

ತಂಜಾವೂರು: ಮೇಲ್ಚಾವಣಿ ತೆರೆದು ಮನೆಯೊಳಕ್ಕೆ ನುಗ್ಗಿದ ಮಂಗವೊಂದು ಮನೆಯೊಳಕ್ಕೆ ಮಲಗಿದ್ದ ಎಂಟು ತಿಂಗಳ ಶಿಶುವನ್ನು ಎತ್ತಿಕೊಂಡು ಹೋಗಿರುವ ಭಯಾನಕ ಘಟನೆ ತಮಿಳುನಾಡಿನ ತಂಜಾವೂರಿನಲ್ಲಿ ನಡೆದಿದೆ.
ನಿನ್ನೆ ಈ ಘಟನೆ ನಡೆದಿದೆ. ಮಗು ಅಳುವ ಶಬ್ದ ಕೇಳುತ್ತಿದ್ದಂತೆಯೇ ಮಗುವಿನ ಅಮ್ಮ ಭುವನೇಶ್ವರಿ ಅವರು ಬರುವಷ್ಟರಲ್ಲಿ ಮಗುವನ್ನು ಎತ್ತಿಕೊಂಡು ಮಂಗ ಹಾರಿ ಹೋಗಿದೆ. ಇದರಿಂದ ಭಯಭೀತರಾದ ಭುವನೇಶ್ವರಿಯವರು ಜೋರಾಗಿ ಕಿರುಚಿ, ಸಹಾಯಕ್ಕಾಗಿ ಅಂಗಲಾಚಿದರು.
ಅಕ್ಕಪಕ್ಕದವರೆಲ್ಲರೂ ಬಂದು ಮಂಗವನ್ನು ಓಡಿಸಿದ್ದಾರೆ. ಚೀರಾಟಕ್ಕೆ ಹೆದರಿದ ಮಂಗ ಮಗುವನ್ನು ಮೇಲಿನಿಂದ ಎಸೆದು ಬಿಟ್ಟಿದೆ. ಕೂಡಲೇ ಮಗುವನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಗು ಅದಾಗಲೇ ಪ್ರಾಣ ಕಳೆದುಕೊಂಡಿತ್ತು.
ಈ ಭಾಗದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿರುವ ಬಗ್ಗೆ ವರದಿಯಾಗಿತ್ತು. ಮನೆಯೊಳಗೆ ನುಗ್ಗಿ ಆಹಾರ ಪದಾರ್ಥಗಳನ್ನು ಕದ್ದೊಯ್ದಿರುವ ಘಟನೆಗಳೂ ಆಗಾಗ್ಗೆ ನಡೆಯುತ್ತಿವೆ. ಆದರೆ ಇದೀಗ ಮಗುವನ್ನು ಹೊತ್ತೊಯ್ದಿರುವುದು ಜನರಲ್ಲಿ ಆತಂಕದ ವಾತಾವರಣವನ್ನು ಸೃಷ್ಟಿಸಿದೆ.