​ಫೋನ್​ಗೆ ಅಡಿಕ್ಟ್​ ಆಗಿರೋ ಮಕ್ಕಳಿಗೆ ಬೈತೀರಾ? ನಾಲ್ವರು ಕಾಣೆಯಾದ​ ಬಾಲಕಿಯರ ಸ್ಟೋರಿ ಓದಿ...

smartphone
Published on

ಪ್ರಕಾಶಂ (ಆಂಧ್ರಪ್ರದೇಶ): ಮಕ್ಕಳು ಚಿಕ್ಕವರಿರುವಾಗಿ ಮೊಬೈಲ್​ ಫೋನ್​ ಹಿಡಿದುಕೊಂಡು ಮುದ್ದುಮುದ್ದು ಮಾತನಾಡಿದಾಗ ಮನೆಯವರಿಗೆ ಖುಷಿಯೋ ಖುಷಿ. ಮಗು ಸ್ವಲ್ಪ ದೊಡ್ಡದಾಗಿದ್ದರೆ ಫೋನ್​ನಲ್ಲಿ ಮೆಸೇಜ್​ ಮಾಡೋದು, ತಾನೇ ಅದರಲ್ಲಿ ಏನೋ ಕಂಡುಹಿಡಿಯುವುದು... ಹೀಗೆಲ್ಲಾ ಮಾಡಿದಾಗ ತಮ್ಮ ಮಕ್ಕಳ ಗುಣಗಾನ ಮಾಡುವ ಪಾಲಕರಿಗೇನೂ ಕಮ್ಮಿ ಇಲ್ಲ.

ಇಷ್ಟು ಹೊಗಳಿಕೆಗೆ ಉಬ್ಬಿ ಅದೇ ಮಕ್ಕಳು ಸ್ವಲ್ಪ ದೊಡ್ಡದಾದ ಮೇಲೆ ಮೊಬೈಲ್​ ದಾಸರಾಗಿಬಿಟ್ಟರೆ ಆಗ ಶುರುವಾಗತ್ತೆ ಪಾಲಕರಿಗೆ ಟೆನ್ಷನ್​. ಇದು ಒಂದು ಕಥೆಯಾದರೆ, ಇನ್ನು ಕೆಲವು ಮಕ್ಕಳು ಅವರಿವರು ಮಾಡಿದ್ದು ನೋಡಿ ಫೋನ್​ ಬಿಟ್ಟು ಮೇಲೆ ಏಳಲ್ಲ. ಅದರಲ್ಲಿಯೂ ಇದೀಗ ಆನ್​ಲೈನ್​ ಕ್ಲಾಸ್​ ಬೇರೆ. ತಮ್ಮ ಮಕ್ಕಳಿಗೆ ಮೊಬೈಲ್​ ಕೊಡಿಸಲ್ಲ ಎಂದು ಪಣ ತೊಟ್ಟ ಉದ್ಯೋಗಸ್ಥ ಪಾಲಕರೂ ಅನಿವಾರ್ಯವಾಗಿ ಮನೆಯಲ್ಲಿ ಇರುವ ಮಕ್ಕಳಿಗೆ ಹೊಸ ಫೋನ್​ ಕೊಡಿಸಬೇಕಾಗಿದೆ!

ವಿಷಯ ಏನೇ ಇರಲಿ. ಆದರೆ ಫೋನ್​ನಲ್ಲಿಯೇ ಸದಾ ಆ್ಯಕ್ಟೀವ್​ ಆಗಿರುವ, ಫೋನು ಬಿಟ್ಟು ಮೇಲೇಳದ ಮಕ್ಕಳನ್ನು ಬೈಯುವುದು, ಹೊಡೆಯುವುದು ಮಾಡುವುದು ಇಂದಿನ ದಿನಗಳಲ್ಲಿ ಅತ್ಯಂತ ಅಪಾಯಕಾರಿಯಾಗಿದೆ. ಹೀಗೆ ಮಕ್ಕಳನ್ನು ಹೊಡೆದು-ಬಡೆದು ಅಥವಾ ಬೈಯುತ್ತಿರುವ ಕಾರಣಕ್ಕೆ ಅದೆಷ್ಟೋ ಸೂಕ್ಷ್ಮ ಮನಸ್ಸಿನ ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿಗಳು ವರದಿಯಾಗಿವೆ. ಇನ್ನು ಕೆಲವು ಮಕ್ಕಳು ಮನೆಬಿಟ್ಟು ಹೋಗಿದ್ದಾರೆ. ಕೆಲವು ಅತ್ಯಾಚಾರಕ್ಕೆ ಒಳಗಾಗಿರುವ ಬಾಲಕಿಯರ ವರದಿಗಳನ್ನು ನೋಡಿದಾಗ ಇದೇ ಫೋನ್​ ಗಲಾಟೆಯಲ್ಲಿಯೇ ಅವರು ಮನೆಬಿಟ್ಟು ಹೋಗಿರುವುದು ತಿಳಿದುಬಂದಿದೆ.

ಅಂಥದ್ದೇ ಆಘಾತಕಾರಿ ವಿಷಯವೊಂದು ಇದೀಗ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿ ಒಂದೇ ದಿನ ನಾಲ್ವರು ಬಾಲಕಿಯರು ಮನೆಬಿಟ್ಟು ಓಡಿ ಹೋಗಿದ್ದಾರೆ. ಇದಕ್ಕೆ ಕಾರಣ ಕೂಡ ಸ್ಮಾರ್ಟ್​ಫೋನ್​! ಈ ಎಲ್ಲಾ ಬಾಲಕಿಯರದ್ದೂ ಒಂದೇ ಕಥೆ. ಫೋನ್​ನಲ್ಲಿಯೇ ಸದಾ ಮುಳುಗುತ್ತಿದ್ದ ಅವರನ್ನು ಅವರವರ ಪಾಲಕರು ಗದರಿಸಿ, ಹೊಡೆದು ಮಾಡಿರುವ ಕಾರಣ, ಮನೆಬಿಟ್ಟು ಹೋಗಿರುವುದು ತಿಳಿದುಬಂದಿದೆ.

ಈ ನಾಲ್ವರು ಬಾಲಕಿಯರ ಪಾಲಕರು ಬೈಯುತ್ತಿದ್ದುದರಿಂದ ಕೋಪಿಸಿಕೊಂಡು ಮನೆಬಿಟ್ಟು ಹೋಗುವ ಪ್ಲ್ಯಾನ್​ ಹಾಕಿ ಹೋಗಿದ್ದಾರೆ.

ಅತ್ತ ಮಕ್ಕಳು ಕಾಣಿಸಿದೇ ಕಂಗಾಲಾಗಿ ಹೋದ ಪಾಲಕರು ದೂರು ದಾಖಲಿಸಿದ್ದಾರೆ. ನಂತರ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಸಿದ್ಧಾರ್ಥ ಕೌಶಲ್ ಅವರು ಕೂಡಲೇ ಕಾರ್ಯಪ್ರವೃತ್ತರಾಗಿ ಎಲ್ಲಾ ಠಾಣೆಗಳ ಪೊಲೀಸರಿಗೆ ಮಾಹಿತಿ ನೀಡಿ ಕಾರ್ಯಾಚರಣೆ ನಡೆಸಿದರು.

ಸಿಸಿಟಿವಿ ಸೇರಿದಂತೆ ಎಲ್ಲ ಉನ್ನತ-ತಂತ್ರಜ್ಞಾನವನ್ನು ಬಳಸಿದಾಗ ನೆರೆಯ ಗುಂಟೂರು ಜಿಲ್ಲೆಯಲ್ಲಿ 81 ಕಿ.ಮೀ ದೂರದಲ್ಲಿರುವ ವಿನುಕೊಂಡದಲ್ಲಿ ಬಾಲಕಿಯರನ್ನು ಅಲ್ಲಿಯ ಪೊಲೀಸರು ಪತ್ತೆಹಚ್ಚಿದ್ದಾರೆ. ನಂತರ ಬಾಲಕಿಯರನ್ನು ವಿಚಾರಿಸಿದಾಗ ಅವರು ವಿಷಯ ತಿಳಿಸಿದ್ದಾರೆ.

ಬಾಲಕಿಯರು ನಾಪತ್ತೆಗೊಂಡು ನಾಲ್ಕೇ ಗಂಟೆಗಳಲ್ಲಿ ಅವರ ಪಾಲಕರಿಗೆ ಮಕ್ಕಳನ್ನು ಒಪ್ಪಿಸಲಾಗಿದೆ. ಸದ್ಯ ಈ ಪ್ರಕರಣ ಸುಖಾಂತ್ಯವಾಗಿದೆ. ಆದರೆ ಎಲ್ಲ ಸಲವೂ ಹೀಗಾಗಲು ಸಾಧ್ಯವಿಲ್ಲ ಅಲ್ಲವೆ?

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net