ವಧುವಿನ ಕಾಲಿಗೆ ಬಿದ್ದ ವರ: ಹುಬ್ಬೇರಿಸಿದವರ ಕಣ್ಣಲ್ಲಿ ಆನಂದಬಾಷ್ಪ... ನಿನ್ನಂಥ ಪತಿಯೇ ಎಲ್ಲರಿಗೂ ಸಿಗಲಪ್ಪ ಎಂದು ಆಶೀರ್ವಾದ

groom
Published on

ಲಖನೌ: ಹಿಂದೂ ಧರ್ಮದಲ್ಲಿ ಪತಿಯನ್ನು ದೇವರ ಸಮಾನ ಎನ್ನುತ್ತಾರೆ. ಇದೇ ಕಾರಣಕ್ಕೆ ಪತ್ನಿಯಾದವಳು ಪತಿಯ ಕಾಲಿಗೆ ನಮಸ್ಕರಿಸುವುದು ಸಹಜ. ಅದರಲ್ಲಿಯೂ ಮದುವೆಯ ದಿನ ಪತಿ ಸೇರಿದಂತೆ ಹಿರಿಯರ ಆಶೀರ್ವಾದ ಪಡೆಯುವುದು ಹಿಂದೂ ಸಂಪ್ರದಾಯ.

ಆದರೆ ಇಲ್ಲೊಂದು ಮದುವೆಯಲ್ಲಿ ವರನೇ ವಧುವಿನ ಕಾಲಿಗೆ ಬಿದ್ದಿದ್ದಾನೆ. ಹೀಗೆ ಮಾಡುತ್ತಿದ್ದಂತೆಯೇ ಮದುವೆಗೆ ಸೇರಿದ ಜನ ದಿಗ್ಭ್ರಮೆಗೊಂಡಿದ್ದಾರೆ. ಇದಕ್ಕೆ ಕಾರಣ, ಈ ರೀತಿ ಚಿಕ್ಕವರ ಕಾಲಿಗೆ ಬೀಳುವುದು ಶ್ರೇಯಸ್ಸಲ್ಲ ಎನ್ನುವ ಮಾತಿದೆ. ಅದರಲ್ಲಿಯೂ ಪತ್ನಿಗೆ ಕಾಲಿಗೆ ಪತಿ ಬೀಳುವುದಾ? ಶಾಂತಂ ಪಾಪಂ ಎಂದರು ಜನ.

ಇದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್‌ ಆಗಿದ್ದು, ಅಲ್ಲಿಯೂ ಫೋಟೋ ನೋಡಿದಾಕ್ಷಣ ಛೇ! ಇದೆಂಥ ಪದ್ಧತಿ ಎಂದು ಹುಬ್ಬೇರಿಸಿದವರೇ ಹೆಚ್ಚು. ಆದರೆ ನಂತರ ಇದಕ್ಕೆ ಕಾರಣವನ್ನು ವರ ಹೇಳಿದಾಗ ಮದುವೆ ಮನೆಯಲ್ಲಿ ಇರುವವರು ಎಲ್ಲರೂ ಚಪ್ಪಾಳೆ ತಟ್ಟಿದರೆ, ಕಮೆಂಟಿನಲ್ಲಿ ಕೂಡ ಸಾಕಷ್ಟು ಮೆಚ್ಚುಗೆ ಮಾತು ವ್ಯಕ್ತವಾಗಿದೆ.

ಅಷ್ಟಕ್ಕೂ ಹೀಗೆ ತಾನು ತನ್ನ ಪತ್ನಿಯ ಕಾಲಿಗೆ ಬೀಳಲು ಈ ವರ ಕೊಟ್ಟ ಕಾರಣ ಹೀಗಿದೆ ನೋಡಿ..,

ಇದು ನನ್ನ ಮನೆಯ ಸಂಪ್ರದಾಯ. ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇದನ್ನು ನಾನು ಮುಂದುವರೆಸುತ್ತಿದ್ದೇನೆ ಅಷ್ಟೇ. ಗೃಹಲಕ್ಷ್ಮಿಯಾಗಿರುವ ಪತ್ನಿಯ ಕಾಲಿಗೆ ಬಿದ್ದರೆ ಅಚ್ಚರಿ ಪಡಬೇಕಿಲ್ಲ. ಏಕೆಂದರೆ

* ಈಕೆ ನಮ್ಮ ಮನೆಯ ವಂಶಾವಳಿಯನ್ನು ಮುಂದುವರೆಸುವ ದೇವತೆ

* ಹೆಣ್ಣು ಪ್ರತಿಯೊಂದು ಮನೆಯ ಭಾಗ್ಯಲಕ್ಷ್ಮಿ

* ಅವಳು ನನಗೆ ತಂದೆಯಾಗುವ ಭಾಗ್ಯ ಕಲ್ಪಿಸುತ್ತಾಳೆ.

* ವೃದ್ಧರಾಗಿರುವ ನನ್ನ ತಂದೆ-ತಾಯಂದಿರನ್ನು ಕೊನೆಯವರೆಗೂ ಪೋಷಣೆ ಮಾಡುತ್ತಾಳೆ.

* ತಾನು ಹುಟ್ಟಿದ ಮನೆಯನ್ನು ಬಿಟ್ಟುಬಂದು ಆಕೆಯ ಹೆತ್ತವರನ್ನು ತೊರೆದು ನಮ್ಮ ಮನೆ ಬೆಳಗಲು ಬರುವ ಭಾಗ್ಯದೇವತೆ

* ಪ್ರೀತಿಪಾತ್ರರೊಂದಿಗಿನ ಸಂಬಂಧವನ್ನು ಕಡಿದುಕೊಂಡು ಹೊಸ ಸಂಬಂಧ ಬೆಸೆಯುತ್ತಿದ್ದಾಳೆ

* ಹೆರಿಗೆಯ ಸಮಯದಲ್ಲಿ ನನ್ನ ಮಗುವಿಗಾಗಿ ಎಲ್ಲಾ ನೋವನ್ನು ನುಂಗಿ ಸಾವನ್ನು ಜಯಿಸಿ ಜನ್ಮ ನೀಡುತ್ತಾಳೆ. ಅದಕ್ಕೇ ತಾನೇ ಹೆರಿಗೆ ಎನ್ನುವುದು ಮಹಿಳೆಗೆ ಪುನರ್ಜನ್ಮ ಎನ್ನುವುದು?

* ಸೊಸೆ ಗಂಡನ ಮನೆಯ ಬೇರು

* ಈಕೆಯ ನಡವಳಿಕೆಯ ಆಧಾರದ ಮೇಲೆಯೇ ಸಮಾಜ ನನ್ನನ್ನು ಗುರುತು ಹಿಡಿಯುತ್ತದೆ.

ಅವಳು ಇಷ್ಟೆಲ್ಲಾ ಮಾಡುವ ದೇವತೆಯಾಗಿರುವಾಗ ಸ್ವಲ್ಪ ಗೌರವ ಕೊಟ್ಟರೆ ತಪ್ಪೇನಿದೆ ಎಂದಿದ್ದಾನೆ ವರ. ಹೆಣ್ಣಾದವಳೇ ಏಕೆ ಯಾವಾಗಲು ತಗ್ಗಿಬಗ್ಗಿ ನಡೆಯಬೇಕು ಎಂಬ ಸಂಪ್ರದಾಯವೇಕೆ? ಆಕೆ ನನಗಾಗಿ ಇಷ್ಟೆಲ್ಲಾ ಮಾಡುತ್ತಿರುವಾಗ ಈ ಗೌರವ ಅತ್ಯಲ್ಪ ಎಂದಿದ್ದಾನೆ. ಇದನ್ನು ಕೇಳಿದವರು ಆನಂದಬಾಷ್ಪ ಹರಿಸಿ ಎಲ್ಲರಿಗೂ ನಿನ್ನಂಥ ಪತಿಯೇ ಸಿಗಲಪ್ಪ ಎಂದು ಬಾಯ್ತುಂಬ ಹರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net