

ಹರ್ದೊಯಿ (ಉತ್ತರ ಪ್ರದೇಶ): ಕಪಿಚೇಷ್ಠೆ ಎಂದರೆ ಸುಮ್ಮನೇನೆ? ಉತ್ತರ ಪ್ರದೇಶದ ಹರ್ದೋಯಿಯಲ್ಲಿ ಕಪಿ ಮಾಡಿದ ಚೇಷ್ಠೆಯಿಂದಾಗಿ ಯುವಕನ ಪ್ರಾಣವೇ ಕೈಯಲ್ಲಿ ಬಂದಂಥ ಅನುಭವ. ಏಕೆಂದರೆ ಆ ಯುವಕನ ಬ್ಯಾಗ್‌ನಲ್ಲಿದ್ದ ಮೂರು ಲಕ್ಷ ರೂಪಾಯಿಗಳ ಸಮೇತ ಬ್ಯಾಗ್ ಎತ್ತಿಹಾಕಿಕೊಂಡು ಮಂಗ ಮರವೇರಿದರೆ ಹೇಗಾಗಬೇಡ?
ಇಲ್ಲಿನ ಪೊಲೀಸ್ ಠಾಣೆಯ ಹೊರಗೆ ನಿಲ್ಲಿಸಿದ್ದ ಬೈಕ್‌ನಲ್ಲಿ ಮೂರು ಲಕ್ಷ ರೂ ಹಣವಿದ್ದ ಬ್ಯಾಗ್ ಕೂಡ ಇಟ್ಟಿದ್ದ ಯುವಕ. ಖರೀದಿ ಮಾಡಲು ತೆರಳುತ್ತಿದ್ದ ಯುವಕನೋರ್ವ ಕೆಲಸದ ನಿಮಿತ್ತ ಪೊಲೀಸ್ ಠಾಣೆ ಎದುರು ಬೈಕ್ ನಿಲ್ಲಿಸಿದ್ದ. ಈ ವೇಳೆ ಹಣವಿದ್ದ ಬ್ಯಾಗ್ ಅನ್ನೂ ಅಲ್ಲಿಯೇ ಬಿಟ್ಟು ಹೋಗಿದ್ದಾನೆ. ಅಷ್ಟು ಹಣದ ಬ್ಯಾಗ್ ಪೊಲೀಸ್ ಠಾಣೆಯ ಒಳಗೆ ತನ್ನೊಂದಿಗೆ ಒಯ್ಯಲು ಯುವಕನಿಗೆ ಯಾವ ಭಯ ಕಾಡುತ್ತಿತ್ತೋ ಗೊತ್ತಿಲ್ಲ, ಒಟ್ಟಿನಲ್ಲಿ ಪೊಲೀಸರ ಕಣ್ಣಿಗೆ ಬೀಳಬಾರದು ಎಂದು ಬೈಕ್‌ನಲ್ಲಿ ಇಟ್ಟು ಹೋಗಿದ್ದಾನೆ!
ಅಲ್ಲಿಯೇ ಇದ್ದ ಮಂಗ ಬ್ಯಾಗ್ ನೋಡಿದೆ. ಅದರಲ್ಲಿ ಏನಾದರೂ ತಿಂಡಿ ಇರಬಹುದು ಎಂದುಕೊಂಡಿದೆ ಅನಿಸತ್ತೆ. ಆದ್ದರಿಂದ ಬ್ಯಾಗ್ ಅನ್ನು ಎತ್ತಿಹಾಕಿಕೊಂಡು ಮರವೇರಿ ಕುಳಿತಿದೆ. ಯುವಕ ಬಂದಾಗ ಬ್ಯಾಗ್ ಇರಲಿಲ್ಲ. ಬೆವರಿ ಹೋದ ಯುವಕ ಎಲ್ಲೆಡೆ ಹುಡುಕಾಡಿದ್ದಾನೆ. ನಂತರ ಅಲ್ಲಿಯೇ ಇರುವ ಮಂಗನ ಮೇಲೆ ದೃಷ್ಟಿ ಹೋಗಿದೆ. ಅದರ ಕೈಯಲ್ಲಿ ಬ್ಯಾಗ್ ಇತ್ತು. ಪುಣ್ಯಕ್ಕೆ ಮಂಗ ಅದನ್ನು ಬಿಗಿಯಾಗಿ ಹಿಡಿದುಕೊಂಡು ಅಲ್ಲಿಯೇ ಕುಳಿತಿತ್ತು. ಕೂಡಲೇ ಪೊಲೀಸರು ದೌಡಾಯಿಸಿ ಬಂದು ಹರಹಾಸಹ ಪಟ್ಟು ಮಂಗನನ್ನು ಹಿಡಿದಿದ್ದಾರೆ. ಬ್ಯಾಗ್ ಸುರಕ್ಷಿತವಾಗಿ ಯುವಕನ ಕೈ ಸೇರಿದೆ.
ಹೀಗೆ ದುಡ್ಡನ್ನು ಬಿಟ್ಟು ಹೋಗುವಾಗ ಕಳ್ಳರ ಭಯದ ಜತೆಗೆ ಮಂಗನ ಭಯವೂ ಇರುತ್ತೆ. ಜನರು ಎಚ್ಚರಿಕೆಯಿಂದ ಇರಬೇಕು ಎಂದು ಪೊಲೀಸರು ಸಂದೇಶ ರವಾನಿಸಿದ್ದಾರೆ.