

ಪುಣೆ : ಪ್ರಿಯತಮೆಗೆ ಗಿಫ್ಟ್ ನೀಡಲು ಎಂಬಿಬಿಎಸ್ ವಿದ್ಯಾರ್ಥಿಯೊಬ್ಬ ಚಿನ್ನದ ಅಂಗಡಿಯಲ್ಲಿ ಕನ್ನ ಹಾಕಿ ಸಿಕ್ಕಿಬಿದ್ದಿದ್ದಾನೆ.
ಈ ಘಟನೆ ಪುಣೆಯಲ್ಲಿ ನಡೆದಿದೆ. ಎರಡು ಚಿನ್ನದಂಗಡಿಯಲ್ಲಿ ಚಿನ್ನದ ಉಂಗುರು ಕಳ್ಳತನ ಮಾಡಿದ್ದ ಈತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪ್ರತಿಷ್ಠಿತ ಕಾಲೇಜಿನಲ್ಲಿ ಎಂಬಿಬಿಎಸ್ 3ನೇ ವರ್ಷ ವ್ಯಾಸಂಗ ಮಾಡುತ್ತಿರುವ ಹನುಮಂತ ರೋಖಡೆ ಇಂಥದ್ದೊಂದು ಕೃತ್ಯಕ್ಕೆ ಇಳಿದವ.
ತನ್ನ ಗೆಳೆಯ ವೈಭವ್ ಸಂಜಯ್ ಜತೆಗೆ ಈತ ಕಳ್ಳತನ ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾನೆ. ಪ್ರೇಮದಲ್ಲಿ ಸಿಲುಕಿದ್ದ ಹನುಮಂತ ಗೆಳತಿಯನ್ನು ಓಲೈಸಿಕೊಳ್ಳಲು ದುಬಾರಿ ಗಿಫ್ಟ್ ಕೊಡಲು ಮುಂದಾಗಿದ್ದ. ಆದರೆ ಚಿನ್ನದ ರೇಟ್ ಗೊತ್ತಲ್ಲ! ಅಷ್ಟು ಹಣ ಈತನ ಬಳಿ ಇರಲಿಲ್ಲ. ಅದಕ್ಕಾಗಿ ಕದಿಯುವ ಪ್ಲ್ಯಾನ್ ಮಾಡಿದ್ದಾನೆ. ಈ ಬಗ್ಗೆ ತನ್ನ ಸ್ನೇಹಿತ ವೈಭವ್ ಜತೆ ಚರ್ಚೆ ಮಾಡಿದ್ದು, ಅದಕ್ಕೆ ಅವನೂ ಒಪ್ಪಿಕೊಂಡಿದ್ದಾನೆ.
ಯೋಜನೆಯಂತೆ ಇಬ್ಬರೂ ಚಿನ್ನದ ಅಂಗಡಿಗೆ ಬಂದು ಉಂಗುರ ತೋರಿಸಲು ಹೇಳಿದ್ದಾರೆ. ಉಂಗುರಗಳನ್ನು ಅಂಗಡಿಯಾತ ಮುಂದಿಟ್ಟಿದ್ದಾನೆ. ಅವುಗಳನ್ನು ಹಾಕಿ ನೋಡುವಂತೆ ಮಾಡುತ್ತಿರುವಾಗ ಮೊದಲೇ ಮಾಡಿಕೊಂಡಿರುವ ಪ್ಲ್ಯಾನ್ ನಂತೆ ಹೊರಗಡೆಯಿಂದ ಅವನ ಸ್ನೇಹಿತ ಬೈಕ್‌ನಲ್ಲಿ ಬಂದು ಕರೆದಿದ್ದಾನೆ. ಹಾಕಿಕೊಂಡಿದ್ದ ಉಂಗುರದ ಜತೆ ಪರಾರಿಯಾಗಿದ್ದಾನೆ ಹನುಮಂತ.
ಚಿನ್ನದ ಅಂಗಡಿ ಮಾಲೀಕ ಪೊಲೀಸರಿಗೆ ದೂರು ದಾಖಲಿಸಿದ್ದರು. ಸಿಸಿಟಿವಿಯಲ್ಲಿ ಎಲ್ಲರೂ ಸೆರೆಯಾಗಿತ್ತು. ನಂತರ ಅದನ್ನು ಆಧರಿಸಿ ತನಿಖೆ ಕೈಗೊಂಡಾಗ ಇಬ್ಬರೂ ಸಿಕ್ಕಿಬಿದ್ದಿದ್ದಾರೆ. ಎರಡೂವರೆ ಲಕ್ಷ ಮೌಲ್ಯದ ಚಿನ್ನದ ಉಂಗುರ ವಶಕ್ಕೆ ಪಡೆದು ದೂರು ದಾಖಲಿಸಿಕೊಂಡಿದ್ದಾರೆ. ವಿಚಾರಣೆ ವೇಳೆ ತನ್ನ ಸ್ನೇಹಿತೆಯ ವಿಷಯವನ್ನು ಬಾಯಿಬಿಟ್ಟಿದ್ದಾನೆ ಹನುಮಂತ.