

ಬೆಂಗಳೂರು: ರಾಜರಾಜೇಶ್ವರಿನಗರ ವಿಧಾನಸಭೆ ಕ್ಷೇತ್ರಕ್ಕೆ ಎನ್. ಮುನಿರತ್ನ (ಸದ್ಯ ಅನರ್ಹ) ಅವರ ಆಯ್ಕೆಯನ್ನು ಅಸಿಂಧುಗೊಳಿಸಲು ಕೋರಿ ತುಳಸಿ ಮುನಿರಾಜು ಗೌಡ ಸಲ್ಲಿಸಿದ್ದ ಮಧ್ಯಂತರ ಮನವಿಯನ್ನು ಹೈಕೋರ್ಟ್ ಶುಕ್ರವಾರ ವಜಾ ಗೊಳಿಸಿದೆ. ಹೀಗಾಗಿ ಉಪ ಚುನಾವಣೆಗೆ ಇದ್ದ ಕಾನೂನಿನ ತೊಡಕು ನಿವಾರಣೆಯಾದಂತಾಗಿದೆ.
ತುಳಸಿ ಮುನಿರಾಜು ಗೌಡ ಹಾಗೂ ಮುನಿರತ್ನ ಸಲ್ಲಿಸಿದ್ದ ಪ್ರತ್ಯೇಕ ಮಧ್ಯಂತರ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರು ಕಲಬುರಗಿ ಪೀಠದಿಂದ ವಿಡಿಯೋ ಕಾನ್ಪರೆನ್ಸ್ ಮೂಲಕ ಪ್ರಕಟಿಸಿದರು.
ತುಳಸಿ ಮುನಿರಾಜುಗೌಡ ಸಲ್ಲಿಸಿದ್ದ ಎರಡು ಮಧ್ಯಂತರ ಅರ್ಜಿಗಳಲ್ಲಿ ಒಂದನ್ನು ತಿರಸ್ಕರಿಸಿರುವ ನ್ಯಾಯಪೀಠ, ಮುನಿರತ್ನ ಸಲ್ಲಿಸಿದ್ದ ಮೂರು ಮಧ್ಯಂತರ ಅರ್ಜಿಗಳಲ್ಲಿ ಒಂದನ್ನು ಅಂಗೀಕರಿಸಿ, ಎರಡನ್ನು ತಿರಸ್ಕರಿಸಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಕ್ರಮವೆಸಗಿ ಆಯ್ಕೆಯಾಗಿರುವ ಮುನಿರತ್ನ ಅವರನ್ನು ಅಸಿಂಧುಗೊಳಿಸಿ, ಎರಡನೇ ಸ್ಥಾನದಲ್ಲಿರುವ ತಮ್ಮನ್ನೇ ಜಯಶಾಲಿ ಎಂದು ಘೋಷಿಸಬೇಕು ಎಂದು ಪರಾಜಿತ ಅಭ್ಯರ್ಥಿ ತುಳಸಿ ಮುನಿರಾಜು ಗೌಡ ಮಾಡಿದ್ದ ಮಧ್ಯಂತರ ಮನವಿ ವಜಾಗೊಂಡಿರುವ ಹಿನ್ನೆಲೆಯಲ್ಲಿ, ಚುನಾವಣಾ ತಕರಾರು ಅರ್ಜಿ ವಿಚಾರಣೆಗೆ ಬಾಕಿ ಇದ್ದರೂ ಉಪ ಚುನಾವಣೆ ನಡೆಸಲು ಚುನಾವಣಾ ಆಯೋಗಕ್ಕೆ ಇದ್ದ ಕಾನೂನು ತೊಡಕು ನಿವಾರಣೆಯಾಗಿದೆ.
ಹೈಕೋರ್ಟ್ನ ಈ ಆದೇಶದಿಂದ ಯಾವುದೇ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿ ಇಲ್ಲದಂತೆ ಬಿಡುವಂತಿಲ್ಲ ಎಂಬ ಚುನಾವಣಾ ಕಾಯ್ದೆಯ ಆಶಯದಂತೆ ಉಪಚುನಾವಣೆ ಹಾದಿ ಸುಗಮಗೊಂಡಿದೆ.
ಮುನಿರತ್ನ ಚುನಾವಣಾ ಅಕ್ರಮ ಎಸಗಿದ್ದಾರೆ ಎಂಬುದಕ್ಕೆ ಸಾಕ್ಷ್ಯ ಒದಗಿಸಲು ಕೋರಿದ ಅಂಶವನ್ನು ತಿದ್ದುಪಡಿ ಅರ್ಜಿಯಲ್ಲಿ ಸೇರಿಸಲು ನ್ಯಾಯಪೀಠ ತುಳಸಿ ಮುನಿರಾಜುಗೌಡ ಅವರಿಗೆ ಅವಕಾಶ ಕಲ್ಪಿಸಿದೆ. ಮೂಲ ಅರ್ಜಿಯಲ್ಲಿ ಈ ಅಂಶ ಇರಲಿಲ್ಲ ಎಂಬ ಕಾರಣಕ್ಕೆ ಈಗ ಅದನ್ನು ಸೇರ್ಪಡೆ ಮಾಡಿ ವಿಚಾರಣೆ ನಡೆಸಬೇಕು ಎಂಬ ಅರ್ಜಿದಾರರ ಮನವಿಯನ್ನು ನ್ಯಾಯಪೀಠ ಪುರಸ್ಕರಿಸಿದೆ.
ಇದೇ ವೇಳೆ, ತುಳಸಿ ಮುನಿರಾಜುಗೌಡ ಕೋರಿರುವ ಮನವಿಯಲ್ಲಿ ಎರಡು ಮಧ್ಯಂತರ ಅರ್ಜಿ ಗಳನ್ನು ವಜಾ ಮಾಡಬೇಕು ಎಂಬ ಮುನಿರತ್ನ ಅವರ ಮನವಿಯನ್ನು ನ್ಯಾಯಪೀಠ ಪುರಸ್ಕರಿಸಿದೆ. ಮೂಲ ಚುನಾವಣಾ ತಕರಾರು ಅರ್ಜಿಯ ವಿಚಾರಣೆಯನ್ನು ಏ.15ಕ್ಕೆ ಮುಂದೂಡಲಾಗಿದೆ.