ಶಿವನಿಗೆ ಐಸ್‌ಕ್ರೀಂ ಸ್ನಾನ! ಭಕ್ತ ಅರ್ಪಿಸಿದ 10 ಕೆ.ಜಿ ಟೇಸ್ಟಿ ಟೇಸ್ಟಿ ನೈವೇದ್ಯ- ಕಣ್ತುಂಬಿಸಿಕೊಂಡ ಜನರು

shiva
Published on

ಹೈದರಾಬಾದ್: ಭಕ್ತಾದಿಗಳು ತಮ್ಮ ಇಷ್ಟದ ದೇವರಿಗೆ ತಮ್ಮಿಷ್ಟದ ನೈವೇದ್ಯ ಅರ್ಪಿಸುವುದು ರೂಢಿ. ಕೆಲವು ದೇವರಿಗೆ ಇಂತಿಂಥದ್ದೇ ನೈವೇದ್ಯ ಎಂದಿರುವ ಕಾರಣ, ಅಂಥದ್ದೇ ನೈವೇದ್ಯ ಅರ್ಪಿಸುವುದು ಮಾಮೂಲು.

ಶಿವನ ವಿಷಯಕ್ಕೆ ಬಂದಾಗ ಜಗತ್ತಿನಾದ್ಯಂತ ಶಿವನ ನೈವೇದ್ಯದ ವಿಷಯದಲ್ಲಿ ವಿಭಿನ್ನ ಪದ್ಧತಿಗಳಿವೆ. ಮಾಂಸವನ್ನೂ ಅರ್ಪಿಸುವವರಿದ್ದಾರೆ. ಆದರೆ ಇಲ್ಲೊಬ್ಬ ಭಕ್ತ ಐಸ್‌ಕ್ರೀಂ ಅರ್ಪಿಸಿ ಜಾಲತಾಣದಲ್ಲಿ ವೈರಲ್‌ ಆಗಿದ್ದಾರೆ.

ಆಂಧ್ರಪ್ರದೇಶದ ಪಾಲಕೋಲ್‍ನಲ್ಲಿ ಇರುವ ಪಂಚರಾಮ ಕ್ಷೇತ್ರಗಳಲ್ಲಿ ಒಂದಾದ ಕ್ಷೀರ ರಾಮಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿರುವ ಶಿವನಿಗೆ 10 ಕೆ.ಜಿ ಐಸ್‌ಕ್ರೀಂ ಅರ್ಪಿಸಿದ್ದಾರೆ ಪಾಲಕೋಲಿನ ದೇವೆಲ್ಲ ನಿವಾಸಿ ನರಸಿಂಹ ಮೂರ್ತಿ.

ಐಸ್‌ಕ್ರೀಂ ತಂದು ಅದನ್ನು ಶಿವನ ಮೇಲೆ ಸುರಿದಿದ್ದಾರೆ. ಹಾಲಿನ ಅಭಿಷೇಕ ಮಾಡಿದಂತೆ ಇವರು ಐಸ್‌ಕ್ರೀಂ ನೈವೇದ್ಯ ಮಾಡಿದ್ದಾರೆ. ಅಪರೂಪದ ಈ ದೃಶ್ಯವನ್ನು ಕಂಡು ಅಲ್ಲಿದ್ದ ಭಕ್ತರು ಪುನೀತರಾಗಿದ್ದಾರೆ. ಅಷ್ಟೇ ಅಲ್ಲದೇ ಇದು ಸುದ್ದಿಯಾಗುತ್ತಿದ್ದಂತೆಯೇ ಐಸ್‌ಕ್ರಿಂನಲ್ಲಿ ಮಿಂದೆದ್ದ ಶಿವ ಹೇಗೆ ಕಾಣಿಸುತ್ತಾನೆ ಎಂದು ನೋಡಲು ಭಕ್ತರು ಕ್ಯೂನಲ್ಲಿ ನಿಂತಿದ್ದು ವಿಶೇಷವಾಗಿತ್ತು.

ಸ್ವಲ್ಪ ಸಮಯದಲ್ಲಿಯೇ ಐಸ್‌ಕ್ರೀಂ ಶಿವಲಿಂಗದಿಂದ ಜಾರಿ ಕೆಳಕ್ಕೆ ಸುರಿದಿದೆ. ಈ ಶಿವನೀಗ ಜಾಲತಾಣದಲ್ಲಿ ಭಾರಿ ಫೇಮಸ್‌ ಆಗಿದ್ದು, ಎಲ್ಲೆಡೆ ಈ ಮೂರ್ತಿಯ ಚಿತ್ರ ಹರಿದಾಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net