ಸಮಾಜಕ್ಕೆ ಮನಸ್ಸಿದೆಯೇ? ಅದರ ಆರೋಗ್ಯವನ್ನು ಯಾರು ಕಾಪಾಡಬೇಕು?

nandondukathe
Published on
ಈ ಶೀರ್ಷಿಕೆಯಲ್ಲಿರುವ ಪ್ರಶ್ನೆ ಬಹುತೇಕರನ್ನು ಕಾಡುತ್ತಿರುತ್ತದೆ. ಮುಂದಿನ ಉದಾಹರಣೆಗಳು ಉತ್ತರವನ್ನು ಕೊಡುತ್ತವೆ.
 ಅದೊಂದು ಶ್ರೀಮಂತರ ಮನೆಯ ಮಗುವಿನ ಹುಟ್ಟಿದಹಬ್ಬದ ಸಮಾರಂಭ. ಎರಡು ಹೆಣ್ಣುಮಕ್ಕಳ ನಂತರ ಹುಟ್ಟಿದ ವಂಶೋದ್ಧಾರಕನಿಗೆ ಹತ್ತು ವರ್ಷವಾಯಿತು ಎಂದು ನೂರಾರು ಸಂಖ್ಯೆಯಲ್ಲಿ ನೆಂಟರು ಇಷ್ಟರನ್ನು ಕರೆದಿದ್ದಾರೆ. ಆ ಮಗುವಿಗೆ ಕ್ರಿಕೆಟ್ ಬಹಳ ಇಷ್ಟವಾದ ಆಟ. ತಾನೂ ಕ್ರಿಕೆಟಿಗನಾಗಬೇಕೆಂದು ಒಂದು ವರ್ಷದಿಂದ ಕ್ರಿಕೆಟ್ ಆಕ್ಯಾಡೆಮಿಗೆ ಸೇರಿ ಎಡಗೈ ಬೋಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಪರಿಣಿತಿಯನ್ನು ಪಡೆಯುತ್ತಿದ್ದಾನೆ. ಸಹಜವಾಗಿ ಈ ಸಮಾರಂಭಕ್ಕೆ ಕ್ರಿಕೆಟ್ ಆಕ್ಯಾಡೆಮಿಯ ಪಡೆ ಸೇರಿದೆ. ಹುಡುಗನ ಸೋದರಮಾವಂದಿರು, ಚಿಕ್ಕಪ್ಪಂದಿರೂ ಅವರ ಮಕ್ಕಳೂ ಬರ್ತ್‍ಡೇ ಕೇಕು ಇಟ್ಟ ದೊಡ್ಡ ಟೇಬಲ್ಲಿನ ಸುತ್ತಾ ನೆರೆದಿದ್ದಾರೆ.

ಹುಡುಗ ಕೇಕ್ ಕಟ್ ಮಾಡಲು ಎಡದ ಕೈಯಲ್ಲಿ ಚಾಕು ಹಿಡಿದು ತಯಾರಾದ! ಸೋದರಮಾವಂದಿರೂ ಚಿಕ್ಕಪ್ಪಂದಿರೂ ಒಟ್ಟಾಗಿ ಕೇಕೆ ಹಾಕುತ್ತಾ " ಲೊಡ್ಡೆ ಲೊಡ್ಡೇ" ಎಂದು ಅರಚಿ ಗಹಗಹಿಸಿ ನಕ್ಕರು!  ಹುಡುಗ ಚಾಕುವನ್ನು ನೆಲಕ್ಕೆಸೆದು ತನ್ನ ರೂಮಿಗೆ ಓಡಿಬಿಟ್ಟ! ಸಮಾರಂಭದ ಸಂಭ್ರಮವೆಲ್ಲಾ ಒಂದೇ ಕ್ಷಣಕ್ಕೆ ಮೂರಾಬಟ್ಟೆಯಾಯಿತು. ಮನೆಯ ಯಜಮಾನನಾದ ಹುಡುಗನ ಅಪ್ಪ ಏನೂ ಹೇಳುವಂತಿಲ್ಲ. ಏಕೆಂದರೆ ಹುಡುಗನನ್ನು ಹಾಗೆ ಮೊದಲಿನಿಂದಲೂ ಗೇಲಿ ಮಾಡುತ್ತಿದ್ದವರು ತನ್ನ ಮತ್ತು ತನ್ನ ಹೆಂಡತಿಯ ತಮ್ಮಂದಿರೇ!!

ಮತ್ತೊಂದು ಪ್ರಸಂಗ : ನಮ್ಮ ಕೌನ್ಸಿಲಿಂಗ್ ಕೇಂದ್ರದಲ್ಲಿ ಮಧ್ಯವಯಸ್ಸಿನ ಆಕೆ ಬಾಡಿದ ಮುಖಹೊತ್ತು ನನ್ನ ಮುಂದೆ ಕುಳಿತಿದ್ದರು. ಆಕೆಯ ಕಿವಿಯ ವಜ್ರದ ಓಲೆಯ ಜೊತೆಜೊತೆಗೇ ಆಕೆಯ ಕಣ್ಣೀರೂ ಫಳಫಳಿಸುತ್ತಿತ್ತು. " ಮೇಡಂ ನನ್ನ ಮಗನಿಗೆ ಸ್ವಲ್ಪ ಬುದ್ದಿ ಹೇಳಿ. ಇರುವ ಇಂಜಿನಿಯರಿಂಗ್ ಕೆಲಸಬಿಟ್ಟು ಮಗಸೊಸೆ ಇಬ್ಬರೂ ನಮ್ಮ ಹಳ್ಳಿಗೇ ಬಂದು ನಮ್ಮ ತೋಟ      ನೋಡಿಕೊಳ್ಳುತ್ತಾರಂತೆ. ಮುವತ್ಮೂರು ವರ್ಷದ ಹಿಂದೆ ನಾನು ಹಳ್ಳಕ್ಕೆ ಬಿದ್ದೆ.

ಈಗ ನನ್ನ ಸೊಸೆಯೂ ನನ್ನ ಹಾಗೇ ಜನರಿಂದ ಅನ್ನಿಸಿಕೊಳ್ಳಬೇಕಾ " ಎಂದು ಬಿಕ್ಕಿಬಿಕ್ಕಿ ಅತ್ತರು. ವಿಷಯ ಏನೆಂದರೆ ಈಕೆ ಪದವೀಧರೆ. ಸಾಕಷ್ಟು ಸ್ಥಿತಿವಂತರಾಗಿದ್ದ ತೌರಿನವರು ತಮ್ಮ ಸ್ಟೇಟಸ್ಸಿಗೆ ತಕ್ಕಂತೆ ವಿದ್ಯಾವಂತ ಹುಡುಗನನ್ನು ಹುಡುಕಿ ಲಗ್ನಪತ್ರಿಕೆಯನ್ನೂ ಮಾಡಿ ಸಾಕಷ್ಟ್ ವರದಕ್ಷಿಣೆ ವರೋಪಚಾರಗಳ ಸಹಿತ ಮದುವೆಯನ್ನು ಗೊತ್ತು ಮಾಡಿದ್ದರು. ಮದುವೆಯ ದಿನ ಇನ್ನೇನು ಲಗ್ನದ ಮುಹೂರ್ತ ಸಮೀಪಿಸುತ್ತಿದೆ, ಹುಡುಗನಾಗಲೇ ಹಸೆಮಣೆಯಲ್ಲಿದ್ದಾನೆ.

ಹುಡುಗಿಯನ್ನು ಕರೆತರಬೇಕು ಎನ್ನುವಾಗ ಛತ್ರದ ಬಾಗಿಲಲ್ಲಿ ಹೆಣ್ಣೊಂದು ಪ್ರತ್ಯಕ್ಷವಾಯಿತು. ಅವಳ ಕೊಂಕಳಲ್ಲಿ ಒಂದು ಹೆಣ್ಣುಮಗು, ಹಿಂದೆ ಇಬ್ಬರು ಪೋಲೀಸ್ ಪೇದೆಗಳು ಅವರ ಕೈಯಲ್ಲಿ ಹುಡುಗನ ಅರೆಸ್ಟ್ ವಾರೆಂಟ್!! ವರದಕ್ಷಿಣೆ ಆಸೆಗೆ ಈ ವರಮಹಾಶಯ ಮೊದಲೊಂದು ರಿಜಿಸ್ಟರ್ ಮದುವೆ ಮಾಡಿಕೊಂಡು, ಒಂದು ಹೆಣ್ಣುಮಗುವಿನ ತಂದೆಯೂ ಆಗಿ, ಇಲ್ಲಿ ಮತ್ತೆ ಹಸೆಮಣೆಯೇರಿದ್ದಾನೆ!! ಹುಡುಗನಿಗೆ ನಿಜವಾದ ಕಂಕಣದ ಬದಲು ಕಬ್ಬಿಣದ ಕಂಕಣ ತೊಡಿಸಿ ಎಳೆದುಕೊಂಡು ಹೋದರು!! ಮದುವೆಮನೆಯ ಸಡಗರವೆಲ್ಲಾ ಅಳಿದು ಶೋಕಸಾಗರವಾಯಿತು. ಹುಡುಗಿಯ ತಂದೆ ಕುಸಿದು ಬಿದ್ದರು. ತಾಯಿ ಭೋರೆಂದು ಅತ್ತರು. ಒಳಗೆ ಅವರದೇ ನೆಂಟರ ಹುಡುಗ ಅಡುಗೆ ಮಾಡುತ್ತಿದ್ದವ ಬಂದು ನೋಡಿ ಪರಿಸ್ಥಿತಿಯನ್ನು ಅರಿತು, ಹುಡುಗಿಯ ತಂದೆಯ ಮುಂದೆ ನಿಂತು " ನಾನು ಅಡುಗೆ ವೃತ್ತಿಯನ್ನು ಮಾಡುತ್ತಿದ್ದೇನೆ. ಇದರಲ್ಲಿ ಸಂಪಾದನೆ ಚೆನ್ನಾಗಿಯೇ ಇದೆ.

ನನಗೆ ಒಳ್ಳೆಯ ಬೇಡಿಕೆಯೂ ಇದೆ. ನಿಮ್ಮ ಮಗಳನ್ನು, ನೀವೆಲ್ಲಾ ಒಪ್ಪುವುದಾದರೆ ಇದೇ ಲಗ್ನದಲ್ಲಿ  ಮದುವೆಯಾಗುತ್ತೇನೆ " ಎಂದ. ಒಂದು ಹತ್ತು ನಿಮಿಷ ವಿಚಾರಗಳ ವಿನಿಮಯಗಳಾಗಿ ಹುಡುಗಿಯೂ ಒಪ್ಪಿದ ಮೇಲೆ ಶುಭಕಾರ್ಯ ನಡೆದೇ ಹೋಯಿತು. ತನಗಿಂತಾ ಕಡಿಮೆ ಓದಿದ್ದರೂ, ಅಡುಗೆಯವರಾಗಿದ್ದರೂ, ಆತನ ಒಳ್ಳೆಯ ಗುಣ ಮತ್ತು ಆತನ ಆರ್ಥಿಕ ಸುಸ್ಥಿತಿಗಳ ಕಾರಣವಾಗಿ ಆಕೆ ಒಳ್ಳೆಯ ಬದುಕನ್ನೇ ನಡೆಸಿದ್ದಾರೆ. ಇಬ್ಬರು ಮಕ್ಕಳೂ ಒಳ್ಳೆಯ ವಿದ್ಯಾವಂತರಾಗಿದ್ದಾರೆ. ಮಗಳನ್ನು ಇಂಜಿನಿಯರ್ ಹುಡುಗನಿಗೇ ಕೊಟ್ಟು ಮದುವೆ ಮಾಡಿದ್ದಾರೆ. ಮಗನೂ ತನ್ನಷ್ಟೇ ಓದಿನ ಮತ್ತು ಉದ್ಯೋಗಸ್ಥೆಯಾದ ಹುಡುಗಿಯೊಂದಿಗೆ ಮದುವೆಯಾಗಿ ಇಬ್ಬರೂ ನಗರದಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದಾಗಲೇ ನೌಕರಿಯನ್ನು ಬಿಟ್ಟು ತಮ್ಮ ತೋಟ ನೋಡಿಕೊಳ್ಳಲು ಹಳ್ಳಿಗೆ ಸ್ವಂತಯಿಚ್ಛೆಯಿಂದಲೇ ಬಂದಿದ್ದಾರೆ. ಆದರೆ ಇದು ಈ ತಾಯಿಗೆ ಆಘಾತವನ್ನೇ ನೀಡಿದೆ. ಏಕೆಂದರೆ ತಮ್ಮದಲ್ಲದ ತಪ್ಪಿಗೆ ( ತಾವು ನೋಡಿ ಲಗ್ನಪತ್ರಿಕೆಯಲ್ಲಿ ಬೆರಳಿಗೆ ಉಂಗುರವನ್ನು ತೊಡಿಸಿಕೊಂಡು ಅವನೇ ನನ್ನ ಮನದನ್ನ ಎಂದು ಕನಸು ಕಾಣುತ್ತಿದ್ದ ಹುಡುಗಿ) ಅಪರಿಚಿತನನ್ನು ಮದುವೆಯಾಗಿ, ಅನೇಕರಿಂದ ’ಅಡುಗೆಯವನ ಹೆಂಡತಿ’ ಎಂದು ಮೂದಲಿಸಿಕೊಂಡು ಅವಮಾನಗಳನ್ನು ನುಂಗಿಕೊಂಡಿದ್ದಾರೆ. ಈಗ ಮಗನೂ ಹಳ್ಳಿಸೇರಿದರೆ ತನ್ನದೇ ಪಾಡು ತನ್ನ ಸೊಸೆಗೂ ಬರುತ್ತದೆ ಎಂದು ಹೆದರಿದ್ದಾರೆ!!

ಮೂರನೆಯ ಪ್ರಸಂಗ : ಇವರು ನನ್ನ ಸ್ನೇಹಿತರು. ಸುಹೃದಯಿ. ಯಾರಿಗಾದರೂ ಯಾವಹೊತ್ತಿನಲ್ಲಿ ಬೇಕಾದರೂ ಸಹಾಯಮಾಡಲು ಸಿದ್ಧರಿರುವವರು. ಅವರ ಪಕ್ಕದ ಮನೆಯನ್ನು ಒಂದು ಶ್ರೀಮಂತ ಕುಟುಂಬ ಕೊಂಡುಕೊಂಡು, ಆಧುನಿಕ ಸವಲತ್ತುಗಳನ್ನೆಲ್ಲಾ ಅಳವಡಿಸಿಕೊಂಡು ವಾಸಿಸಲು ಬಂದಾಗ ಅಕ್ಕಪಕ್ಕದಲ್ಲಿ ಯಾರಿದ್ದಾರೆ ಎಂದೂ ಗಮನಿಸಲಿಲ್ಲವಂತೆ!!  ಇದು ಬೆಂಗಳೂರಿನ ರೋಗವೇ ಬಿಡಿ. ಒಮ್ಮೆ ಮನೆಯ ಯಜಮಾನ ಪರದೇಶಕ್ಕೆ ಹೋಗಿದ್ದಾಗ ಮನೆಯ ಮುಂದೇ ಆ ಮನೆಯ ಮಗ ಬೈಕ್ ನಿಲ್ಲಿಸುತ್ತಿದ್ದಾಗ ಆಕ್ಸಿಡೆಂಟ್ ಆಗಿ ಬೈಕ್ ಪಕ್ಕದಲ್ಲಿದ್ದ ಕಲ್ಲಿಗೆ ಗುದ್ದಿದ್ದರ ಪರಿಣಾಮವಾಗಿಯೂ ಹುಡುಗ ಹೆಲ್ಮೆಟ್ ಹಾಕಿರದ ಕಾರಣವಾಗಿಯೂ ಅವನ ತಲೆ ಎದುರಿನ ಕಲ್ಲುಗೋಡೆಗೆ ಬಡಿದು ವಿಪರೀತ ರಕ್ತಸ್ರಾವವಾಯಿತು. ತಕ್ಷಣ ನಮ್ಮ ಸ್ನೇಹಿತರು ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರಿಂದ ಹುಡುಗನ ಪ್ರಾಣ ಉಳಿಯಿತು. ತಿಂಗಳುಗಟ್ಟಲೇ ಆಸ್ಪತ್ರೆಯಲ್ಲಿ ಇದ್ದು ಚಿಕಿತ್ಸೆ ಪಡೆದು ಆರೋಗ್ಯವಂತನಾಗಿ ಮನೆಗೆ ಬಂದ. ಈ ಸಂತೋಷಕ್ಕೆ ಮನೆಯಲ್ಲಿ ಒಂದು ಪೂಜೆ ಇಟ್ಟುಕೊಂಡು, ಅವನ ಜೀವ ಉಳಿಸಿದ ನಮ್ಮ ಸ್ನೇಹಿತರನ್ನೂ ಆಮಂತ್ರಿಸಿದರು. ಆ ಮನೆಯಾಕೆ ತಮ್ಮೆಲ್ಲಾ ಬಂಧು ಬಳಗಕ್ಕೆ ಇವರನ್ನು ಪರಿಚಯಿಸುತ್ತಾ " ನೋಡಿ ಇವರಿಂದಲೇ ನಮ್ಮ ಕುಮಾರಕಂಠೀರವ ಜೀವಂತ ಉಳಿದದ್ದು. ಒಂದೇಒಂದು ಕ್ಷಣ ತಡವಾಗಿದ್ದರೂ ಅವನು ಉಳಿಯುತ್ತಿರಲಿಲ್ಲ. ಇವರು ಮುಸ್ಲಿಂ ಆದರೂ ತುಂಬಾ ಒಳ್ಳೆಯವರು " ಎಂದರಂತೆ!! ತಕ್ಷಣ ಎಲ್ಲರೂ ಚಪ್ಪಾಳೆ ತಟ್ಟಿದರಂತೆ!!
ಮೇಲಿನ ಪ್ರಸಂಗಗಳನ್ನು ಒಮ್ಮೆ ವಿಶ್ಲೇಷಣೆ ಮಾಡಿ. ಎಡಗೈ ಬಳಸುವುದು, ಅಡುಗೆಯವನ ಹೆಂಡತಿಯಾಗುವುದು,  ತುಂಬಾ ವಿದ್ಯಾವಂತನಾದರೂ ಕೃಷಿಕನಾಗುವುದು, ಮುಸ್ಲಿಂ ಆಗಿರುವುದು ’ ಅಪರಾಧ ’ ಎಂದು ಭಾವಿಸುವ ಸಮಾಜದ ಮಾನಸಿಕ ಆರೋಗ್ಯ ’ ಪಾಸಿಟೀವ್ ’ ಎಂದು ನಿಮಗನಿಸುತ್ತದೆಯೇ? ನಮ್ಮ ನಿಮ್ಮೆಲ್ಲರಲ್ಲೂ ಇಂಥಾ ಎಷ್ಟೋ ನೆಗೆಟೀ‍ವ್‍ಗಳಿವೆ. ಏಕಾಂತದಲ್ಲಿ ಕುಳಿತು ಒಮ್ಮೆ ಪಟ್ಟಿಮಾಡಿಕೊಳ್ಳಿ. ಸಾಧ್ಯವಾದರೆ ಬದಲಾಯಿಸಿಕೊಳ್ಳಲು ಪ್ರಯತ್ನಿಸಿ.
ನಿಮ್ಮಲ್ಲೂ ಇಂಥ ಸಮಸ್ಯೆಗಳು ಇವೆಯೆ? ಮಾನಸಿಕವಾಗಿ ತೊಂದರೆಗೆ ಒಳಗಾಗಿರುವಿರಾ? ಹಾಗಿದ್ದರೆ ನಿಮ್ಮ ಪ್ರಶ್ನೆಗೆ ಡಾ.ಶಾಂತಾ ನಾಗರಾಜ್‌ ಅವರು ಉತ್ತರಿಸುತ್ತಾರೆ. ನಿಮ್ಮ ಪ್ರಶ್ನೆಗಳನ್ನು ಕಳುಹಿಸಬೇಕಾದ ಇ-ಮೇಲ್‌ ಐಡಿ: shanthanag@gmail.com / lalitha.vijayavani@gmail.com vijayavani.net ನ ಅಂಕಣ ವಿಭಾಗದ ನಂದೊಂದು ಕಥೆ ವಿಭಾಗದಲ್ಲಿ ಡಾ.ಶಾಂತಾ ನಾಗರಾಜ್‌ ಅವರು ಬರೆದಿರುವ ಇತರ ಲೇಖನಗಳು ಲಭ್ಯ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net