ಮನ್​ ಕಿ ಬಾತ್​: ರೇಡಿಯೋ ಮಾಲಾಮಾಲ್​- ಕೇಂದ್ರದ ಬೊಕ್ಕಸಕ್ಕೂ ಹರಿದು ಬಂತು ಹಣ

mann ki baath2
Published on

ನವದೆಹಲಿ: ಒಂದು ಕಾಲದಲ್ಲಿ ಭಾರಿ ಬೇಡಿಕೆಯಿದ್ದ ರೇಡಿಯೋದ ಪ್ರಸಿದ್ಧಿ ಹೋಗಿ ದಶಕಗಳೇ ಕಳೆದಿವೆ. ಆದರೆ ಏಳು ವರ್ಷಗಳ ಹಿಂದೆ ಶುರುವಾದ ಪ್ರಧಾನಿ ನರೇಂದ್ರ ಮೋದಿಯವರ ಮನ್​ ಕಿ ಬಾತ್​ ನಂತರ ರೇಡಿಯೋ ದೇಶ- ವಿದೇಶಿಗರ ಗಮನ ಸೆಳೆದಿದೆ.

ಬಹು ಪ್ರಸಿದ್ಧಿ ಹೊಂದಿರುವ ಮನ್​ ಕಿ ಬಾತ್​ ಕಾರ್ಯಕ್ರಮ ಶುರುವಾಗಿ ಏಳು ವರ್ಷಗಳು ಕಳೆದಿವೆ. ಪ್ರತಿ ತಿಂಗಳ ಕೊನೆಯ ಭಾನುವಾರ 11 ಗಂಟೆಗೆ ಆಕಾಶವಾಣಿ, ದೂರದರ್ಶನ, ಸಾಮಾಜಿಕ ಜಾಲತಾಣಗಳು ಹಾಗೂ 91 ಖಾಸಗಿ ಚಾನೆಲ್‍ಗಳು, ಕೇಬಲ್ ನೆಟ್‍ವರ್ಕ್, ಡಿಟಿಎಸ್ ವೇದಿಕೆಗಳಲ್ಲಿ ಪ್ರಸಾರವಾಗುತ್ತಿದೆ. ಈ ಏಳು ವರ್ಷಗಳಲ್ಲಿ ಜಾಹೀರಾತಿನಿಂದಾಗಿ ಕಾರ್ಯಕ್ರಮದಿಂದ ಸುಮಾರು 30.80 ಕೋಟಿ ರೂಪಾಯಿ ಆದಾಯ ಗಳಿಸಿದೆ. ಇದರಿಂದ ರೇಡಿಯೋ ಆದಾಯ ಡಬಲ್​ ಆಗಿದೆ.

ಈ ಕುರಿತು ರಾಜ್ಯಸಭೆಯಲ್ಲಿ ಲಿಖಿತ ಉತ್ತರದ ಮೂಲಕ ಮಾಹಿತಿ ನೀಡಿರುವ ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರಾಂಗ ಸಚಿವ ಅನುರಾಗ್ ಠಾಕೂರ್ ಅವರು, 2014ರಲ್ಲಿ ಆರಂಭವಾದ ಮನ್ ಕಿ ಬಾತ್ ಕಾರ್ಯಕ್ರಮ ಈವರೆಗೂ 78 ಸರಣಿಗಳಲ್ಲಿ ಪ್ರಸಾರವಾಗಿದ್ದು 30 ಕೋಟಿ ರೂಪಾಯಿ ಆದಾಯ ಗಳಿಸಿರುವುದಾಗಿ ಹೇಳಿದ್ದಾರೆ.

ಈ ಕುರಿತು ಪ್ರತಿವರ್ಷದ ಅಂಕಿಅಂಶ ನಿಡಿರುವ ಠಾಕೂರ್​, 2014-15ರಲ್ಲಿ 1.16 ಕೋಟಿ, 2015-16ರಲ್ಲಿ 2.18 ಕೋಟಿ, 2016-17ರಲ್ಲಿ 5.14, 2017-18ರಲ್ಲಿ 10.64 ಕೋಟಿ, 2018-19ರಲ್ಲಿ 7.47 ಕೋಟಿ, 2019-20ರಲ್ಲಿ 1.56 ಕೋಟಿ, 2020-21ರಲ್ಲಿ 1.02 ಕೋಟಿ ಆದಾಯ ಸೇರಿ ಒಟ್ಟು 30.80 ಕೋಟಿ ರೂಪಾಯಿ ಆದಾಯ ಬಂದಿದೆ ಎಂದು ಹೇಳಿದ್ದಾರೆ. ಬ್ರಾಡ್‍ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಾರ್ಕ್) ಪ್ರಕಾರ 2018ರಲ್ಲಿ ಆರು ಕೋಟಿಯಿದ್ದ ಪ್ರೇಕ್ಷಕರ ಸಂಖ್ಯೆ 2020ರ ವೇಳೆಗೆ 14.35 ಕೋಟಿಗೆ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net