

ನವದೆಹಲಿ: ಪ್ರತಿ ತಿಂಗಳ ಕೊನೆಯ ಭಾನುವಾರ ದೇಶದ ಜನತೆಯನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿಯವರು ನಡೆಸುವ ರೇಡಿಯೋ ಕಾರ್ಯಕ್ರಮ ‘ಮನ್ ಕೀ ಬಾತ್’ನ 79ನೇ ಕಂತಿನಲ್ಲಿ ಇಂದು ಪ್ರಧಾನಿಯವರು ಹಲವಾರು ವಿಷಯಗಳ ಕುರಿತು ಚರ್ಚೆ ಮಾಡಿದ್ದಾರೆ.
ಕ್ರೀಡಾಪಟುಗಳ ಸಾಧನೆ, ಕೃಷ್ಣ ಜನ್ಮಾಷ್ಠಾಮಿ, ಸ್ವಚ್ಛ ಭಾರತ ಅಭಿಯಾನ, ಕರೊನಾ ಲಸಿಕೆಯಲ್ಲಿ ಸಾಧನೆ ಅವರ ಮಾತಿನ ಹೈಲೈಟ್ಸ್‌ಗಳು. ಕೃಷ್ಣ ಜನ್ಮಾಷ್ಟಮಿಯ ಶುಭ ಕೋರಿದ ಪ್ರಧಾನಿ ಮೋದಿಯವರು ಒಲಿಂಪಿಕ್ಸ್ ಸಾಧನೆಯ ಕುರಿತು ಮಾತನಾಡಿದರು. ಒಲಿಂಪಿಕ್ಸ್ ಹಾಕಿಯಲ್ಲಿ ನಾವು 40 ವರ್ಷಗಳ ಬಳಿಕ ಪದಕ ಗೆದ್ದಿದ್ದೇವೆ. ಮೇಜರ್ ಧ್ಯಾನ್‌ಚಂದ್ ಜೀವಿಸಿದ್ದರೆ ಇಂದು ಎಷ್ಟು ಖುಪಿಪಡುತ್ತಿದ್ದರು ಎಂದು ಯಾರಾದರೂ ಊಹಿಸಬಲ್ಲಿರಾ ಎಂದು ಅವರು ಪ್ರಶ್ನಿಸಿದರು. ಒಲಂಲಿಕ್ಸ್‌ನಲ್ಲಿನ ಚಿನ್ನದ ಪದಕ ಗೆದ್ದಿರುವುದು ಸೇರಿದಂತೆ ಈ ಬಾರಿ ಮಾಡಿರುವ ಸಾಧನೆ ಬಳಿಕ ದೇಶದಲ್ಲಿ ಕ್ರೀಡಾ ಕ್ಷೇತ್ರದ ಬಗ್ಗೆ ಅಪಾರವಾದ ಚರ್ಚೆ ನಡೆಯುತ್ತಿದೆ. ಯುವಕರು ಈ ಕ್ಷೇತ್ರದತ್ತ ಹೆಚ್ಚಾಗಿ ಆಕರ್ಷಿತರಾಗುತ್ತಿದ್ದಾರೆ. ಹಳ್ಳಿ, ಪಟ್ಟಣ, ನಗರದ ಮೈದಾನಗಳು ಕ್ರೀಡಾಪಟುಗಳಿಂದ ತುಂಬಿರಬೇಕು. ಸರ್ವರ ಒಗ್ಗೂಡುವಿಕೆಯಿಂದ ಮಾತ್ರ ಕ್ರೀಡಾ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಲಿದೆ ಎಂದು ಮೋದಿ ಅಭಿಪ‍್ರಾಯ ಪಟ್ಟರು.
ಇದೇ ವೇಳೆ ಕರೊನಾ ಲಸಿಕೆ ಕುರಿತು ಮಾತನಾಡಿದ ಅವರು, ಭಾರತದಲ್ಲಿ ಈವರೆಗೆ ಸುಮಾರು 62 ಕೋಟಿ ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಲಸಿಕೆ ಕುರಿತಂತೆ ಇಂದಿಗೂ ಕೂಡ ಹಲವು ನಕಾರಾತ್ಮಕ ಮಾತುಗಳು ಕೇಳಿಬರುತ್ತಿವೆ. ಅವುಗಳನ್ನು ಕಿವಿಯ ಮೇಲೆ ಹಾಕಿಕೊಳ್ಳದೇ ಎಲ್ಲರೂ ಲಸಿಕೆ ಹಾಕಿಸಿಕೊಂಡು ಕರೊನಾ ಪೀಡೆಯಿಂದ ದೂರವಿರಬೇಕು ಎಂದು ಪ್ರಧಾನಿ ಮನವಿ ಮಾಡಿಕೊಂಡರು.
ಸ್ವಚ್ಛತಾ ಶ್ರೇಯಾಂಕದಲ್ಲಿ ಮೊದಲ ಸ್ಥಾನವನ್ನು ಉಳಿಸಿಕೊಂಡಿರುವ ಮಧ್ಯಪ್ರದೇಶದ ಇಂದೋರ್ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ ಪ್ರಧಾನಿಯವರು, ಸ್ವಚ್ಛ ನಗರಿಯ ಬಳಿಕ ಇದೀಗ ಇಂದೋರ್ ನದಿ ಮತ್ತು ಜಲಮೂಲಗಳ ಸ್ವಚ್ಛತೆಗೆ ಮುಂದಾಗಿದ್ದಾರೆ. ಇದು ಎಲ್ಲರಿಗೂ ಮಾದರಿಯಾಗಬೇಕಿದೆ ಎಂದರು.
ಇದೇ ವೇಳೆ ಸಂಸ್ಕೃತ ಭಾಷೆಯ ಮಹತ್ವದ ಕುರಿತು ಮಾತನಾಡಿದ ಅವರು, ಗುಜರಾತ್ ರಾಜ್ಯದಲ್ಲಿ ಸಂಸ್ಕೃತ ಭಾಷೆ ಉಳಿಸುವ ಕೆಲಸ ಮಾಡಲಾಗುತ್ತಿದೆ. ರೇಡಿಯೊ ಯೂನಿಟಿ 90 ಎಫ್‌ಎಂನಲ್ಲಿ ರೇಡಿಯೊ ಜಾಕಿಗಳು ಕೇಳುಗರ ಜೊತೆ ಸಂಸ್ಕೃತದಲ್ಲಿ ಮಾತನಾಡುತ್ತಾರೆ. ಇದೊಂದು ವಿಶಿಷ್ಟ ಕಾರ್ಯಕ್ರಮವಾಗಿದೆ ಎಂದರು. ಮನ್ ಕೀ ಬಾತ್ ಭಾರತ ಮಾತ್ರವಲ್ಲದೇ ಇಡೀ ವಿಶ್ವದಲ್ಲಿಯೇ ಪ್ರಸಿದ್ಧಿ ಹೊಂದಿದೆ ಎಂದು ಹೇಳಿದ ಪ್ರಧಾನಿ ಮೋದಿ, ತಮಗೆ ಬರುವ ಸಲಹೆಗಳಲ್ಲಿ ಶೇ.75ಕ್ಕಿಂತ ಹೆಚ್ಚು ಮಂದಿ 35 ವರ್ಷಕ್ಕಿಂತ ಕಡಿಮೆ ವಯೋಮಾನದವರೇ ಇದ್ದಾರೆ. ಇದು ಯುವ ಶಕ್ತಿ ಇಂದು ಸ್ಫೂರ್ತಿದಾಯಕ ಕೆಲಸ ಮಾಡುತ್ತಿರುವ ಸಂಕೇತವಾಗಿದೆ. ಯುವ ಶಕ್ತಿಯನ್ನು ಸರಿಯಾಗಿ ಬಳಸಿಕೊಂಡರೆ ದೇಶದ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದರು.