ಕೆಲ್ಸಕ್ಕೆ ಹೋಗೋದು, ಬಿಡೋದು ಪತ್ನಿ ಇಷ್ಟ- ನೀವದನ್ನು ಕೇಳೋಹಾಗಿಲ್ಲ ಎಂದ ಹೈಕೋರ್ಟ್​

highcourt
Published on

ಮುಂಬೈ: ವಿದ್ಯಾವಂತೆ ಎನ್ನುವ ಒಂದೇ ಕಾರಣಕ್ಕೆ ಪತ್ನಿಯನ್ನು ಉದ್ಯೋಗಕ್ಕೆ ಹೋಗು ಎಂದು ಬಲವಂತ ಪಡಿಸುವ ಅಧಿಕಾರ ಪತಿಗೆ ಇಲ್ಲ ಎಂದು ಬಾಂಬೆ ಹೈಕೋರ್ಟ್​ ಮಹತ್ವದ ತೀರ್ಪು ನೀಡಿದೆ.

ಇಂದು ನಾನು ಈ ನ್ಯಾಯಾಲಯದ ಜಡ್ಜ್​ ಆಗಿದ್ದೇನೆ. ನಾಳೆ, ನಾನು ಮನೆಯಲ್ಲಿ ಕುಳಿತುಕೊಳ್ಳಬಹುದು ಎಂದಿಟ್ಟುಕೊಳ್ಳೋಣ. ಆಗ ನಾನು ನ್ಯಾಯಾಧೀಶೆ ಅರ್ಹನಾಗಿದ್ದೇನೆ ಮತ್ತು ಮನೆಯಲ್ಲಿ ಕುಳಿತುಕೊಳ್ಳಬಾರದು ಎಂದು ಯಾರೂ ಹೇಳುವಂತಿಲ್ಲ ಎಂದು ಉದಾಹರಣೆ ಸಹಿತವಾಗಿ ನ್ಯಾಯಮೂರ್ತಿ ಭಾರತಿ ಡಾಂಗ್ರೆ ಹೇಳಿದ್ದಾರೆ.

ಮಹಿಳೆಯನ್ನು ಜೀವನೋಪಾಯಕ್ಕಾಗಿ ದುಡಿಯುವಂತೆ ಬಲವಂತ ಮಾಡುವುದು ಕಾನೂನಿಗೆ ವಿರುದ್ಧವಾಗಿದೆ. ಮಹಿಳೆ ಅರ್ಹತೆ ಮತ್ತು ಶೈಕ್ಷಣಿಕ ಪದವಿ ಹೊಂದಿದ್ದರೂ ಸಹ ಕೆಲಸ ಮಾಡುವ ಅಥವಾ ಮನೆಯಲ್ಲಿ ಉಳಿಯುವ ಆಯ್ಕೆ ಇದೆ ಎಂದು ನ್ಯಾಯಾಲಯ ಹೇಳಿದೆ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

ಡಿವೋರ್ಸ್​ ಪ್ರಕರಣವೊಂದರಲ್ಲಿ ಪತ್ನಿಗೆ ಜೀವನಾಂಶ ನೀಡುವಂತೆ ಕೌಟುಂಬಿಕ ಕೋರ್ಟ್​ ಆದೇಶಿಸಿದ್ದನ್ನು ಪ್ರಶ್ನಿಸಿ ಪತಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ವೇಳೆ ಕೋರ್ಟ್​ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ತಮ್ಮ ಪತ್ನಿ ಚೆನ್ನಾಗಿ ಓದಿಕೊಂಡಿದ್ದಾಳೆ. ಅವಳು ಉದ್ಯೋಗ ಮಾಡುವ ಎಲ್ಲಾ ಅರ್ಹತೆಗಳು ಇವೆ. ಇದರ ಹೊರತಾಗಿಯೂ ಜೀವನಾಂಶ ಕೇಳುತ್ತಿದ್ದಾಳೆ ಎಂದು ಗಂಡ ಆರೋಪಿಸಿದ್ದ.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ಮಹಿಳೆ ಅರ್ಹತೆ ಮತ್ತು ಶೈಕ್ಷಣಿಕ ಪದವಿ ಹೊಂದಿದ್ದರೂ ಸಹ ಕೆಲಸ ಮಾಡುವ ಅಥವಾ ಮನೆಯಲ್ಲಿ ಉಳಿಯುವ ಆಯ್ಕೆ ಇದೆ. ಆಕೆಯನ್ನು ಬಲವಂತ ಮಾಡುವಂತಿಲ್ಲ ಎಂದಿದ್ದಾರೆ.

ಮನೆಯ ಮಹಿಳೆ ಆರ್ಥಿಕವಾಗಿ ಕೊಡುಗೆ ನೀಡಬೇಕು ಎಂಬುದನ್ನು ನಮ್ಮ ಸಮಾಜ ಇನ್ನೂ ಒಪ್ಪಿಕೊಂಡಿಲ್ಲ, ಇದು ಮಹಿಳೆಯ ಆಯ್ಕೆಯಾಗಿದೆ. ಅವಳನ್ನು ಕೆಲಸಕ್ಕೆ ಹೋಗಲು ಒತ್ತಾಯಿಸುವಂತಿಲ್ಲ, ಅವಳು ಪದವೀಧರಳು ಎಂಬ ಕಾರಣಕ್ಕೆ ಅವಳು ಮನೆಯಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಅರ್ಥವಲ್ಲ ಎಂದು ತೀರ್ಪಿನಲ್ಲಿ ಉಲ್ಲೇಖಿಸಿದ ನ್ಯಾಯಮೂರ್ತಿಗಳು ಪತಿ ಸಲ್ಲಿಸಿರುವ ಮೇಲ್ಮನವಿಯನ್ನು ವಜಾಗೊಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net