VIDEO: ಸಿಎಂ ಪುತ್ರಿಯ ದರ್ಪ- ವೈದ್ಯರಿಗೆ ಕಪಾಳಮೋಕ್ಷ; ಮಗಳ ತಪ್ಪಿಗೆ ಕ್ಷಮೆ ಕೋರಿದ ಮಿಜೋರಾಂ ಮುಖ್ಯಮಂತ್ರಿ

mizoram
Published on

ಮಿಜೋರಾಂ: ಮಿಜೋರಾಂ ಮುಖ್ಯಮಂತ್ರಿ ಝೋರಂತಂಗ ಅವರ ಮಗಳು ವೈದ್ಯರ ಮೇಲೆ ಹಲ್ಲೆ ಮಾಡಿದ್ದು, ವಿಡಿಯೋ ಭಾರಿ ವೈರಲ್​ ಆಗಿದೆ. ಇದಕ್ಕಾಗಿ ಖುದ್ದು ಮುಖ್ಯಮಂತ್ರಿಗಳೇ ಕ್ಷಮೆ ಕೋರುವ ಘಟನೆ ನಡೆದಿದೆ.

ಮಿಲಾರಿ ಚಾಂಗ್ಟೆ ಇಂಥದ್ದೊಂದು ಕೃತ್ಯ ಎಸಗಿದ್ದಾರೆ. ಮಗಳು ಮಾಡಿದ ತಪ್ಪಿಗೆ ಭಾರಿ ಅವಮಾನ ಅನುಭವಿಸಿದ ಮುಖ್ಯಮಂತ್ರಿಗಳು, ಈ ಕೃತ್ಯವನ್ನು ತಾನು ಯಾವುದೇ ರೀತಿಯಲ್ಲಿ ಸಮರ್ಥಿಸುವುದಿಲ್ಲ, ಇಡೀ ವೈದ್ಯಕೀಯ ವೃಂದ ಹಾಗೂ ರಾಜ್ಯದ ಜನತೆಯ ಕ್ಷಮೆ ಕೋರುತ್ತೇನೆ ಎಂದಿದ್ದಾರೆ.

ಅಷ್ಟಕ್ಕೂ ಆಗಿದ್ದೇನೆಂದರೆ, ಆಗಸ್ಟ್ 17 ರಂದು ಸಿಎಂ ಪುತ್ರಿ ಮಿಲಾರಿ ಚಾಂಗ್ಟೆ ಅವರು ಮಿಜೋರಾಂನ ರಾಜಧಾನಿಯಲ್ಲಿ ಅತ್ಯಂತ ಜನಪ್ರಿಯ ಚರ್ಮದ ಚಿಕಿತ್ಸಾಲಯ ಒಂದಕ್ಕೆ ಹೋಗಿದ್ದರು. ಚರ್ಮರೋಗ ವೈದ್ಯರು ಇವರು. ಈ ವೈದ್ಯರನ್ನು ನೋಡುವ ಪೂರ್ವದಲ್ಲಿ ಅಪಾಯಿಂಟ್​ಮೆಂಟ್​ ಕಡ್ಡಾಯವಾಗಿತ್ತು. ಆದರೆ ಮುಖ್ಯಮಂತ್ರಿಯ ಮಗಳಾದ ತನಗೆ ಇವೆಲ್ಲಾ ಬೇಡ ಎನ್ನುವ ಕಾರಣಕ್ಕೋ ಏನೋ, ನೇರವಾಗಿ ಮಿಲಾರಿ ಆಸ್ಪತ್ರೆಗೆ ಹೋಗಿದ್ದರು.

ಆದರೆ ವೈದ್ಯರಾಗಿರುವ ಡಾ. ಜೋನುನಾಸಂಗ ಅವರು ಅಪಾಯಿಂಟ್​ಮೆಂಟ್​ ಇಲ್ಲದೇ ತಾವು ರೋಗಿಯನ್ನು ನೋಡುವುದಿಲ್ಲ ಎಂದಿದ್ದಾರೆ. ಇದರಿಂದ ಮಿಲಾರಿ ಅವರ ಪಿತ್ತ ನೆತ್ತಿಗೇರಿದೆ. ಕೂಡಲೇ ಒಳಗೆ ನುಗ್ಗಿ ವೈದ್ಯರ ಕೆನ್ನೆಗೆ ಹೊಡೆದಿದ್ದಾರೆ. ಇದು ಅಲ್ಲಿರುವ ಸಿಸಿಟಿವಿಯಲ್ಲಿ ದಾಖಲಾಗಿದೆ. ಇದರ ವಿಡಿಯೋ ಸಾಕಷ್ಟು ವೈರಲ್​ ಆಗಿದೆ.

ಇಷ್ಟಾಗುತ್ತಿದ್ದಂತೆಯೇ, ಭಾರತೀಯ ವೈದ್ಯಕೀಯ ಸಂಘ (ಐಎಂಎ) ಈ ಘಟನೆಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದು 800 ಕ್ಕೂ ಹೆಚ್ಚು ವೈದ್ಯರು ಶನಿವಾರ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಿಜೋರಾಂನ ಭಾರತೀಯ ವೈದ್ಯಕೀಯ ಸಂಘದ ಸದಸ್ಯರು ಶನಿವಾರ ತಮ್ಮ ಕೆಲಸದ ಸ್ಥಳಗಳಿಗೆ ಕಪ್ಪು ಬ್ಯಾಡ್ಜ್ ಧರಿಸಿ ಪ್ರತಿಭಟನೆ ನಡೆಸಿದ್ದಾರೆ.

ಕೂಡಲೇ ಮುಖ್ಯಮಂತ್ರಿಗಳು ಕ್ಷಮೆ ಕೋರಿದರು. ತಮ್ಮ ಪುತ್ರಿಯ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳದ ಭಾರತೀಯ ವೈದ್ಯಕೀಯ ಸಂಘಕ್ಕೂ ಅವರು ಧನ್ಯವಾದ ಸಲ್ಲಿಸಿದರು. (ಏಜೆನ್ಸೀಸ್​)

ಇಲ್ಲಿದೆ ನೋಡಿ ವಿಡಿಯೋ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net