ಮದುವೆ ಗಿಫ್ಟ್​ ತೆರೆದ ವಧು-ವರರು ಆಸ್ಪತ್ರೆಗೆ ದಾಖಲು! ಅಕ್ಕನ ಬಾಯ್​ಫ್ರೆಂಡ್​ ತಂದಿಟ್ಟ ಮಹಾ ಸಂಕಟ

gift
Published on

ಗಾಂಧಿನಗರ (ಗುಜರಾತ್): ತಾನು ಪ್ರೀತಿಸಿದ ಹುಡುಗಿ ಕೈಕೊಟ್ಟಳು ಎನ್ನುವ ಕಾರಣಕ್ಕೆ ಸಿಟ್ಟುಗೊಂಡ ಭಗ್ನಪ್ರೇಮಿಯೊಬ್ಬ ಆಕೆಯ ತಂಗಿಯ ಮೇಲೆ ಸೇಡು ತೀರಿಸಿಕೊಂಡಿದ್ದಾನೆ! ತಂಗಿಯ ಮದುವೆಗೆ ಸ್ಫೋಟಕ ಉಡುಗೊರೆ ನೀಡಿರುವ ಮೂಲಕ ನೂತನ ವಧು-ವರರು ಆಸ್ಪತ್ರೆ ಸೇರುವಂತೆ ಮಾಡಿದ್ದಾನೆ.

ದಕ್ಷಿಣ ಗುಜರಾತ್‌ನ ನವಸಾರಿ ಜಿಲ್ಲೆಯ ಮಿಂಧಬರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಲತೀಶ್​ ಗವೀತ್​ ಹಾಗೂ ಸಲ್ಮಾ ಎನ್ನುವವರ ಮದುವೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಸಲ್ಮಾಳ ಅಕ್ಕನ ಮಾಜಿ ಪ್ರೇಮಿ ರಾಜು ಪಟೇಲ್​ ಎಂಬಾತ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.

ಮದುವೆಗೆ ಬಂದಿದ್ದ ಈತ ಒಂದು ಗಿಫ್ಟ್​ ಕೊಟ್ಟು ಹೋಗಿದ್ದ. ಮದುವೆಯ ನಂತರ ಎಲ್ಲಾ ಗಿಫ್ಟ್​ಗಳನ್ನು ವಧು-ವರರು ಮತ್ತು ಕುಟುಂಬಸ್ಥರು ತೆರೆಯುತ್ತಿದ್ದರು. ರಾಜು ಕೊಟ್ಟ ಗಿಫ್ಟ್​ ಅನ್ನು ಮದುಮಗ ತೆರೆಯುತ್ತಿದ್ದ. ಅದರಲ್ಲಿ ರೀಚಾರ್ಜ್​ ರೀತಿಯ ಒಂದು ವಸ್ತು ಕಾಣಿಸಿತು. ಅದನ್ನು ಪರಿಶೀಲನೆ ಮಾಡುತ್ತಿದ್ದಾಗಲೇ ಅದು ಸ್ಫೋಟಗೊಂಡಿದೆ. ಈ ಘಟನೆಯಲ್ಲಿ ವರನ ಕಣ್ಣಿಗೆ ಭಾರಿ ಹಾನಿಯಾಗಿದೆ, ಮಾತ್ರವಲ್ಲದೇ ಆತ ಗಂಭೀರವಾಗಿ ಗಾಯಗೊಂಡಿದ್ದಾನೆ. ಮದುಮಗಳು ಸಲ್ಮಾ ಕೂಡ ಆತನ ಪಕ್ಕದಲ್ಲಿಯೇ ಇದ್ದಳು. ಆಕೆ ಸೇರಿದಂತೆ ಅಲ್ಲಿದ್ದ ಸಂಬಂಧಿಕರಿಗೂ ಗಾಯಗಳಾಗಿವೆ. ಎಲ್ಲರನ್ನೂ ಈಗ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಪೈಕಿ ವರ ಲತೀಶ್​ ಗವೀತ್​ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.

ಪೊಲೀಸರಲ್ಲಿ ಈ ಕುರಿತು ದೂರು ದಾಖಲು ಮಾಡಲಾಗಿತ್ತು. ಪೊಲೀಸರು ತನಿಖೆ ಕೈಗೊಂಡಾಗ ಈ ಉಡುಗೊರೆ ರಾಜು ನೀಡಿರುವುದು ಬೆಳಕಿಗೆ ಬಂದಿದೆ. ತನಿಖೆ ನಡೆಸಿದಾಗ ಆತ ವಧುವಿನ ಅಕ್ಕನ ಮಾಜಿ ಬಾಯ್​ ಫ್ರೆಂಡ್​ ಎನ್ನುವುದು ತಿಳಿದುಬಂದಿದೆ. ಯಾರದ್ದೋ ಸಂಬಂಧಕ್ಕೆ ಇನ್ನಾರೋ ಆಸ್ಪತ್ರೆ ಸೇರುವಂತಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net