

ವಾಷಿಂಗ್ಟನ್: ಕಲ್ಲಿನಿಂದ ಸಂಗೀತನಾದ ಹೊರಹೊಮ್ಮುವುದನ್ನು ಕೇಳಿರುವಿರಿ. ನೀರಿನ ಲೋಟದಲ್ಲಿ ಜಲತರಂಗ ನುಡಿಸುವುದನ್ನೂ ಕೇಳಿದ್ದೀರಿ. ಕೈಗೆ ಸಿಕ್ಕಿರುವ ವಸ್ತುಗಳಿಂದೇ ಸುಶ್ರಾವ್ಯ ನಾದವನ್ನು ಹೊರಡಿಸುವ ಅಪರೂಪದ ಕಲಾವಿದರನ್ನೂ ಜಾಲತಾಣಗಳಲ್ಲಿ ಆಗಾಗ್ಗೆ ವೀಕ್ಷಿಸುತ್ತಿರುವಿರಿ.
ಆದರೆ ಹಣ್ಣಿನಿಂದ ಸಂಗೀತ ಹೊರಹೊಮ್ಮುತ್ತದೆ ಎಂದರೆ ನಂಬುವಿರಾ? ನಂಬುವುದೇನು ಬಂತು. ಇಲ್ಲಿಯ ವಿಡಿಯೋ ನೋಡಿದರೆ ನಂಬಲೇಬೇಕು.
ಕಲ್ಲಂಗಡಿ, ಕರಬೂಜ ಮತ್ತು ಕಿವಿಫ್ರೂಟ್‌ನಿಂದ ಸಂಗೀತದ ರಸದೌತಣ ಬಡಿಸುವ ಅಪರೂಪದ ಕಲಾವಿದರೊಬ್ಬರು ಇಲ್ಲಿದ್ದಾರೆ. ಅವರೇ ರಾಕ್ಸ್ ಚಾಪ್‌ಮ್ಯಾನ್ .
ಅಮೆರಿಕದ ಮಾಜಿ ಬಾಸ್ಕೆಟ್ ಬಾಲ್ ಆಟಗಾರ ರಾಕ್ಸ್ ಈ ಹಣ್ಣುಗಳಿಂದ ಸಂಗೀತ ನುಡಿಸುವ ವಿಡಿಯೋವೊಂದನ್ನು ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಒಂದೇ ಒಂದು ನಿಮಿಷದ ಈ ವಿಡಿಯೋ ಲಕ್ಷಾಂತರ ಮಂದಿಯ ಹೃದಯವನ್ನು ಗೆದ್ದುಬಿಟ್ಟಿದೆ.
ಕಲ್ಲಂಗಡಿ, ಕರಬೂಜ ಹಾಗೂ ಕಿವಿಫ್ರುಟ್‌ಗಳನ್ನು ಸಣ್ಣ ಸಣ್ಣ ಹೋಳುಗಳಾಗಿ ಮಾಡಿ ಪ್ಲೇಟ್ ಒಂದರ ಮೇಲೆ ಕೀ ಬೋರ್ಡಿನ ಕೀಗಳಂತೆ ಜೋಡಿಸಿದ್ದಾರೆ ಇವರು. ಹಣ್ಣಿನ ತುಂಡುಗಳಿಗೆ ವೈಯರ್ ಅಳವಡಿಸಿದ್ದಾರೆ. ಮೆಟಲ್ ಬೋರ್ಡ್ ಒಂದಕ್ಕೆ ಈ ವೈರ್‌ಗಳ ಸಂಪರ್ಕ ಕೊಟ್ಟಿದ್ದಾರೆ.
ಲ್ಯಾಪ್‌ಟಾಪ್‌ಗೆ ಈ ವೈರ್‌ನ ಸಂಪರ್ಕ ಕೊಟ್ಟಿದ್ದಾರೆ. ಜತೆಗೆ ಪೆಡಲ್ ಹಾಗೂ ಡ್ರಂ ಕೂಡ ಇರಿಸಿಕೊಂಡು ಸಂಗೀತ ಕಛೇರಿಗೆ ಸಿದ್ಧರಾಗಿರುವುದು ಈ ವಿಡಿಯೋದಲ್ಲಿ ನೋಡಬಹುದು. ವಿಡಿಯೋ ನೋಡದೇ ಕೇವಲ ಆಲಿಸಿದರೆ, ಇದು ಹಣ್ಣಿನಿಂದ ಹೊಮ್ಮುತ್ತಿರುವ ಸಂಗೀತ ಎಂದು ಬೇರೆಯವರು ಹೇಳಿದರೂ ನಂಬುವುದು ಅಸಾಧ್ಯ.