ರೈಲಿನಲ್ಲಿರೋ ಶೌಚಗೃಹಕ್ಕೆ ಹೋದ ತಾಯಿ-ಮಗು ನಾಪತ್ತೆ! ಸಿಕ್ಕಿದ್ದು ಹಳಿಯ ಮೇಲೆ ಹೆಣವಾಗಿ...

railway
Published on

ನಾಗ್ಪುರ ​(ಮಹಾರಾಷ್ಟ್ರ): ರೈಲಿನಲ್ಲಿರುವ ಶೌಚಗೃಹಕ್ಕೆ ಹೋದ ತಾಯಿ-ಮಗು ಮೃತ‍‍ಪಟ್ಟಿರುವ ದಾರುಣ ಘಟನೆ ಮಹಾರಾಷ್ಟ್ರದ ತುಮ್ಸಾರ್​​ ರೈಲು ನಿಲ್ದಾಣದ ಸಮೀಪ ನಡೆದಿದೆ.

ಮೃತಪಟ್ಟವರು ಪೂಜಾ (27) ಮತ್ತು 18 ತಿಂಗಳ ಅವರ ಮಗು ಅಥರ್ವ್‌. ‍ಇವರು ಮಧ್ಯಪ್ರದೇಶದ ರೇವಾದಲ್ಲಿರುವ ಮಿಲಿಟರಿ ಕಾಲೇಜಿ​​ನ ಪ್ರಾಧ್ಯಾಪಕರಾಗಿರುವ ಪತಿ ಇಶಾಂತ್‌ ಅವರ ಜತೆ ಮಧ್ಯಪ್ರದೇಶದ ರೇವಾದಿಂದ ನಾಗ್ಪುರಕ್ಕೆ ಪ್ರಯಾಣಿಸುತ್ತಿದ್ದ ವೇಳೆ ಈ ದುರಂತ ನಡೆದಿದೆ.

ಆಗಿದ್ದೇನು? ದಂಪತಿ ಮತ್ತು ಮಗು ಪ್ರಯಾಣಿಸುತ್ತಿದ್ದ ವೇಳೆ ಮಗುವಿಗೆ ಶೌಚಗೃಹಕ್ಕೆ ಹೋಗಬೇಕಿತ್ತು. ಆಗ ಮಗುವನ್ನು ಕರೆದುಕೊಂಡು ಪೂಜಾ ಹೋಗಿದ್ದಾರೆ. ಆದರೆ ಎಷ್ಟು ಹೊತ್ತಾದರೂ ವಾಪಸ್‌ ಬರಲಿಲ್ಲ. ಪತಿ ಶೌಚಗೃಹಕ್ಕೆ ಹೋಗಿ ನೋಡಿದಾಗ ಪತ್ನಿ ಮತ್ತು ಮಗು ಕಾಣಿಸಲಿಲ್ಲ. ಎಲ್ಲಿ ಹುಡುಕಾಡಿದರೂ ಸಿಗಲೇ ಇಲ್ಲ. ಆತಂಕಗೊಂಡ ಅವರು ಗೊಂಡಾ ರೈಲು ನಿಲ್ದಾಣದಲ್ಲಿ ದೂರು ದಾಖಲು ಮಾಡಿದರು.

ಪೊಲೀಸರು ತನಿಖೆ ನಡೆಸುತ್ತ ವೇಳೆಯೇ ಅವರಿಗೆ ವೈಗಂಗಾ ನದಿ ಸೇತುವೆ ಮೇಲೆ ಮಹಿಳೆಯೊಬ್ಬ ಶವ ಸಿಕ್ಕಿರುವ ಬಗ್ಗೆ ವರದಿ ಸಿಕ್ಕಿತು, ಜತೆಗೆ ನದಿಯಲ್ಲಿ ಮಗುವಿನ ಮೃತದೇಹವೂ ಇತ್ತು. ತಾಯಿ-ಮಗುವಿನ ಶವಕ್ಕೂ ಇಶಾಂತ್‌ ಅವರು ಹೇಳಿದ ಮಾಹಿತಿಗೂ ತಾಳೆ ಇದ್ದುದರಿಂದ ಮೃತದೇಹವನ್ನು ಗುರುತಿಸಲು ಕರೆದಾಗ ಅದು ತಮ್ಮ ಪತ್ನಿ ಮತ್ತು ಮಗುವಿನ ಶವ ಎಂದು ಹೇಳಿದ್ದಾರೆ ಇಶಾಂತ್‌.

ಕೊನೆಗೆ, ತಿಳಿದುಬಂದದ್ದು ಏನೆಂದರೆ ಮಗುವನ್ನು ಎತ್ತಿಕೊಂಡು ಪೂಜಾ ಅವರು ಹೋದಾಗ ಮಗು ಆಯತಪ್ಪಿ ಕೆಳಕ್ಕೆ ಬಿದ್ದಿದೆ. ಅದನ್ನು ರಕ್ಷಿಸಲು ಹೋಗಿ ಪೂಜಾ ಅವರೂ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಆದರೂ ಈ ಬಗ್ಗೆ ತನಿಖೆ ಮುಂದುವರೆದಿದೆ. ಇಷ್ಟೆಲ್ಲಾ ನಡೆದರೂ ಅಲ್ಲಿ ಯಾರೂ ಇದನ್ನು ನೋಡಲಿಲ್ಲವೇ ಎಂಬ ಪ್ರಶ್ನೆ ಉಂಟಾಗಿದೆ. ಸೂಕ್ತ ತನಿಖೆಯ ನಂತರವಷ್ಟೇ ನಿಜಾಂಶ ಬೆಳಕಿಗೆ ಬರಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net