ಅಬ್ಬಬ್ಬಾ ಇದೆಂಥ ಸೇಡಪ್ಪ! ತನಗೆ ಕಚ್ಚಿದ ಹಾವನ್ನೇ ಕಚ್ಚಿಕಚ್ಚಿ ಕೊಂದ ಭೂಪ- ಮುಂದೇನಾಯ್ತು ನೋಡಿ...

snake1
Published on

ಜಜ್‌ಪುರ (ಒಡಿಶಾ): ಯಾರಾದರೂ ತಮಗೆ ಹೊಡೆದಾಗ, ಪರಚಿದಾಗ ಕಚ್ಚಿದಾಗ ಅವರಿಗೆ ತಿರುಗಿ ಅದೇ ರೀತಿ ಮಾಡುವುದು ಮಾಮೂಲು. ಆದರೆ ಇಲ್ಲೊಬ್ಬ ಭೂಪ ಹಾವು ತನಗೆ ಕಚ್ಚಿತು ಎನ್ನುವ ಕಾರಣಕ್ಕೆ ಅದನ್ನೇ ಕಚ್ಚಿ ಕಚ್ಚಿ ಕೊಂದಿದ್ದಾನೆ.

ಈ ಘಟನೆ ಒಡಿಶಾದ ಜಜ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಸಾಲಿಜಂಗಾ ಪಂಚಾಯತ್ ವ್ಯಾಪ್ತಿಯ ಗಂಭರಿಪತಿಯಾ ಗ್ರಾಮದ ಕಿಶೋರ್ ಬದ್ರ (45) ಎಂಬಾತ ಈ ಕೃತ್ಯ ಎಸಗಿದ್ದಾನೆ.

ಹೊಲದಲ್ಲಿ ಕೆಲಸ ಮಾಡಿ ರಾತ್ರಿ ಮನೆಗೆ ಮರಳುತ್ತಿದ್ದ ವೇಳೆ ಇವನಿಗೆ ಹಾವು ಕಚ್ಚಿದೆ. ಯಾರಾದರೂ ಆಗಿದ್ದರೆ ಹಾವು ನೋಡಿ ಭಯಭೀತರಾಗಿ ಓಡಿ ಹೋಗುತ್ತಿದ್ದರು ಅಥವಾ ಕಚ್ಚಿದ ಹೆದರಿಕೆಗೆ ಅಲ್ಲೇ ಸಾಯುತ್ತಿದ್ದರು. ಆದರೆ ಕಿಶೋರ್​ ಹಾಗೆ ಮಾಡಲಿಲ್ಲ. ಬದಲಿಗೆ, ಸೇಡು ತೀರಿಸಿಕೊಳ್ಳಲು ಮುಂದಾದ ಆತ, ಹಾವನ್ನು ಸೆರೆಹಿಡಿದು ಕಚ್ಚಿ ಸಾಯಿಸಿಯೇ ಬಿಟ್ಟಿದ್ದಾನೆ.

ಹೇಳಿಕೇಳಿ ವಿಷಕಾರಿ ಹಾವು ಇದು. ಹಿಂದೆ ಮುಂದೆ ನೋಡದೇ ಅದನ್ನು ಕಚ್ಚಿ ಸಾಯಿಸಿದ ನಂತರ ಸಂತೃಪ್ತನಾದ ಆತ ಮನೆಗೆ ಬಂದು ವಿಷಯ ತಿಳಿಸಿದ್ದಾನೆ. ಕೂಡಲೇ ಸ್ಥಳೀಯರು ಆಸ್ಪತ್ರೆಗೆ ಹೋಗು ಎಂದು ಹೇಳಿದರೂ ಅದನ್ನು ಕೇಳದ ಆತ ತನಗೆ ತಿಳಿದಿರುವ ನಾಟಿ ಔಷಧ ಮಾಡಿಕೊಂಡಿದ್ದಾನೆ. ಅಚ್ಚರಿ ಎಂದರೆ ಈ ಔಷಧ ಅವನ ಮೇಲೆ ಪರಿಣಾಮ ಬೀರಿದ್ದು, ಹಾವು ಕಚ್ಚಿದರೂ, ಹಾವನ್ನು ಇವನು ಕಚ್ಚಿದರೂ ಯಾವುದೂ ಅವನಿಗೆ ಪರಿಣಾಮ ಬೀರಲಿಲ್ಲ. ಆರಾಮಾಗಿಯೇ ಆರೋಗ್ಯದಿಂದ ಇದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net