

ಹೈದರಾಬಾದ್: ಈ ಚಿತ್ರದಲ್ಲಿ ಕಾಣುತ್ತಿರುವ ವ್ಯಕ್ತಿಯ ಹೆಸರು ಅಡಪ ಶಿವಶಂಕರ್. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಬೇತಂಪುಡಿಯ ಈ ವ್ಯಕ್ತಿಗೆ ಉನ್ನತ ಶಿಕ್ಷಣ ಪಡೆದ ಶ್ರೀಮಂತ ಮಹಿಳೆಯರೇ ಟಾರ್ಗೆಟ್, ಅದರಲ್ಲಿಯೂ ವಿಧವೆಯರನ್ನೇ ಹುಡುಕುತ್ತ ಇರುವ ಈತನ ಗಾಳಕ್ಕೆ ಬಿದ್ದವರು ಅದೆಷ್ಟೋ ಮಂದಿ. 11 ಮಂದಿಯನ್ನು ಈತ ಮದುವೆಯಾಗಿರುವುದು ಸದ್ಯ ಬೆಳಕಿಗೆ ಬಂದಿದ್ದು, ಇನ್ನೆಷ್ಟು ಮಂದಿಯನ್ನು ಬಲೆಗೆ ಬೀಳಿಸಿದ್ದಾನೋ ಗೊತ್ತಿಲ್ಲ!
ಸಚಿವರೊಬ್ಬರ ಸಂಬಂಧಿಕನೂ ಆಗಿರುವ ಶಿವಶಂಕರ್, ಸಚಿವರ ಹೆಸರು ಹೇಳಿಕೊಂಡು ಮಾತ್ರವಲ್ಲದೇ ದೊಡ್ಡ ದೊಡ್ಡ ಕಂಪೆನಿಗಳ ಹೆಸರು ಹೇಳಿ ಆ ಕಂಪೆನಿಯಲ್ಲಿ ತಾನು ಕೆಲಸ ಮಾಡುವುದು ಎಂದು ಹೇಳಿಕೊಳ್ಳುತ್ತಾ ಇದುವರೆಗೆ 11 ಮಂದಿಯನ್ನು ಮದುವೆಯಾಗಿದ್ದಾನೆ! ಮ್ಯಾಟ್ರಿಮೋನಿ ಸೈಟ್ಗಳ ಮೂಲಕ ವಿವಾಹಾಕಾಂಕ್ಷಿಗಳನ್ನು ಗುರುತು ಮಾಡಿಕೊಳ್ಳುತ್ತಿದ್ದ ಈತ. ಅದರಲ್ಲಿಯೂ ವಿಚ್ಛೇದಿತರನ್ನು ಹುಡುಕುತ್ತಿದ್ದ. ನಂತರ ಅವರ ಮೊಬೈಲ್ ಸಂಖ್ಯೆಯನ್ನು ಪಡೆದು ಮಾತುಕತೆ ನಡೆಸುತ್ತಿದ್ದ. ದೊಡ್ಡ ದೊಡ್ಡ ಕಂಪೆನಿ ಹೆಸರು ಹೇಳಿಕೊಂಡು ಮಹಿಳೆಯರನ್ನು ಮದುವೆಯಾಗಿರುವುದು ಬೆಳಕಿಗೆ ಬಂದಿದೆ.
ಇನ್ನೊಂದು ಮದುವೆಗೆ ಸಿದ್ಧನಾಗಿರುವ ವೇಳೆ ಈತನ ಪತ್ನಿಯಲ್ಲಿ ಒಬ್ಬಾಕೆಗೆ ಸಂಶಯ ಬಂದು ತನಿಖೆ ಮಾಡಿದಾಗ ವಿಷಯ ಬಯಲಾಗಿದೆ. ನಂತರ ಹಲವು ಪತ್ನಿಯರು ಸೇರಿ ಮಾಧ್ಯಮ ಗೋಷ್ಠಿ ನಡೆಸಿ ಈತನ ಬಣ್ಣ ಬಯಲು ಮಾಡಿದ್ದಾರೆ. ಸದ್ಯ 11 ಮದುವೆಯ ಬಗ್ಗೆ ತಿಳಿದದ್ದು ಇನ್ನೆಷ್ಟು ಮದುವೆಯಾಗಿದ್ದಾನೋ ಗೊತ್ತಿಲ್ಲ. ಈತನ ಗೆಟಪ್, ಹೇಳಿಕೊಳ್ಳುವ ಕಂಪೆನಿಯ ಹೆಸರು, ಸಂಬಳ ಎಲ್ಲವನ್ನೂ ಕೇಳಿ ಮೋಸ ಹೋಗುವ ಮಹಿಳೆಯರು ಈತನಿಗೆ ಲಕ್ಷಾಂತರ ರೂಪಾಯಿ ಹಣವನ್ನು ಕೊಟ್ಟಿರುವುದು ಬೆಳಕಿಗೆ ಬಂದಿದೆ.
ನಮ್ಮಂತೆ ಶಿವಶಂಕರ್ ಈಗಾಗಲೇ ಹಲವರಿಗೆ ವಂಚನೆ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಲ್ಲದೇ, ಮದುವೆ ಹೆಸರಲ್ಲಿ ಮೋಸ ಮಾಡಿ ಸುಮಾರು 60 ಲಕ್ಷ ನಗದು ಹಾಗೂ ಚಿನ್ನಾಭರಣ ನೀಡಿರುವುದಾಗಿ ಮಹಿಳೆಯೊಬ್ಬರು ಮಾಧ್ಯಮದವರ ಮುಂದೆ ಅಳಲು ತೋಡಿಕೊಂಡರು.
ನನ್ನದು ಉನ್ನತ ಹುದ್ದೆ. ಕೆಲಸದ ನಿಮಿತ್ತ ಬೇರೆ ಕಡೆ ಹೋಗುತ್ತಿರಬೇಕಾಗುತ್ತದೆ ಎಂದು ಹೇಳುತ್ತಾನೆ. ಇದನ್ನು ಮಹಿಳೆಯರು ನಂಬುತ್ತಾರೆ. ಮದುವೆಯಾಗಿ, ಮಹಿಳೆಯರಿಂದ ಹಣ ಪಡೆದು ಹೊರಗಡೆ ಕೆಲ ದಿನ ಹೋಗುವ ಈತ ಅಲ್ಲಿ ಮತ್ತೊಬ್ಬಳಿಗೆ ಗಾಳ ಹಾಕುತ್ತಾನೆ. ನಿಜವಾಗಿಯೂ ಆತನಿಗೆ ಯಾವುದೇ ಕೆಲಸ ಇಲ್ಲ. ಮದುವೆಯಾಗಿ ಹಣವನ್ನು ಲೂಟಿ ಮಾಡುವುದೇ ಈತನ ಕೆಲಸ ಎಂದು ಸಂತ್ರಸ್ತ ಪತ್ನಿಯರು ಹೇಳಿಕೊಂಡಿದ್ದಾರೆ.
ಶಿವಶಂಕರ್ ವಿರುದ್ಧ ಈಗಾಗಲೇ ಹಲವು ಠಾಣೆಗಳಲ್ಲಿ ಪ್ರಕರಣಗಳಿದ್ದರೂ, ಪೊಲೀಸರು ಕ್ರಮಕ್ಕೆ ಮುಂದಾಗಿಲ್ಲ. ಈಗಲಾದರೂ, ಶಿವಶಂಕರ್ಗೆ ಕಠಿಣ ಶಿಕ್ಷೆ ವಿಧಿಸಿ ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಸಂತ್ರಸ್ತ ಮಹಿಳೆಯರು ಆಗ್ರಹಿಸಿದ್ದಾರೆ.