ಮಾಸ್ಕ್​ ಹಾಕಲ್ವಾ? ದಂಡಕ್ಕೆ ದುಡ್ಡಿಲ್ವಾ? ಹಾಗಿದ್ರೆ ಕಸ ಗುಡಿಸೋಕೆ ರೆಡಿಯಾಗಿ...

mask
Published on

ಮುಂಬೈ: ಕ್ಷಣ ಕ್ಷಣಕ್ಕೂ ಆತಂಕ ಸೃಷ್ಟಿಸುತ್ತಿರುವ ಕರೊನಾದಿಂದ ತಕ್ಕಮಟ್ಟಿಗಾದರೂ ಪಾರಾಗಬಹುದು ಎನ್ನುವ ಕಾರಣಕ್ಕೆ ಮಾಸ್ಕ್​ ಕಡ್ಡಾಯ ಮಾಡಿ ಹಲವು ತಿಂಗಳುಗಳೇ ಕಳೆದಿವೆ. ಇದು ಕರ್ನಾಟಕ, ಭಾರತ ಮಾತ್ರವಲ್ಲದೇ ಇಡೀ ವಿಶ್ವದಲ್ಲಿಯೇ ಈ ನಿಯಮ ಜಾರಿಗೆ ಬಂದಿದೆ.

ಮಾಸ್ಕ್​ನಿಂದ ಕರೊನಾ ಹರಡುವಿಕೆಯನ್ನು ತಕ್ಕಮಟ್ಟಿಗೆ ನಿಯಂತ್ರಿಸಬಹುದು ಎನ್ನುವ ಕಾರಣಕ್ಕೆ ಈ ನಿಯಮ ಜಾರಿಗೆ ಬಂದಿದೆ.

ಆದರೆ ಕೆಲವರಿಗೆ ಮಾಸ್ಕ್​ ಧರಿಸುವುದು ಎಂದರೆ ಏನೋ ಅಸಡ್ಡೆ. ಯಾರು ಏನು ಮಾಡುತ್ತಾರೆ ನೋಡಿಯೇ ಬಿಡೋಣ ಎಂದುಕೊಂಡರೆ, ಇನ್ನು ಕೆಲವರಿಗೆ ಈ ಮಾಸ್ಕ್​ ಏನೋ ಕಿರಿಕಿರಿ ಎನ್ನಿಸುತ್ತದೆ. ಒಟ್ಟಿನಲ್ಲಿ ಕಾರಣ ಏನೇ ಇರಲಿ, ಮಾಸ್ಕ್​ ಧರಿಸದೇ ಪೊಲೀಸರ ಕೈಯಲ್ಲಿ ಸಿಕ್ಕಿಬಿದ್ದರೆ 250 ರೂಪಾಯಿ ದಂಡ ತೆರಲೇಬೇಕು.

ಇದೀಗ ಪೊಲೀಸರಿಗೆ ಭಾರಿ ಟಾರ್ಗೆಟ್​ ಕೂಡ ನೀಡಿರುವ ಹಿನ್ನೆಲೆಯಲ್ಲಿ ಹುಡುಕಿ ಹುಡುಕಿ ಫೈನ್​ ಹಾಕುತ್ತಾರೆ. ಆದರೆ ದಂಡ ಕಟ್ಟಲು ದುಡ್ಡಿಲ್ಲ ಎಂದು ನೆಪವೊಡ್ಡುವವರೇ ಹೆಚ್ಚು. ಇದಕ್ಕೇ ಇಲ್ಲೊಂದು ಕಡೆ ಹೊಸ ಪ್ಲ್ಯಾನ್​ ಹುಡುಕಿರುವ ಪೊಲೀಸರು ದಂಡ ಕಟ್ಟಲು ದುಡ್ಡಿಲ್ಲ ಎಂದರೆ ಪೊರಕೆಯನ್ನು ಕೈಗೆ ಕೊಡುತ್ತಾರೆ. ಏಕೆಂದರೆ ಅವರು ರಸ್ತೆಯ ಕಸವನ್ನು ಗುಡಿಸಬೇಕಾಗುತ್ತದೆ!

ಇಂಥದ್ದೊಂದು ನಿಯಮ ಸದ್ಯ ಮುಂಬೈನಲ್ಲಿ ಬಂದಿದೆ. ಅಲ್ಲಿ ಮಾಸ್ಕ್​ ಹಾಕದವರಿಗೆ 200 ರೂಪಾಯಿ ದಂಡ ವಿಧಿಸಲಾಗುತ್ತದೆ. ಒಂದು ವೇಳೆ ಕಟ್ಟಲು ಹಣ ಇಲ್ಲ ಎಂದು ನೆಪವೊಡ್ಡಿದರೆ ಕಡ್ಡಾಯವಾಗಿ ರಸ್ತೆಯನ್ನು ಗುಡಿಸಲೇಬೇಕು!

ಸದ್ಯ ಏನೋ ಈ ನಿಯಮ ಮುಂಬೈನಲ್ಲಿ ಇದೆ. ಅಲ್ಲಿ ಸಕ್ಸಸ್​ ಆದರೆ ನಮ್ಮಲ್ಲಿಯೂ ನಿಯಮ ಜಾರಿಯಾಗುವ ದಿನ ದೂರವಿಲ್ಲ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net