ಕರ್ನಾಟಕ V/S ತಮಿಳುನಾಡು: ಮೇಕೆದಾಟು ಯೋಜನೆ- ರಾಷ್ಟ್ರೀಯ ಹಸಿರುಪೀಠದಲ್ಲಿದ್ದ ವಿವಾದಕ್ಕೆ ಬಿತ್ತು ತೆರೆ

mekedatu
Published on

ನವದೆಹಲಿ: ರಾಜ್ಯದ ಮಹಾತ್ವಕಾಂಕ್ಷೆಯ ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯಲ್ಲಿ ಇದ್ದ ವಿವಾದಕ್ಕೆ ತೆರೆ ಬಿದ್ದಿದ್ದು, ಈ ವಿವಾದದ ಮಧ್ಯೆ ತಾನು ಪ್ರವೇಶಿಸುವುದಿಲ್ಲ ಎಂದು ಮಂಡಳಿ ಹೇಳಿದೆ.

ಕಾವೇರಿಯ ಹೆಚ್ಚುವರಿ ನೀರನ್ನು ತಡೆದು ಬೆಂಗಳೂರು ಮತ್ತು ಸುತ್ತಮುತ್ತಲ ಪ್ರದೇಶಗಳ ಜನರಿಗೆ ಕುಡಿಯುವ ನೀರು ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಮೇಕೆದಾಟು ಯೋಜನೆ ರೂಪಿಸಿದೆ. ಈ ಕಾಮಗಾರಿಗೆ ತಮಿಳುನಾಡು ಸರ್ಕಾರ ತಕರಾರು ತೆಗೆದ ಪರಿಣಾಮ ಈ ಸ್ಥಳದಲ್ಲಿ ಯಾವುದೇ ಕಾಮಗಾರಿ ಆರಂಭಿಸಲಾಗಿಲ್ಲ. ಈ ಬಗ್ಗೆ ತಮಿಳುನಾಡು ಸರ್ಕಾರ ಈ ಯೋಜನೆಗೆ ಅನುಮತಿ ನೀಡದಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮನವಿ ಮಾಡಿದೆ.

ಈ ಮಧ್ಯೆಯೇ, ಮೇಕೆದಾಟು ಯೋಜನೆಯಿಂದ ಪರಿಸರಕ್ಕೆ ಹಾನಿಯಾಗುತ್ತಿರುವ ಬಗ್ಗೆ ಚೆನ್ನೈನಲ್ಲಿ ಪ್ರಕಟವಾದ ರಾಷ್ಟ್ರಮಟ್ಟದ ಇಂಗ್ಲಿಷ್‌ ಪತ್ರಿಕೆಯೊಂದು ವರದಿ ಪ್ರಕಟ ಮಾಡಿತ್ತು. ಈ ಯೋಜನೆ ಅನುಷ್ಠಾನಗೊಳಿಸಲು ಕರ್ನಾಟಕವು ಅಪಾರ ಪ್ರಮಾಣದ ಸಸ್ಯ ಸಂಪತ್ತನ್ನು ನಾಶ ಮಾಡುತ್ತದೆ ಎಂದು ಅದರಲ್ಲಿ ಉಲ್ಲೇಖವಾಗಿತ್ತು. ಇದನ್ನು ನೋಡಿದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ಸ್ವಯಂ ಪ್ರೇರಿತವಾಗಿ (ಸುವೋ ಮೋಟೋ) ದೂರು ದಾಖಲಿಸಿಕೊಂಡಿತ್ತು.

ನಂತರ ವಿಚಾರಣೆ ವೇಳೆ, ಪತ್ರಿಕೆಯು ಒನ್‌ಸೈಡೆಡ್‌ ವರದಿ ಮಾಡಿದ್ದು, ಕರ್ನಾಟಕದ ಬಗ್ಗೆ ವಿರುದ್ಧವಾಗಿ ಬರೆದಿದೆ. ಈಗಾಗಲೇ ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಎಲ್ಲ ರೀತಿಯ ಕ್ರಮ ತೆಗೆದುಕೊಂಡಿದೆ, ಆ ಬಗ್ಗೆ ವರದಿಯಲ್ಲಿ ಉಲ್ಲೇಖವಾಗಿಲ್ಲ, ಮಾತ್ರವಲ್ಲದೇ ಈ ಯೋಜನೆ ವಿರೋಧಿಸಿ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯ ಬಗ್ಗೆಯೂ ವರದಿಯಲ್ಲಿ ಉಲ್ಲೇಖವಾಗಿಲ್ಲ ಎಂದು ಕರ್ನಾಟಕದ ಪರ ವಕೀಲರು ನ್ಯಾಯಮಂಡಳಿಗೆ ಮಾಹಿತಿ ನೀಡಿದ್ದರು.

ಕರ್ನಾಟಕದ ವಾದವನ್ನು ಆಲಿಸಿರುವ ನ್ಯಾಯಮಂಡಳಿಯು ಈ ಹಂತದಲ್ಲಿ ನಾವು ಇದರ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಳ್ಳುವುದಿಲ್ಲ ಹಾಗೂ ಮೇಕೆದಾಟು ಯೋಜನೆಯ ವಿರುದ್ಧವಾಗಿ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯ ವಿಚಾರಣೆಯು ಇನ್ನೂ ಇತ್ಯರ್ಥಕ್ಕೆ ಬಾಕಿ ಇರುವ ಹಿನ್ನೆಲೆಯಲ್ಲಿ, ಈ ಬಗ್ಗೆ ನಾವು ತೀರ್ಪು ನೀಡುವುದಿಲ್ಲ ಎಂದು ಅರ್ಜಿಯನ್ನು ಇತ್ಯರ್ಥಗೊಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net