ನವಭಾರತ ನಿರ್ಮಿಸುವೆವು... ಆಗಸದೆತ್ತರಕ್ಕೆ ಹೋಗುವೆವು... ಮೋದಿ-ಯೋಗಿ ಜೋಡಿ... ಹೀಗಿದೆ ಸಿಎಂ ಕವಿತೆ...

yogi-modi
Published on

ಲಖನೌ: ‘ನಾವು ಪ್ರತಿಜ್ಞೆಯೊಂದಿಗೆ ಮುನ್ನಡೆಯುತ್ತಿದ್ದೇವೆ... ನಮ್ಮ ತನು-ಮನವನ್ನು ಅರ್ಪಿಸಲು ನಿರ್ಧರಿಸಿದ್ದೇವೆ... ಆಕಾಶದೆತ್ತರಕ್ಕೆ ಹೋಗಲು ಮತ್ತು ನವಭಾರತ ನಿರ್ಮಾಣ ಮಾಡಲು...’

‍- ಇದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮಾಡಿರುವ ಟ್ವೀಟ್‌. ತಮ್ಮ ಮತ್ತು ಪ್ರಧಾನಿ ನರೇಂದ್ರ ಮೋದಿ ಜತೆಗಿರುವ ಅಪರೂಪದ ಫೋಟೋ ಒಂದನ್ನು ಶೇರ್‌ ಮಾಡಿರುವ ಯೋಗಿ, ಈ ಕವನ ಬರೆದಿದ್ದಾರೆ.

56ನೇ ಡಿಜಿಪಿ-ಐಜಿಪಿ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಲಖನೌಗೆ ತೆರಳಿದ್ದರು. ಅಲ್ಲಿ ಯೋಗಿಯವರ ಜತೆ ಮಾತುಕತೆ ನಡೆಸಿದ ಬಳಿಕ ಇಂದು ದೆಹಲಿಗೆ ವಾಪಸ್​ ಬರಲಿದ್ದಾರೆ.

ಈ ಸಮಯದಲ್ಲಿ ಆದಿತ್ಯನಾಥ್​ ಅವರು ತಾವು ಪ್ರಧಾನಿ ಮೋದಿಯವರೊಂದಿಗೆ ಇರುವ ಎರಡು ಫೋಟೋಗಳನ್ನು ಟ್ವಿಟರ್​​ನಲ್ಲಿ ಶೇರ್​ ಮಾಡಿಕೊಂಡಿದ್ದು, ಈ ಕವನ ಬರೆದಿದ್ದಾರೆ. ಯೋಗಿ ಆದಿತ್ಯನಾಥ್​ ಅವರ ಹೆಗಲ ಮೇಲೆ ಮೋದಿ ಕೈಹಾಕಿ ಏನನ್ನೋ ಹೇಳುತ್ತಿರುವಂತೆ ಈ ಫೋಟೋಗಳು ಇವೆ.

ನವಭಾರತ ನಿರ್ಮಾಣಕ್ಕೆ ಬದ್ಧರಾಗಿದ್ದೇವೆ ಎಂದು ಕ್ಯಾಪ್ಷನ್​ ಕೊಟ್ಟು ಕವನ ಬರೆದಿದ್ದಾರೆ. ಇದಕ್ಕೆ ಪ್ರಶಂಸೆಗಳ ಸುರಿಮಳೆಯೂ ಬಂದಿದೆ, ಜತೆಗೆ ಕೆಲವು ವ್ಯಂಗ್ಯ ಟೀಕೆಗಳೂ ಬಂದಿವೆ. ಸಮಾಜವಾದಿ ಪಕ್ಷ ಈ ಟ್ವೀಟ್‌ ನೋಡಿ ವ್ಯಂಗ್ಯವಾಡಿದೆ. ಎಸ್​ಪಿ ವಕ್ತಾರ ಅನುರಾಗ್​ ಭಡೌರಿಯಾ ಪ್ರತಿಕ್ರಿಯೆ ನೀಡಿದ್ದು, ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ ಅಧಿಕಾರದಲ್ಲಿದ್ದಾಗ ಮಾಡಿದ ಕೆಲಸವೇ ಹೆಚ್ಚಾಗಿದೆ. ಹಾಗಾಗಿ ಈ ಬಾರಿ ಅಖಿಲೇಶ್​ ಅವರೇ ಗೆಲ್ಲಬಹುದು ಎಂದು ಪ್ರಧಾನಿ ಮೋದಿ, ಯೋಗಿ ಜೀ ಅವರಿಗೆ ಹೇಳುತ್ತಿರಬಹುದು ಎಂದು ಅಣಕಿಸಿದ್ದಾರೆ.

ಇಲ್ಲಿದೆ ನೋಡಿ ಟ್ವೀಟ್‌

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net