ಆಫೀಸ್​ ಮೀಟಿಂಗ್ ಎಂದು ಲವರ್ ಜತೆ ಮಾಲ್ಡೀವ್ಸ್​ಗೆ: ಪತ್ನಿಯಿಂದ ತಪ್ಪಿಸಿಕೊಳ್ಳಲು ಹೋಗಿ ಜೈಲಲ್ಲಿ ಇಂಜಿನಿಯರ್​!

tour
Published on

ಮುಂಬೈ: ಆಫೀಸ್​ ಮೀಟಿಂಗ್​ ಇದೆ, ನಾಲ್ಕೈದು ದಿನ ಬರೋಕೆ ಆಗಲ್ಲ ಎಂದು ಹೆಂಡತಿಗೆ ಹೇಳಿ ಪ್ರೇಯಸಿ ಜತೆ ಮಾಲ್ಡೀವ್ಸ್​ನಲ್ಲಿ ಮಜಾ ಮಾಡಲು ಹೋದ ಇಲ್ಲಿಯ ಇಂಜಿನಿಯರ್​ ಒಬ್ಬ ಇದೀಗ ಪೊಲೀಸರ ಅತಿಥಿಯಾಗಿರುವ ಘಟನೆ ನಡೆದಿದೆ.

ಪ್ರಿಯಾಂಕರ ನೋರ್ವಾ ಎಂಬ ಇಂಜಿನಿಯರ್​ ಇದೀಗ ಜೈಲಿನಲ್ಲಿ ಇದ್ದಾನೆ! ಅಷ್ಟಕ್ಕೂ ಈತ ಮಾಡಿದ ಘನ ಕಾರ್ಯ ಏನೆಂದರೆ ಪತ್ನಿ ಎಲ್ಲಿ ಪಾಸ್​ಪೋರ್ಟ್​ ನೋಡಿಬಿಡುತ್ತಾಳೋ ಎಂದು ಮಾಲ್ಡೀವ್ಸ್​ಗೆ ಹೋದ ಪಾಸ್​ಪೋರ್ಟ್​ ಹಾಳೆಗಳನ್ನೇ ಹರಿದಿರುವುದು!

ಮಾಲ್ಡೀವ್ಸ್‌ನಿಂದ ಹಿಂದಿರುಗಿದ ನಂತರ ಆತನ ಪಾಸ್‌ಪೋರ್ಟ್‌ನ ಕೆಲವು ಪುಟಗಳು ಕಾಣೆಯಾಗಿರುವುದನ್ನು ವಲಸೆ ಅಧಿಕಾರಿಗಳು ನೋಡಿದ್ದಾರೆ. ಪಾಸ್‌ಪೋರ್ಟ್‌ನಲ್ಲಿ 3-6 ಮತ್ತು 31-34 ಪುಟಗಳು ಕಾಣೆಯಾಗಿರುವುದು ಅನುಮಾನಕ್ಕೆ ಈಡು ಮಾಡಿತ್ತು. ಆತನಿಗೆ ವಿಷಯ ಕೇಳಿದಾಗ ಅವನು ನಿಜ ಹೇಗೆ ಹೇಳಿಯಾನು? ವಿಷಯ ತಿಳಿಸಿ ತಡಬರಿಸಿದ್ದಾನೆ. ಅನುಮಾನಗೊಂಡ ಅಧಿಕಾರಿಗಳು ಆತನನ್ನು ಜೈಲಿಗೆ ಕಳುಹಿಸಿದ್ದಾರೆ. ಮುಂಬೈ ಪೊಲೀಸರು ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ವಂಚನೆ ಮತ್ತು ಫೋರ್ಜರಿ ಪ್ರಕರಣವನ್ನು ದಾಖಲಿಸಿ ವಿಚಾರಣೆ ನಡೆಸಿದ್ದಾರೆ.

ಕೊನೆಗೆ ಅಂತೂ ಸತ್ಯವನ್ನು ಈ ಇಂಜಿನಿಯರ್​ ಬಾಯಿ ಬಿಟ್ಟಿದ್ದಾನೆ. ಪತ್ನಿಯಿಂದ ವಿಷಯ ಮರೆಮಾಚಲು ತಾನು ಹೀಗೆ ಮಾಡಿರುವುದಾಗಿ ಹೇಳಿದ್ದಾನೆ.

ಅಷ್ಟಕ್ಕೂ ಇಂಜಿನಿಯರ್​ ಹೀಗೆ ನಿರ್ಧಾರ ತೆಗೆದುಕೊಳ್ಳಲು ಕಾರಣ, ಪತಿಯ ಮೇಲೆ ಪತ್ನಿಗೆ ಅನುಮಾನ ಶುರುವಾದ್ದರಿಂದ. ಆಫೀಸ್​ ಮೀಟಿಂಗ್​ ಎಂದು ಬಹಳ ಖುಷಿಯಿಂದ ಪತಿ ಹೋದಾಗಲೇ ಅವನ ಪತ್ನಿಗೆ ಅನುಮಾನ ಶುರುವಾಗಿದೆ. ಫೋನ್ ಮಾಡಿದರೆ ಪತಿ ರಿಸೀವ್​ ಮಾಡದ್ದರಿಂದ ಮತ್ತಷ್ಟು ಅನುಮಾನ ಶುರುವಾಗಿದೆ.

ಆದ್ದರಿಂದ ಪದೇ ಪದೇ ವಾಟ್ಸ್ಆ್ಯಪ್​ನಲ್ಲಿ ವಿಡಿಯೋ ಕಾಲ್​ ಮಾಡಲು ಶುರು ಮಾಡಿದ್ದಾಳೆ. ಇದರಿಂದ ಗಾಬರಿಗೊಂಡ ಪತಿರಾಯ ಹೆದರಿ ತನ್ನ ಟೂರ್​ ಅನ್ನು ಮೊಟಕುಗೊಳಿಸಿದ್ದಾನೆ. ಇಷ್ಟೆಲ್ಲಾ ಮಾಡಿದ ಪತ್ನಿ ಪಾಸ್​ಪೋರ್ಟ್​ ನೋಡದೇ ಬಿಡುತ್ತಾಳೆಯೇ? ಅದಕ್ಕಾಗಿ ಪುಟಗಳನ್ನೇ ಹರಿದುಬಿಟ್ಟರೆ ಹೇಗೆ ಎಂದು ನಿರ್ಧರಿಸಿದ್ದಾನೆ!

"ಪಾಸ್‌ಪೋರ್ಟ್‌ನಿಂದ ಪುಟಗಳನ್ನು ಹರಿದು ಹಾಕುವುದು ಕ್ರಿಮಿನಲ್ ಅಪರಾಧ ಎಂಬುದು ನನಗೆ ತಿಳಿದಿರಲಿಲ್ಲ" ಎಂದು ಆತ ಪೊಲೀಸರ ಬಳಿ ಅಳಲು ತೋಡಿಕೊಂಡಿದ್ದಾನೆ. ವಿಚಾರಣೆ ಮುಂದುವರೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net