಪರೂಪದ ಬಣ್ಣವೆಂದು ಇದನ್ನು ಆರಿಸಿದರೆ, ಇದೇ ಬಣ್ಣದ್ದು ಎಷ್ಟೊಂದು ಇವೆಯಲ್ಲ ಎಂದು ಬೇಸರಗೊಳ್ಳುತ್ತೀರಿ.
ತಿರುಪತಿಗೆ ಹೋಗಬೇಕೆಂದು ಅಂದುಕೊಂಡಿರುತ್ತೀರಿ, ರಜೆ ಸಿಕ್ಕಿಲ್ಲ, ಅಂದೇ ನೆರೆಮನೆಯವರು ತಿರುಪತಿಯ ಲಡ್ಡು ಪ್ರಸಾದ ಕೊಡುತ್ತಾರೆ, ಯಾರೋ ಹೊಸ ಕ್ಯಾಲೆಂಡರ್ ಕೊಡುತ್ತಾರೆ ಅದರಲ್ಲಿ ತಿರುಪತಿಯ ತಿಮ್ಮಪ್ಪನ ಫೋಟೊ! " ಇದೇನು ಭಗವಂತ ಪದೇಪದೇ ನನಗೆ ನೀನು ಮರೆತಿದ್ದೀಯಾ ಎಂದು ನೆನಪಿಸುತ್ತಿದ್ದಾನೆಯೇ? " ಎಂದು ಕಳವಳ ಗೊಳ್ಳುತ್ತೀರಿ. ಇದನ್ನು ಸೈಕಾಲಜಿಯಲ್ಲಿ information bias effect ಎನ್ನುತ್ತಾರೆ. ನಾವು ಯಾವ ವಿಚಾರವನ್ನು ಮುಖ್ಯವೆಂದು ಪರಿಭಾವಿಸುತ್ತೇವೆಯೋ ಭಾವಿಸುತ್ತೇವೋ, ಅದು ಮರೆಯಲಾಗದ ಒಂದು ಸಂಗತಿಯಾಗಿ ಹೀಗೆ ನಮ್ಮ ಗಮನವನ್ನು ಸೆಳೆಯುತ್ತದೆ. ನಿಮ್ಮ ಒಳಮನಸ್ಸಿಗೆ ಮನೆಕಟ್ಟುವ ಆಸೆ ನುಚ್ಚುನೂರಾದದ್ದು ಮತ್ತು ಮೋಸಕ್ಕೆ ಬಲಿಯಾಗಿ ಹಣ ಕಳೆದುಕೊಂಡಿದ್ದು ಎರಡನ್ನೂ ಮರೆಯಲು ಇಷ್ಟವಿಲ್ಲದೇ ಮುಖ್ಯವಾಗಿ ಕುಳಿತಿದೆ. ಅದಕ್ಕೇ ನಿಮ್ಮ ಗಮನವನ್ನು ಹೀಗೆ ಮತ್ತೆ ಮತ್ತೆ ಹೊಸಮನೆಯ ಸಾಧ್ಯತೆಯ ಬಗ್ಗೆ ಸೆಳೆಯುತ್ತಿದೆ.
ನೀವೀಗ ಮುಖ್ಯವಾಗಿ ನಿಮ್ಮ ಮನಸ್ಸಿಗೆ ಒಂದು ಟ್ರೈನಿಂಗ್ ಕೊಡಬೇಕಾಗಿದೆ. ನಿಮಗಿನ್ನೂ ೩೮ ವರ್ಷ. ಮುಂದಿನ ಬದುಕು ವಿಶಾಲವಾಗಿಯೇ ಇದೆ. ಇನ್ನೊಂದು ನಾಲ್ಕು ವರ್ಷದ ನಂತರ ಮನೆಕಟ್ಟುವ ಸಾಧ್ಯತೆ ಖಂಡಿತಾ ಬರಬಹುದು. ಗಂಡಹೆಂಡತಿ ಇಬ್ಬರೂ ಉದ್ಯೋಗದಲ್ಲಿರುವುದರಿಂದ ಬ್ಯಾಂಕಿನಲ್ಲಿ ಸಾಲ ತೆಗೆದರೂ ತಿಂಗಳು ತಿಂಗಳಿಗೆ ಕಂತು ಕಟ್ಟುವುದು ಕಷ್ಟವೇನಾಗಲಾರದು.
ಇಂಥಾ ಸಕಾರಾತ್ಮಕ ಕನಸುಗಳನ್ನು ನೀವು ಯೋಚಿಸಬೇಕು. ಎಲ್ಲಕ್ಕಿಂತಾ ಮುಖ್ಯವಾಗಿ ಸುತ್ತಲಿನ ಪರಿಸರ ನಿಮಗೆ ಯಾವ ಸಂದೇಶವನ್ನೂ ಕೊಡುತ್ತಿಲ್ಲ ಎನ್ನುವುದನ್ನು ಮನಗಾಣಬೇಕು. ಆಫೀಸಿನಲ್ಲಿ ಸೈಟು ಮನೆ ಬಗ್ಗೆ ಮಾತಾಡುವುದು, ದಿನಪತ್ರಿಕೆಯಲ್ಲಿ ಕರಪತ್ರ ಬರುವುದು, ನೆಂಟರು ಗೃಹಪ್ರವೇಶಕ್ಕೆ ಆಹ್ವಾನಿಸುವುದು, ವರ್ಷಭವಿಷ್ಯದಲ್ಲಿ ಮನೆಯ ಬಗ್ಗೆ ಇರುವುದು ಇವು ಯಾವುವೂ ನಿಮಗಾಗಿಯೆಂದು ಈಗ ಹುಟ್ಟಿದ ವಿಷಯಗಳಲ್ಲ.
ಇವು ದಿನನಿತ್ಯದ ವಿದ್ಯಮಾನಗಳು. ಅದಕ್ಕೂ ನೀವು ಸೈಟಿನ ಬಗ್ಗೆ ಚಿಂತಿಸುವುದಕ್ಕೂ ಆದಷ್ಟು ಥಳಕು ಹಾಕುವುದನ್ನು ಪ್ರಯತ್ನ ಪೂರ್ವಕವಾಗಿ ನಿಲ್ಲಿಸಬೇಕಾಗುತ್ತದೆ. "ಇಂಥಾ ವಿಷಯಗಳಿಗೆ ನಾನು ಹೆಚ್ಚು ಗಮನವನ್ನು ಕೊಡುವುದಿಲ್ಲ, ಇವು ನನಗಾಗಿ ಹುಟ್ಟಿದ ವಿಷಯಗಳಲ್ಲ, ಸಹಜವಾಗಿ ಇಂಥಾ ವಿದ್ಯಮಾನಗಳು ನಮ್ಮ ಸುತ್ತ ನಡೆಯುತ್ತಲೇ ಇರುತ್ತವೆ" ಎಂದು ಪದೇಪದೇ ಹೇಳಿಕೊಳ್ಳುತ್ತಿರಬೇಕು. ನಿಮ್ಮ ಎರಡು ಮಾತು ಸ್ವಲ್ಪ ಗಂಭೀರವಾಗಿದೆ. ರಾತ್ರಿ ನಿದ್ದೆ ಬರುತ್ತಿಲ್ಲವೆನ್ನುವುದು ಮತ್ತು ಊಟ ಬೇಡವೆನಿಸುವುದು ಒಳ್ಳೆಯ ಲಕ್ಷಣವಲ್ಲ. ಈ ಬಗ್ಗೆ ಒಮ್ಮೆ ವೈದ್ಯರನ್ನು ಕಾಣಬೇಕಾಗುತ್ತದೆ. ಅಲಕ್ಷ ಮಾಡಿದರೆ ಒತ್ತಡ ಜಾಸ್ತಿಯಾಗಿ ಮನೋವೈದ್ಯರ ಹತ್ತಿರ ಹೋಗಬೇಕಾಗುತ್ತದೆ. ಈಗ ಜನರಲ್ ಫಿಸಿಷಿಯನ್ ಹತ್ತಿರ ಹೋಗಿ ನಿದ್ದೆ ಬರಲು ಮತ್ತು ಊಟ ಸೇರಲು ಮಾತ್ರೆಗಳನ್ನು ಕೊಡುತ್ತಾರಾ ವಿಚಾರಿಸಿ.
https://www.vijayavani.net/ನ ಅಂಕಣ ವಿಭಾಗದ ನಂದೊಂದು ಕಥೆ ವಿಭಾಗದಲ್ಲಿ ಡಾ.ಶಾಂತಾ ನಾಗರಾಜ್ ಅವರು ಬರೆದಿರುವ ಇತರ ಸಲಹೆಗಳು ಲಭ್ಯ.