ಮದುವೆಯಾದ ಮಲಾಲಾ: ಪತಿಯ ಗುಟ್ಟು ಬಿಟ್ಟುಕೊಡದ ನೊಬೆಲ್‌ ಪುರಸ್ಕೃತೆ! ನೆಟ್ಟಿಗರೇ ಹುಡುಕಿ ತೆಗೆದರು ಜಾತಕ...

malala
Published on

ಲಂಡನ್: ಬಾಲಕಿಯರ ಶಿಕ್ಷಣದ ಮೂಲಕ ಜಗದ್ವಿಖ್ಯಾತಿ ಗಳಿಸಿ ಅತಿ ಚಿಕ್ಕ ವಯಸ್ಸಿನಲ್ಲಿಯೇ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕಾರ ಪಡೆದ ಮಲಾಲಾ ಯೂಸುಫ್‌ಜಾಯ್‌ (24) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಬಾಲಕಿಯರಿಗೆ ಶಿಕ್ಷಣ ನೀಡುವ ಕಾರಣ 2012 ರಲ್ಲಿ ತಾಲಿಬಾನಿಗಳಿಂದ ಗುಂಡೇಟು ಹಾಕಿಸಿಕೊಂಡು ಜೀವನ್ಮರಣಗಳ ನಡುವೆ ಹೋರಾಡಿ ಕೊನೆಗೆ ಪವಾಡಸದೃಶವಾಗಿ ಬದುಕಿಬಂದರೂ ತಮ್ಮ ಧ್ಯೇಯವನ್ನು ಬಿಡದೇ ಶಿಕ್ಷಣಕ್ಕೆ ಒತ್ತು ನೀಡಿದ್ದ ಈ ಧೀರೆ ಇದೀಗ ಮದುವೆಯಾಗಿದ್ದು, ಫೋಟೋಗಳನ್ನು ಶೇರ್‌ ಮಾಡಿಕೊಂಡಿದ್ದಾರೆ.

ಮಲಾಲಾ ಸದ್ಯ ಬ್ರಿಟನ್‌ನಲ್ಲಿ ವಾಸಿಸುತ್ತಿದ್ದಾರೆ. ತಮ್ಮ ಪತಿಯ ಹೆಸರನ್ನು ಅಸ್ಸರ್ ಎಂದಷ್ಟೇ ಪರಿಚಯಿಸಿದ್ದಾರೆ. ಬರ್ಮಿಂಗ್‌ಹ್ಯಾಮ್ ನಗರದಲ್ಲಿ ನಡೆದ ಸರಳ ವಿವಾಹದಲ್ಲಿ ಕುಟುಂಬಗಳ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ.

ಮದುವೆಯ ಕುರಿತು ಮಾತನಾಡಿರುವ ಮಲಾಲಾ, ‘ಇಂದು ನನ್ನ ಜೀವನದಲ್ಲಿ ಅಮೂಲ್ಯವಾದ ದಿನ. ಅಸ್ಸರ್ ಮತ್ತು ನಾನು ಹೊಸ ಜೀವನಕ್ಕೆ ಕಾಲಿಟ್ಟಿದ್ದೇವೆ’ ಎಂದಿದ್ದಾರೆ. ಈ ಕುರಿತು ಟ್ವಿಟರ್‌ನಲ್ಲಿ ಫೋಟೋ ಸಹಿತ ಬರೆದು ತಮ್ಮ ಮದುವೆಯ ಬಗ್ಗೆ ಹೇಳಿಕೊಂಡಿದ್ದಾರೆ. ಇದನ್ನು ಬಿಟ್ಟು ಪತಿಯ ಬಗ್ಗೆ ಅವರು ಹೆಚ್ಚಿಗೆ ಏನೂ ಹೇಳಲಿಲ್ಲ.

Malala Yousafzai announces marriage with Asser; posts nikah pictures on  Twitter | World News – India TV

ಆದರೆ ಅವರ ಅಭಿಮಾನಿಗಳು ಸುಮ್ಮನಿರುತ್ತಾರೆಯೆ? ಅವರ ಪತಿಯ ಬಗ್ಗೆ ಹುಡುಕಿ ತೆಗೆದಿದ್ದು, ಅವರ ಪತಿಯ ಪೂರ್ತಿ ಹೆಸರು ಅಸರ್ ಮಲಿಕ್. ಇವರು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಹೈ-ಪರ್ಫಾರ್ಮೆನ್ಸ್ ಸೆಂಟರ್‌ನ ಜನರಲ್ ಮ್ಯಾನೇಜರ್ ಎಂದಿದ್ದಾರೆ.

ಕಳೆದ ವರ್ಷ ಮದುವೆಯ ಕುರಿತು ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದ ಮಲಾಲಾ, 'ಯಾರಾದರೂ ಏಕೆ ಮದುವೆಯಾಗಬೇಕು ಎಂದು ನನಗೆ ಇನ್ನೂ ಅರ್ಥವಾಗುತ್ತಿಲ್ಲ. ನಿಮ್ಮ ಜೀವನದಲ್ಲಿ ಒಬ್ಬ ವ್ಯಕ್ತಿಯನ್ನು ಹೊಂದಲು ನೀವು ಬಯಸಿದರೆ, ನೀವು ಮದುವೆಯ ಪತ್ರಗಳಿಗೆ ಏಕೆ ಸಹಿ ಹಾಕಬೇಕು, ಅದು ಪಾಲುದಾರಿಕೆ ಏಕೆ ಆಗಬಾರದು?' ಅವರು ಹೇಳಿದ್ದರು. ಈ ಮಾತಿಗೆ ಪಾಕಿಸ್ತಾನದಲ್ಲಿ ಭಾರಿ ಟೀಕೆಗಳೂ ಕೇಳಿಬಂದಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net