

ಆ್ಯಮ್‌ಸ್ಟರ್‌ಡ್ಯಾಮ್: ಕರೊನಾ ವೈರಸ್ ಹಿನ್ನೆಲೆಯಲ್ಲಿ ಇದೀಗ ಎಲ್ಲೆಡೆಗಳಲ್ಲಿ ಮಾಸ್ಕ್‌ಗಳದ್ದೇ ಕಾರುಬಾರು. ಮಾಸ್ಕ್ ಧರಿಸುವುದರಿಂದ ಕರೊನಾ ವೈರಸ್ ಹರಡುವಿಕೆಯನ್ನು ಸ್ವಲ್ಪ ಮಟ್ಟಿಗಾದರೂ ತಗ್ಗಿಸಬಹುದು ಎಂಬ ನಿಟ್ಟಿನಲ್ಲಿ ಈ ಒಂದು ನಿಯಮ ಜಾರಿ ಮಾಡಲಾಗಿದೆ.
ವಿಮಾನದಲ್ಲಿ ಹೋಗುವಾಗಲೂ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಆದರೆ ವಿಮಾನದಲ್ಲಿ ಸಂಚರಿಸುತ್ತಿದ್ದ ಕುಡುಕನೊಬ್ಬ ಮಾಸ್ಕ್ ಧರಿಸಲು ಹಿಂದೇಟು ಹಾಕಿದ ಕಾರಣ, ಸಹ ಪ್ರಮಾಣಿಕರು ಆತನ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ನೆದರ್‌ಲ್ಯಾಂಡ್‌ನ ರಾಜಧಾನಿಯಾದ ಆ್ಯಮ್‌ಸ್ಟರ್‌ಡ್ಯಾಮ್‌ನಿಂದ ಸ್ಪ್ಯಾನಿಷ್ ದ್ವೀಪ ಇಬಿಝಾಕ್ಕೆ ಹೊರಟ ವಿಮಾನದಲ್ಲಿ ಮಾರಾಮಾರಿ ನಡೆದಿದ್ದು, ಇದರ ವಿಡಿಯೋ ಇದೀಗ ವೈರಲ್ ಆಗಿದೆ.
ಮದ್ಯಪಾನ ಮಾಡಿದ್ದ ಇಬ್ಬರು ಪ್ರಯಾಣಿಕರು ಮಾಸ್ಕ್ ಧರಿಸಿರಲಿಲ್ಲ. ಸಹ ಪ್ರಯಾಣಿಕರು ಮಾಸ್ಕ್ ಧರಿಸುವಂತೆ ವಿನಂತಿ ಮಾಡಿಕೊಂಡಿದ್ದಾರೆ. ಆದರೆ ಅವರು ಮಾತನ್ನು ಕೇಳಲಿಲ್ಲ.
ಎಷ್ಟೇ ಹೇಳಿದರೂ ಜಪ್ಪಯ್ಯ ಎಂದರೂ ತಾವು ಮಾಸ್ಕ್ ಧರಿಸುವುದಿಲ್ಲ ಎಂದು ವಾದ ಮಾಡಿದರು. ಈ ವಿಷಯವನ್ನು ಪೈಲಟ್‌ಗೂ ತಲುಪಿಸಲಾಯಿತು. ಅವರು ಕೂಡ ಮಾಸ್ಕ್ ಧರಿಸುವಂತೆ ಅನೌನ್ಸ್ ಮಾಡಿದರು. ಆದರೂ ಈ ಇಬ್ಬರು ಅದನ್ನು ಕಿವಿಯ ಮೇಲೆ ಹಾಕಿಕೊಳ್ಳಲಿಲ್ಲ.
ನಂತರ ತಾಳ್ಮೆ ಕಳೆದುಕೊಂಡ ಪ್ರಯಾಣಿಕರು ಈ ಇಬ್ಬರನ್ನೂ ಚೆನ್ನಾಗಿ ಹೊಡೆದರು. ಇಷ್ಟಾದ ಮೇಲೆ ಮಾಸ್ಕ್ ಧರಿಸಲು ಆ ವ್ಯಕ್ತಿಗಳು ಒಪ್ಪಿದರು. ವಿಮಾನ ಲ್ಯಾಂಡ್ ಆದ ಕೂಡಲೇ ಇಬ್ಬರನ್ನೂ ಪೊಲೀಸರಿಗೆ ಒಪ್ಪಿಸಲಾಯಿತು. . ಇವರಿಬ್ಬರೂ ಇಂಗ್ಲೆಂಡ್ ಮೂಲದವರಾಗಿದ್ದು ಕಂಠಪೂರ್ತಿ ಮದ್ಯಸೇವನೆ ಮಾಡಿದ್ದರು ಎನ್ನಲಾಗಿದೆ.
ಹಲ್ಲೆಯನ್ನು ಕಂಡು ಮಕ್ಕಳು ಹೆದರಿ ಚೀರಾಟ ನಡೆಸಿರುವ ಧ್ವನಿ ಕೂಡ ವಿಡಿಯೋದಲ್ಲಿ ದಾಖಲಾಗಿದೆ.