

ಲಂಡನ್: ಲಂಡನ್ನಲ್ಲಿ ತಲೆಮರೆಸಿಕೊಂಡಿರುವ ಮದ್ಯದ ದೊರೆ ವಿಜಯ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರ ಮಾಡುವ ಪ್ರಕ್ರಿಯೆ ಇನ್ನೂ ವಿಳಂಬ ಆಗಲಿದೆ. ಲಂಡನ್ನಲ್ಲಿ ಈ ಕುರಿತು ರಹಸ್ಯ ಕಾರ್ಯಾಚರಣೆ ನಡೆಯುತ್ತಿದ್ದು, ಇದರಿಂದ ಹಸ್ತಾಂತರ ಕಾರ್ಯ ಇನ್ನಷ್ಟು ವಿಳಂಬ ಆಗಲಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ತಿಳಿಸಿದೆ.
ಭಾರತಕ್ಕೆ ಪಂಗನಾಮ ಹಾಕಿ ಲಂಡನ್ನಲ್ಲಿ ಅಡಗಿ ಕುಳಿತಿರುವ ವಿಜಯ ಮಲ್ಯರನ್ನು ಭಾರತಕ್ಕೆ ಹಸ್ತಾಂತರ ಮಾಡುವಂತೆ ಕೋರಿ ಕೇಂದ್ರ ಸರ್ಕಾರ ಮನವಿ ಸಲ್ಲಿಸಿತ್ತು. ಇದಕ್ಕೆ ತಡೆ ನೀಡುವಂತೆ ಲಂಡನ್ ಕೋರ್ಟ್ಗೆ ಮಲ್ಯ ಹೋಗಿದ್ದರು. ಆದರೆ ಅಲ್ಲಿಯ ಕೋರ್ಟ್ ಅವರ ಮನವಿಯನ್ನು ತಿರಸ್ಕರಿಸಿತ್ತು.
ಈ ಹಿನ್ನೆಲೆಯಲ್ಲಿ ಹಸ್ತಾಂತರ ಪ್ರಕ್ರಿಯೆಗಳು ಪೂರ್ಣಗೊಂಡಿದ್ದರೂ, ಇದೀಗ ಹೊಸ ಕ್ರಮಗಳು ಪ್ರಾರಂಭವಾಗಿವೆ. ಇದರ ನಿಖರ ಸ್ವರೂಪವು ಭಾರತ ಸರ್ಕಾರಕ್ಕೆ ತಿಳಿದಿಲ್ಲ ಎಂದು ಸರ್ಕಾರ ಸುಪ್ರೀಂಕೋರ್ಟ್ಗೆ ಹೇಳಿದೆ.
"ಹಸ್ತಾಂತರ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ, ಮತ್ತೊಂದು ರಹಸ್ಯ ಪ್ರಕ್ರಿಯೆ ಪ್ರಾರಂಭವಾಗಿದೆ. ಆದರೆ ನಮಗೆ ಅದರ ಯಾವುದೆ ಸೂಚನೆಗಳು ಇಲ್ಲ. ಆದ್ದರಿಂದ ಹಸ್ತಾಂತರ ಪ್ರಕ್ರಿಯೆ ವಿಳಂಬವಾಗಲಿದೆ ಎಂದು ಕೇಂದ್ರ ಸರ್ಕಾರದ ಪರ ವಕೀಲ ರಜತ್ ನಾಯರ್ ನ್ಯಾಯಮೂರ್ತಿ ಯುಯು ಲಲಿತ್ ನೇತೃತ್ವದ ನ್ಯಾಯಪೀಠಕ್ಕೆ ತಿಳಿಸಿದರು.
ಈ ಹೊಸ ಪ್ರಕ್ರಿಯೆ ಏನು ಎಂಬುದಾಗಿ ನ್ಯಾಯಾಲಯವು ಮಲ್ಯ ಅವರ ವಕೀಲ ಅಂಕುರ್ ಸೈಗಲ್ ಅವರನ್ನು ಪ್ರಶ್ನಿಸಿದರು. ಅದಕ್ಕೆ ಅವರು ತಮಗೆ ಇದರ ಬಗ್ಗೆ ತಿಳಿದಿಲ್ಲ ಎಂದರು. ಇದಕ್ಕೆ ಸಿಟ್ಟುಗೊಂಡ ನ್ಯಾಯಮೂರ್ತಿಗಳು, ನಿಮ್ಮ ಕಕ್ಷಿದಾರರ ಬಗ್ಗೆ ಗೊತ್ತಿಲ್ಲ ಎಂದರೆ ಹೇಗೆ? ಅವರು ನಿಮಗೆ ಸೂಚನೆಗಳನ್ನು ನೀಡುವುದಿಲ್ಲವೆ? ಅವರ ಪ್ರತಿಯೊಂದು ಮಾಹಿತಿಯೂ ನಿಮಗೆ ಗೊತ್ತಿರಬೇಕಲ್ಲ, ಹೀಗೆ ಗೊತ್ತಿಲ್ಲ ಎಂದು ಹೇಗೆ ಹೇಳುತ್ತೀರಿ ಎಂದು ಪ್ರಶ್ನಿಸಿದರು.
ಸದ್ಯ ಇದರ ವಿಚಾರಣೆಯನ್ನು ನವೆಂಬರ್ 2ಕ್ಕೆ ಮುಂದೂಡಲಾಗಿದೆ.