

ನ್ಯೂಯಾರ್ಕ್: ನ್ಯೂಯಾರ್ಕ್ ಸ್ಟೇಟ್ ಅಸೆಂಬ್ಲಿಗೆ ನಡೆದ ಚುನಾವಣೆಯಲ್ಲಿ ಇಂಡೋ- ಅಮೆರಿಕನ್ ಚಲನಚಿತ್ರ ನಿರ್ದೇಶಕಿ, ನಿರ್ಮಾಪಕಿ ಮೀರಾ ನಾಯರ್ ಅವರ ಮಗ ಭಾರತೀಯ-ಉಗಾಂಡಾದ ಜೊಹ್ರಾನ್ ಕ್ವಾಮೆ ಮಮ್ದಾನಿ ಜಯಭೇರಿ ಬಾರಿಸಿದ್ದಾರೆ.
ನ್ಯೂಯಾರ್ಕ್ ರಾಜ್ಯ ಕಚೇರಿಗೆ ಆಯ್ಕೆಯಾಗಿರುವ ಇಬ್ಬರು ಭಾರತೀಯರದಲ್ಲಿ ಇವರೂ ಒಬ್ಬರು. ಈ ಕುರಿತು ಟ್ವೀಟ್ ಮಾಡಿ ಜೊಹ್ರಾನ್, 'ನಾನು ಗೆದ್ದಿದ್ದೇನೆ. ಶ್ರೀಮಂತರಿಗೆ ತೆರಿಗೆ ವಿಧಿಸಲು, ಸಮಸ್ಯೆಗಳನ್ನು ಪರಿಹರಿಸಲು, ಬಡವರಿಗೆ ಮನೆ ಮತ್ತು ಸಮಾಜವಾದಿ ನ್ಯೂಯಾರ್ಕ್ ನಿರ್ಮಿಸಲು ಶ್ರಮಿಸುತ್ತೇನೆ. ಆದರೆ, ಇದನ್ನು ನನ್ನೊಬ್ಬನಿಂದಲೇ ಮಾಡಲು ಸಾಧ್ಯವಿಲ್ಲ.
ಸಮಾಜವಾದವನ್ನು ಗೆಲ್ಲಲು, ನಮಗೆ ಬಹುಜಾತಿಯ ಕಾರ್ಮಿಕ ವರ್ಗದ ಬೃಹತ್ ಆಂದೋಲನ ಬೇಕಾಗುತ್ತದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಕಳೆದ ಜೂನ್‌ನಲ್ಲಿ ನಡೆದ ಡೆಮಾಕ್ರಟಿಕ್ ಪ್ರಾಥಮಿಕ ಚುನಾವಣೆಯಲ್ಲಿ ಹಾಲಿ ಸದಸ್ಯ ಅರಾವೆಲ್ಲಾ ಸಿಮೋಟಾಸ್ ಅವರನ್ನು ಸೋಲಿಸಿದ ನಂತರ 36ನೇ ಅಸೆಂಬ್ಲಿ ಜಿಲ್ಲೆಯ ಡೆಮಾಕ್ರಟಿಕ್ ಅಭ್ಯರ್ಥಿಯಾಗಿ ಸಾರ್ವತ್ರಿಕ ಚುನಾವಣೆಯಲ್ಲಿ 29 ವರ್ಷದ ಮಮ್ದಾನಿ ಅವಿರೋಧವಾಗಿ ಸ್ಪರ್ಧಿಸಿದ್ದರು.