ಸಮೋಸಾ ಕದ್ದು ಗುದದ್ವಾರದಲ್ಲಿ ಇಟ್ಟುಕೊಂಡ ಕೈದಿ- ಕಾರಣ ಕೇಳಿ ‘ಅಯ್ಯೋ ಪಾಪಾ‘ ಎಂದ ಪೊಲೀಸರು!

samosa
Published on

ಬ್ರಿಟನ್‌: ಕರೊನಾ, ಲಾಕ್‌ಡೌನ್‌ ಕಾರಣದಿಂದಾಗಿ ಅನೇಕ ದೇಶಗಳಲ್ಲಿ ಆಹಾರದ ಕೊರತೆಯುಂಟಾಗಿದೆ. ಇನ್ನಂತೂ ಕೆಲವು ದೇಶಗಳಲ್ಲಿ ಇರುವ ಜೈಲುಗಳಲ್ಲಿ ಕೈದಿಗಳಿಗೆ ಸಂಕಷ್ಟ ಎದುರಾಗಿದೆ.

ಅಂಥದ್ದೇ ಒಂದು ಸಂಕಷ್ಟ ಎದುರಾದದ್ದು ಬ್ರಿಟನನ್‌ ಜೈಲೊಂದರಲ್ಲಿ. ಅಲ್ಲಿನ ಕೈದಿಗಳಿಗೆ ಆಹಾರ ಸಂಕಷ್ಟ ಎದುರಾಗಿತ್ತು. ಅದಕ್ಕೇ ಕೈದಿಯೊಬ್ಬ ಸಮೋಸಾ ಮಾಡುವ ಸ್ಥಳಕ್ಕೆ ಹೋಗಿದ್ದು, ಅಲ್ಲಿಂದ ಒಂದಿಷ್ಟು ಸಮೋಸಾ ಕದ್ದುಬಿಟ್ಟಿದ್ದಾನೆ. ಆದರೆ ಅದನ್ನು ಇಟ್ಟುಕೊಳ್ಳುವುದು ಹೇಗೆ? ಎಲ್ಲರ ಕಣ್ಣು ತಪ್ಪಿಸಿ ಇಟ್ಟುಕೊಳ್ಳಬೇಕು ಎಂದರೆ ಅದಕ್ಕಿರುವುದು ಒಂದೇ ಜಾಗ, ಅದೇ ಬಟ್ಟೆಯ ಒಳಗೆ ಯಾರೂ ನೋಡದಂತೆ ಇಟ್ಟುಕೊಳ್ಳುವುದು.

ಅದೇ ಪ್ಲ್ಯಾನ್‌ ಮಾಡಿದ್ದ ಈ ಕೈದಿ ಸಮೋಸಾಗಳನ್ನು ಬಟ್ಟೆಯೊಳಗೆ ಇಟ್ಟುಕೊಂಡಿದ್ದಾನೆ. ಆದರೆ ಬರೀ ಬಟ್ಟೆಯಲ್ಲಿ ಇಟ್ಟುಕೊಂಡರೆ ಅದು ಜೈಲಧಿಕಾರಿಗಳ ಗಮನಕ್ಕೆ ಹೋಗಬಹುದು ಎಂದು ನಂತರ ಅದನ್ನು ತನ್ನ ಚಡ್ಡಿಯೊಳಕ್ಕೆ ಹಾಕಿಕೊಂಡಿದ್ದಾನೆ. ಅಲ್ಲಿಯೂ ಗೊತ್ತಾಗಿಬಿಟ್ಟರೆ ಎನ್ನುವ ಕಾರಣಕ್ಕೆ ಸಮೋಸಾಗಳನ್ನು ಗುದದ್ವಾರದ ಒಳಗೆ ತುರುಕಿಕೊಂಡು ಹೋಗಿದ್ದಾನೆ.

ಆದರೆ ಆತನ ಗ್ರಹಚಾರ ಕೆಟ್ಟಿತ್ತು. ಅಂತೂ ಜೈಲಧಿಕಾರಿಗಳ ಕೈಗೆ ಸಿಕ್ಕಿಬಿದ್ದ. ಆತನ ತಪಾಸಣೆ ಮಾಡಿದಾಗ ಗುದದ್ವಾರದೊಳಗೆ ಸಮೋಸಾಗಳು ಕಾಣಿಸಿವೆ. ಆತನನ್ನು ಬಂಧಿಸಿ ಪ್ರಶ್ನೆ ಮಾಡಿದಾಗ, ತನಗಾಗುತ್ತಿರುವ ಹಸಿವಿನ ಸಂಕಟವನ್ನು ಆತ ಹೇಳಿಕೊಂಡಿದ್ದಾನೆ.

ಜೈಲಿನಲ್ಲಿ ಊಟ ಸರಿಯಾಗಿ ನೀಡುತ್ತಿಲ್ಲ. ಆಹಾರದ ಕೊರತೆಯಿಂದ ಕೈದಿಗಳು ಕಂಗಾಲಾಗಿದ್ದಾರೆ. ಆದ್ದರಿಂದ ಎಲ್ಲರಿಗೂ ಆಗಲಿ ಎಂಬ ಕಾರಣಕ್ಕೆ ಸಮೋಸಾ ಕದ್ದುಕೊಂಡು ಬಂದಿದ್ದೇನೆ ಎಂದಿದ್ದಾನೆ. ಪೊಲೀಸರಿಗೆ ಅಯ್ಯೋ ಪಾಪ ಎನಿಸಿ ಆತನನ್ನು ಬಿಟ್ಟು, ಕೈದಿಗಳಿಗೆ ಸರಿಯಾದ ಆಹಾರ ಪೂರೈಕೆ ಮಾಡಲು ಆದೇಶಿಸಿದರಂತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net