

ಪ್ರೀತಿಗೆ ಎಷ್ಟು ಮುಖಗಳು...? ಈ ಪ್ರಶ್ನೆ ವಿಚಿತ್ರವೆನಿಸುತ್ತದೆ ಅಲ್ಲವೇ? ನಿಜ, ಆದರೆ ಪ್ರೀತಿ ಎನ್ನುವ ಮನುಷ್ಯನ ಒಂದು ನಡವಳಿಕೆಯನ್ನು ವೈಜ್ಞಾನಿಕವಾಗಿ ಅರ್ಥಮಾಡಿಕೊಳ್ಳಬೇಕಾದರೆ ಇಂಥಾ ಪ್ರಶ್ನೆಗಳು ಅನಿವಾರ್ಯವಾಗಿತ್ತವೆ. ಪ್ರೀತಿ ಎಂದರೇನು? ಅದರಿಂದ ಏನು ಸಿಗುತ್ತದೆ? ಈ ಪ್ರಶ್ನೆಗಳಿಗೆ ಸರಳವಾಗಿ ಹೀಗೆ ಉತ್ತರಿಸಬಹುದು. ಒಂದು ಮನುಷ್ಯ ಜೀವಿಗೆ ಮತ್ತೊಂದು ಮನುಷ್ಯ ಜೀವಿಯ ಆಪ್ತ ಭಾವ ಉಂಟಾಗುವುದೇ ಪ್ರೀತಿ. ಮತ್ತು ಇದರಿಂದ ಇಬ್ಬರಿಗೂ 'ಸುಖ' ಸಿಗುತ್ತದೆ.
ಮನಃಶಾಸ್ತ್ರದ ಪಿತಾಮಹ ಸಿಗ್ಮಂಡ್ ಫ಼್ರಾಯ್ಡನ ಪ್ರಕಾರ ಈ ಸುಖ ಮನುಷ್ಯನಿಗೆ ಹುಟ್ಟಿದ ಘಳಿಗೆಯಿಂದ ಸಿಗುತ್ತದೆ. ಮಗು ಹುಟ್ಟಿದ ತಕ್ಷಣ ತಾಯಿಯ ಹಾಲನ್ನು ಚೀಪಲು ತೊಡಗುತ್ತದೆ. ಈ ಕ್ರಿಯೆ ಮಗುವಿಗೆ ಹೊಟ್ಟೆ ತುಂಬಿಸುವುದಷ್ಟೇ ಅಲ್ಲ, ಮಗುವಿಗೊಂದು ತಾಯಿಯ ಆಪ್ತತೆ ಮತ್ತು ಪ್ರೀತಿಯ ಅನುಭವವಾಗಿ ಸುಖವೂ ಸಿಗುತ್ತದೆ. ಹೀಗೆ ಸಾಕಷ್ಟು ಸುಖ ಸಿಕ್ಕ ಮಕ್ಕಳುಮುಂದೆ ಶಾಂತಚಿತ್ತರಾಗಿ ವರ್ತಿಸುತ್ತಾರೆ ಎಂದು ಮನಃಶಾಸ್ತ್ರ ಹೇಳುತ್ತದೆ. ಅದ್ದರಿಂದಲೇ ಪ್ರಸೂತಿ ತಜ್ಞರು 'ಮಗುವಿಗೆ ಎದೆಹಾಲನ್ನೇ ಕೊಡಿ, ಬಾಟ್ಲಿ ಹಾಲನ್ನು ಕೊಡಬೇಡಿ ಮತ್ತು ಎರಡು ವರ್ಷದವರೆಗೆ ಹಾಲನ್ನು ಕುಡಿಸಿ' ಎಂದು ಸಲಹೆ ನೀಡುತ್ತಿದ್ದಾರೆ.
ಹಾಲು ಕುಡಿಯುದನ್ನು ಬಿಟ್ಟ ನಂತರ ಮಗು ಸುಖಿಸುವುದು, ತನ್ನಪ್ಪ ಅಮ್ಮನ ತೊಡೆಯ ಮೇಲೆ ಕುಳಿತು ಲಲ್ಲೆಗರೆಯುತ್ತಾ. ೨ರಿಂದ ೬ ವರ್ಷದ ವರೆಗೆ ಮಕ್ಕಳೀಗೆ ಅಪ್ಪ ಅಮ್ಮನ ತೊಡೆಯ ಮೇಲೆ ಕುಳಿತುಕೊಳ್ಳುವ ಕ್ರಿಯೆ ಸುಖವನ್ನು ತರುತ್ತದೆ. ಇದನ್ನು ಮನಃಶಾಸ್ತ್ರದಲ್ಲಿ 'ಸ್ಪರ್ಶಸುಖ' ವೆನ್ನುತ್ತಾರೆ. ಇದೂ ಸಹ ಸಮರ್ಪಕವಾಗಿ ಸಿಕ್ಕ ಮಗು ಸದಾ ನೆಮ್ಮದಿಯಿಂದ ಇರುತ್ತದೆ. ಏಳು ವರ್ಷದ ಹೊತ್ತಿಗೆ ತೊಡೆಯ ಮೇಲೆ ಕುಳಿತುಕೊಳ್ಳುವ ಕ್ರಿಯೆ ಮಗುವಿಗೇ ನಾಚಿಕೆಯನ್ನು ತರಿಸುತ್ತದೆ. ' ತಾನೀಗ ದೊಡ್ಡವನಾಗಿದ್ದೇನೆ ' ಎನ್ನುವ ಭಾವ ಬಲಿಯುತ್ತಿರುತ್ತದೆ. ಆದರೂ ಆ ವಯಸ್ಸಿನಲ್ಲೂ ' ಈ ಪ್ರೀತಿ ಎನ್ನುವ ಸುಖ ' ಬೇಕಲ್ಲ? ಆಗ ಮಗು ಚೆನ್ನಾಗಿ ಓದುವ, ಅಥವಾ ತನ್ನೊಳಗಿರುವ ಚಿತ್ರಕಲೆಯನ್ನೋ, ಸಂಗೀತಕಲೆಯನ್ನೋ ಆಟೋಟಗಳ ಸಾಮರ್ಥ್ಯವನ್ನೋ ಪ್ರದರ್ಶಿಸಿ ಎಲ್ಲರಿಂದ ಅದರಲ್ಲೂ ಹೆತ್ತವರಿಂದ ಮೆಚ್ಚುಗೆಯನ್ನು ಗಳಿಸುವ ಪ್ರಯತ್ನ ಮಾಡುತ್ತದೆ. ಇದು 'ವಾಚಿಕಸುಖ'.
ಇದು ಅಲ್ಪಸ್ವಲ್ಪ ಸಿಕ್ಕರೂ ಮಗು ನೆಮ್ಮದಿಯ ಸ್ವಭಾವವನ್ನು ಪಡೆಯುತ್ತದೆ. ತೀರಾ ಎಲ್ಲದರಲ್ಲೂ ನಿರಾಸೆಯಾದರೆ ಮಗುವಿನ ಮನಸ್ಸು ಕ್ಷುದ್ರವಾಗುತ್ತದೆ. ಹದಿವಯಸ್ಸಿಗೆ ಹೆಣ್ಣಿಗೆ ಗಂಡು, ಗಂಡಿಗೆ ಹೆಣ್ಣು ಆಕರ್ಷಿತವಾಗುವುದೇ ' ಲೈಂಗಿಕ ಸುಖ'ಕ್ಕೆ ತಳಹದಿಯಾಗುತ್ತದೆ. ನಂತರ ಇದರ ಜೊತೆಗೆ ' ತಿನ್ನುವ ಸುಖ, ನೋಡುವ ಸುಖ, ಊರೂರು ಸುತ್ತುವ ಸುಖ' ಮುಂತಾದ ಸುಖಗಳು ಸೇರಿಕೊಂಡು ಮನುಷ್ಯನ ಜೀವನ ವರ್ಣಮಯವಾಗುತ್ತದೆ.
ಈ ಮೇಲಿನ ವೈಜ್ಞಾನಿಕ ಸತ್ಯಗಳು ತಂದೆತಾಯಿಯರಿಗೆ ಗೊತ್ತಿದ್ದರೆ ಮಕ್ಕಳನ್ನು ಸರಿಯಾದ 'ಹದ' ದಲ್ಲಿ ಸಾಕುತ್ತಾರೆ. ದುರಂತದ ವಿಶ್ಹಯವೆಂದರೆ ಅನೇಕ ತಂದೆತಾಯಿಯರಿಗೆ ಇವು ಯಾವುದೂ ಗೊತ್ತಿಲ್ಲದಿರುವುದು, ಮತ್ತು ಮಕ್ಕಳನ್ನು, ಅವರ ಮನಃಸ್ಥಿತಿಯನ್ನು ಅರಿಯದೇ ತಮಗೆ ಬೇಕಾದಂತೆ ಒರಟಾಗಿಯೋ, ಕೋಪ ಪ್ರದರ್ಶಿಸಿಯೋ ತಿದ್ದಿ ತೀಡಲು ಪ್ರಯತ್ನಿಸುವುದು, ಮತ್ತು ಹದಿಹರೆಯಕ್ಕೆ ಬಂದಾಗ ಅವರ ವರ್ತನೆ ವಿಚಿತ್ರವಾಗಿ ಕೌನ್ಸಿಲಿಂಗ್ ಕೇಂದ್ರಗಳಿಗೆ ಎಡೆತಾಕುವುದು. ಇದು ಇತ್ತೀಚೆಗೆ ಎಲ್ಲೆಡೆಯಲ್ಲಿ ನಡೆಯುತ್ತಿರುವ ಸಂಗತಿಗಳು. ಬಾಲ್ಯದಲ್ಲಿ 'ಪೇರೆಂಟಿಂಗ್' ಎನ್ನುವುದು ಸ್ವಲ್ಪ ಶ್ರುತಿತಪ್ಪಿದರೂ ಮುಂದೆ ಮಕ್ಕಳ ಭವಿಷ್ಯ ಕತ್ತಲಲ್ಲಿ ಸಾಗುವುದು ಅನಿವಾರ್ಯವೇ ಆಗಿಬಿಡುತ್ತದೆ.
ಈಗ ಹದಿಹರೆಯದ ಪ್ರೀತಿಯ ವಿಚಾರಕ್ಕೆ ಬರೋಣ. ಇಲ್ಲೂ ಸಹ ಮನಃಶಾಸ್ತ್ರ ಹಲವು ಬಗೆಯ ನಡವಳಿಕೆಯನ್ನು ಗುರುತಿಸುತ್ತದೆ. ಮೊನ್ನೆ ಪತ್ರಿಕೆಯಲ್ಲಿ ಒಂದು ಸುದ್ದಿ ಬಂದಿತ್ತು. ' ಸರ್ಕಾರಿ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿಯ ಮೂವರು ಹುಡುಗಿಯರು ನಾಪತ್ತೆ'ಯಾದ ಸುದ್ದಿ. ಅವರು ಮೂರುದಿನ ಬಿಟ್ಟು ಯಾವುದೋ ಬಸ್‍ಸ್ಟಾಂಡಿನಲ್ಲಿ ಮೂರುವ ಹುಡುಗರೊಂದಿಗೆ ಸಿಕ್ಕಿಬಿದ್ದರು. ಆ ಮೂರು ಹುಡುಗರೂ ಸಹ ಹತ್ತನೇ ತರಗತಿಯಲ್ಲಿ ಬೇರೆ ಶಾಲೆಯಲ್ಲಿ ಓದುತ್ತಿದ್ದವರೇ! ಇದನ್ನು ಯಾವ ಪ್ರೀತಿಯೆಂದು ಕರೆಯಬೇಕು? ಮನಃಶಾಸ್ತ್ರದಲ್ಲಿ ಇದಕ್ಕೆ 'ಇನ್‍ಫ಼್ಯಾಕ್ಷುಯೇಷನ್'ಎನ್ನುತ್ತಾ
ಒಟ್ಟಿನಲ್ಲಿ ಮನಸ್ಸಿನಲ್ಲಿ ಹುಟ್ಟಿದ ' ಆಸೆ 'ಎನ್ನುವುದನ್ನು ಆ ತಕ್ಷಣ ಪ್ರಯೋಗ ಮಾಡಿ ಸುಖಿಸಿಬಿಡಬೇಕೆನ್ನುವ ಕಾತರ ಮತ್ತು ಸಂತೋಷ!! ಇದು ತೀರಾ ಅಪಕ್ವವಾದ ವಯಸ್ಸಾದ ಕಾರಣ ಇಂಥಾ ನಡವಳಿಕೆಗಳಿಂದ ಆ ಮಕ್ಕಳಿಗೂ ಮತ್ತು ಹೆತ್ತವರಿಗೂ ಹಾಗೂ ಸಮಾಜಕ್ಕೂ ಒಳಿತೇನೂ ಆಗುವುದಿಲ್ಲ. ಬದಲಾಗಿ ಮತ್ತಷ್ಟು ಜಂಜಾಟಗಳನ್ನು ಮೈಮೇಲೆ ಎಳೆದುಕೊಂಡಂತಾಗಿತ್ತದೆ ಅಷ್ಟೆ. ಈವಯಸ್ಸಿನ ಹೆಣ್ಣುಮಕ್ಕಳದೇಹ 'ಋತುಮತಿಯ ಅನುಭವ ಮತ್ತು ಸರಿಯಾದ ಹದದ ಗರ್ಭಕೋಶ'ವಿರುವ ಕಾರಣ ಅವರು ಗರ್ಭಿಣಿಯರಾಗಿಯೂ ಬಿಡಬಹುದು. ಆಗ ಅವರಿಗೂ, ಹೆತ್ತವರಿಗೂ, ಮತ್ತು ಶಾಲೆಯಲ್ಲೂ ಏನೆಲ್ಲಾ ಅವಾಂತರಗಳು ಆಗಬಹುದು ಎನ್ನುವುದನ್ನು ಎಲ್ಲರೂ ಊಹಿಸಿಕೊಳ್ಳಬಹುದು. ಇದು 'ಟೆಂಡರ್' ವಯಸ್ಸಿನ ಮತ್ತು ಅನನುಭವಿಗಳೂ, ಭವಿಷ್ಯದ ಬಗ್ಗೆ ಕಾಳಜಿಯಿಲ್ಲದವರೂ ಮತ್ತು ತಮ್ಮನ್ನು ತಾವು ನಿಯಂತ್ರಿಸಿಕೊಳ್ಳಲಾಗದವರೂ ಮಾಡಿಕೊಳ್ಳುವ ಉಪದ್ವಾಪ!
ಇನ್ನೊಂದು ಬಗೆಯ ಪ್ರೀತಿಯಿದೆ. ಇದನ್ನು ಮನಃಶಾಸ್ತ್ರ ' ವಿಚಿತ್ರ ಪ್ರೀತಿ 'ಎನ್ನುವ ವಿಶ್ಲೇಷಣೆಯಲ್ಲಿ ಗುರುತಿಸುತ್ತದೆ. ಇದಕ್ಕೊಂದು ಉದಾಹರಣೆ ಕೊಟ್ಟರೆ ನೀವೂ ಸಹ ನಿಮ್ಮ ಸುತ್ತಲಿರುವ ಜನರಲ್ಲಿ ಇಂಥವರನ್ನು ಗುರುತಿಸಬಹುದು. ಆಕೆ ಒಬ್ಬ ಮಧ್ಯವಯಸ್ಸಿನ ತಾಯಿ ಗಂಡ ಮದುವೆಯಾದ ಕೆಲವೇ ವರ್ಷಗಳಲ್ಲಿ ನಿಧನರಾದರು. ಇದ್ದ ಒಬ್ಬಳೆ ಮಗಳನ್ನು ತಾವು ಬ್ಯಾಂಕಲ್ಲಿ ಕೆಲಸ ಮಾಡುತ್ತಾ ತಂದೆಯಾಗಿ, ತಾಯಿಯಾಗಿ ಜತನದಿಂದ ಸಾಕಿದರು. ಪದವಿಧರೆಯನ್ನಾಗಿಸಿದರು. ಅವರು ಸಸ್ಯಾಹಾರಿಗಳು. ಈ ಹುಡುಗಿ ಕಾಲೇಜಿನಲ್ಲಿರುವಾಗಲೇ ಹೆಚ್ಚು ಕಡಿಮೆ ತನ್ನ ತಂದೆಯವಯಸ್ಸಿನ, ಏನೇನೂ ಕೆಲಸವಿಲ್ಲದೇ, ರಾಜಕಾರಿಣಿಗಳ ಜೊತೆ ಓಡಾಡುತ್ತಾ ತಾನೂ ರಾಜಕಾರಿಣಿಯಂತೆ ಪೋಸುಕೊಡುತ್ತಾ ನಿಷ್ಪ್ರಯೋಜಕನೊಬ್ಬನನ್ನು ಪ್ರೀತಿಸಿ, ತನ್ನ ಪದವಿ ಮುಗಿಯುತ್ತಲೇ ಮನೆಯೊಂದ ಓಡಿಹೋಗಿ ಅವನನ್ನು ಮದುವೆಯಾಗಿಬಿಟ್ಟಳು!! ಈ ತಾಯಿಗೆ ಆಘಾತವೋ ಆಘಾತ! ಇಬ್ಬರೂ ನವದಂಪತಿಗಳು ವೈಭವದ ಬದುಕಿಗೆ ಸಿಕ್ಕಸಿಕ್ಕ ಕಡೆಯೆಲ್ಲಾ ಸಾಲ ಮಾಡಿ ಕಡೆಗೆ ತಾಯಿಯ ಮಡಲಿಗೆ ಬಂದು ಬಿದ್ದಳು. ಅಕ್ಕಪಕ್ಕದವರ ಮುಂದೆ ಮಾನಹೋಗುತ್ತದೆ ಎನ್ನುವ ಒಂದೇ ಕಾರಣಕ್ಕೆ ತಾಯಿ ಅವಳನ್ನೂ ಅಳಿಯನನ್ನೂ ಮನೆಯಲ್ಲಿಟ್ಟುಕೊಂಡು
ಹೆಣಗಾಡುತ್ತಿದ್ದಾರೆ. ಆಕೆ ಕೆಲಸಕ್ಕೆ ಹೋದ ಸಮಯದಲ್ಲಿ ಮನೆಯಲ್ಲಿ ಮಾಂಸ ಮೀನು ಬೇಯುತ್ತದೆ!! ಅಳಿಯನಿಗೋ ಬೆಳಗಿನ ಉಪಹಾರಕ್ಕೂ ಅವೆಲ್ಲಾ ಬೇಕು!! ಈ ಸಾತ್ವಿಕ ತಾಯಿಗೆ ಮನೆಯೇ ಪರಕೀಯವಾಗಿಬಿಟ್ಟಿದೆ!! ಡಿಪ್ರೆಷನ್ ಕಾಡುತ್ತದೆ. ನನ್ನ ಮುಂದೆ ಕುಳಿತು ಅಳುತ್ತಾರೆ!! ಇದಕ್ಕೆ ಸೈಕಾಲಜಿ ಎರಡು ಕಾರಣಗಳನ್ನು ಕೊಡುತ್ತದೆ. ಬಾಲ್ಯದಿಂದ ತಂದೆಯ ಪ್ರೀತಿಯಿಂದ ವಂಚಿತರಾದವರು ತಮ್ಮ ತಂದೆವಯಸ್ಸಿನ ವ್ಯಕ್ತಿಯನ್ನು ಪ್ರೀತಿಸುವುದು ಮತ್ತು ತಾಯಿಯೂ ಉದ್ಯೋಗದ ನಿಮಿತ್ತ ಪೂರ್ಣಾವಧಿಯ ತಾಯ್ತನ ಮಾಡಿಲ್ಲವಾದ ಕಾರಣ ತನ್ನ ಭವಿಷ್ಯದ ಬಗ್ಗೆ ಯಾವ ಕಾಳಜಿಯೂ ಇಲ್ಲದೇ ಸಿಕ್ಕವರನ್ನು ಪ್ರೀತಿಸುವುದೂ ಸಹ ಇಂಥಾ ಹೆಣ್ಣಿಗೆ ಅನಿವಾರ್ಯವಾಗಿಬಿಡುತ್ತದೆ. ಪಾಶ್ಚಾತ್ಯರಲ್ಲಿ ವಿಚ್ಛೇದದ ಕಾರಣ ಬಾಲ್ಯದಿಂದಲೂ ತಂದೆಯಿಲ್ಲದೇ ಬೆಳೆಯುವ ಹೆಣ್ಣುಗಳು ಹೀಗೆ ತಂದೆವಯಸ್ಸಿನ ಗಂಡಸರನ್ನು ಪ್ರೀತಿಸುವುದು 'ಕಾಮನ್' ಎನ್ನುವ ಮಟ್ಟ ಮುಟ್ಟಿದೆಯಂತೆ!!
ಸಹಜ ಪ್ರೀತಿ, ನಿರಂತರತೆಯನ್ನು ಕಾಯ್ದುಕೊಳ್ಳುವ ಪ್ರೀತಿ, ತಮ್ಮಿಬ್ಬರ ಬದುಕಿನ ಭವಿಷ್ಯದ ಬಗ್ಗೆ, ತಮ್ಮ ಆರ್ಥಿಕ ಸ್ಥಿತಿಗತಿಗಳ ಬಗ್ಗೆ, ತಮ್ಮತಮ್ಮ ಸ್ವಭಾವಗಳ ಹೊಂದಾಣಿಕೆಯ ಬಗ್ಗೆ, ತಮ್ಮ ದಾಂಪತ್ಯ ಕೊನೆಯವರೆಗೂ ಚೆನ್ನಾಗಿರಬೇಕೆಂಬ ಮುನ್ನೆಚ್ಚರಿಕೆಯನ್ನು ಹೊಂದಿದ ಪ್ರೀತಿಯೇ ಪ್ರೌಢ ಪ್ರೀತಿ. ಇದು ಗಂಡು ಹೆಣ್ಣು ಇಬ್ಬರಿಗೂ ವಯಸ್ಸು ೨೫ ಆದನಂತರ ಪ್ರೀತಿ ಹುಟ್ಟಿದರೆ ನಿರೀಕ್ಷಿಸಬಹುದಾದ ನಡವಳಿಕೆಗಳು. ಇಂಥಾ ಪ್ರೀತಿಯ ಸುಖ ನಿರವಧಿಯದಾಗಿರುತ್ತದೆ. ಮತ್ತು ಕಡೆಯವರೆಗೆ ಈ ಜೋಡಿ ತಮ್ಮ ಬಾಳನ್ನು ಚಂದಮಾಡಿಕೊಳ್ಳುವತ್ತ ಶ್ರಮಿಸುತ್ತಾರೆ. ಪ್ರೀತಿಸಿ ಮದುವೆಯಾದರೂ ಅಥವಾ ಮದುವೆಯಾದ ಮೇಲೆ ಪ್ರೀತಿಸಿದರೂ ಈ ನಡವಳಿಕೆಯಲ್ಲಿ ವ್ಯತ್ಯಾಸವೇನೂ ಇರುವುದಿಲ್ಲ. ದಂಪತಿಗಳ ನಿಜವಾದ ಅರ್ಥ ಹುಟ್ಟುವುದು ಇಂಥಾ ಸಂಬಂಧದಲ್ಲಿ!!
ನಿಮ್ಮಲ್ಲೂ ಇಂಥ ಸಮಸ್ಯೆಗಳು ಇವೆಯೆ? ಮಾನಸಿಕವಾಗಿ ತೊಂದರೆಗೆ ಒಳಗಾಗಿರುವಿರಾ? ಹಾಗಿದ್ದರೆ ನಿಮ್ಮ ಪ್ರಶ್ನೆಗೆ ಡಾ.ಶಾಂತಾ ನಾಗರಾಜ್ ಅವರು ಉತ್ತರಿಸುತ್ತಾರೆ. ನಿಮ್ಮ ಪ್ರಶ್ನೆಗಳನ್ನು ಕಳುಹಿಸಬೇಕಾದ ಇ-ಮೇಲ್ ಐಡಿ: shanthanag@gmail.com / lalitha.vijayavani@gmail.com
vijayavani.net ನ ಅಂಕಣ ವಿಭಾಗದ ನಂದೊಂದು ಕಥೆ ವಿಭಾಗದಲ್ಲಿ ಡಾ.ಶಾಂತಾ ನಾಗರಾಜ್ ಅವರು ಬರೆದಿರುವ ಇತರ ಲೇಖನಗಳು ಲಭ್ಯ.