

ಮುಂಬೈ: ಎಲ್ಲೆಡೆ ತಲ್ಲಣ ಸೃಷ್ಟಿಸಿರುವ ಝಿಕಾ ವೈರಸ್ ಇದೀಗ ಮಹಾರಾಷ್ಟ್ರಕ್ಕೂ ಕಾಲಿಟ್ಟಿದೆ. 50 ವರ್ಷ ವಯಸ್ಸಿನ ಪುಣೆಯ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ. ಇದು ಮಹಾರಾಷ್ಟ್ರದಲ್ಲಿ ಕಂಡುಬಂದ ಮೊದಲ ಝಿಕಾ ವೈರಸ್ ಎಂದು ಆರೋಗ್ಯ ಇಲಾಖೆ ಖಚಿತಪಡಿಸಿದೆ. ಇದರಿಂದಾಗಿ ನೆರೆಯ ಕರ್ನಾಟಕದಲ್ಲಿಯೂ ಭೀತಿ ಶುರುವಾಗಿದೆ. ಸದ್ಯ ಮಹಿಳೆಯ ಆರೋಗ್ಯ ಸ್ಥಿರವಾಗಿದ್ದು, ಕುಟುಂಬಸ್ಥರಲ್ಲಿ ಯಾವುದೇ ರೋಗ ಲಕ್ಷಣಗಳು ಕಂಡು ಬಂದಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಸೋಂಕು ದೃಢಪಡುತ್ತಲೇ ಆರೋಗ್ಯಾಧಿಕಾರಿಗಳು ಮಹಿಳೆಯ ಊರಾಗಿರುವ ಬೆಲಸರ್ ಗ್ರಾಮಕ್ಕೆ ಭೇಟಿ ನೀಡಿ ಸಮೀಕ್ಷೆ ನಡೆಸಿದ್ದಾರೆ.
ಗ್ರಾಮಸ್ಥರ ಆರೋಗ್ಯದ ಮಾಹಿತಿ ಕಲೆಹಾಕುತ್ತಿದ್ದಾರೆ. ಈ ಕುರಿತು ಗ್ರಾಮದ ಮುಖಂಡರ ಜತೆ ಮಾತುಕತೆ ನಡೆಸಿದ್ದು ಮುಂಜಾಗರೂಕತೆ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ರೀತಿಯ ರೋಗದ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಬೇಕು ಎಂದು ಆರೋಗ್ಯಾಧಿಕಾರಿಗಳು ಸೂಚಿಸಿದ್ದಾರೆ.
ಈ ಸೋಂಕು ಬರುವುದು ಹೇಗೆ?
ಸೊಳ್ಳೆಗಳ ಮೂಲಕ ಹರಡುವ ಸೋಂಕು ಇದು. ಏಡಿಸ್ ಪ್ರಭೇದಕ್ಕೆ ಸೇರಿದ ಕಚ್ಚುವ ಸೊಳ್ಳೆಗಳಿಂದ ಈ ಸೋಂಕು ಹರಡುತ್ತದೆ. ಈ ಸೊಳ್ಳೆಗಳು ರಾತ್ರಿ ಮಾತ್ರವಲ್ಲದೇ ಹಗಲು ಕೂಡ ಕಚ್ಚುವ ಸಾಧ್ಯತೆ ಇದೆ. ರಕ್ತ ವರ್ಗಾವಣೆ ಮತ್ತು ಅಸುರಕ್ಷಿತ ಲೈಂಗಿಕತೆಯಿಂದಲೂ ಸೋಂಕು ಹರಡಬಲ್ಲುದು.
ಝಿಕಾ ಸೋಂಕಿಗೆ ಒಳಗಾಗಿರುವ ಲಕ್ಷಣಗಳೇನು?
ಜ್ವರ, ಸ್ನಾಯು ನೋವು, ದೇಹದ ದದ್ದುಗಳು, ತಲೆನೋವು, ಕೀಲು ನೋವು, ಕೆಂಪು ಕಣ್ಣುಗಳು ಇತ್ಯಾದಿ ಈ ಸೋಂಕಿಗೆ ಒಳಗಾಗಿರುವವರ ಸಾಮಾನ್ಯ ಲಕ್ಷಣಗಳು. ಅನೇಕ ದಿನಗಳವರೆಗೆ ಈ ಲಕ್ಷಣಗಳು ಕಾಣಿಸಿಕೊಳ್ಳಲಿವೆ. ಝಿಕಾದ ಲಕ್ಷಣಗಳು ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾದಂತಹ ಸೊಳ್ಳೆಗಳಿಂದ ಹರಡುವ ಇತರ ಕಾಯಿಲೆಗಳಿಗೆ ಹೋಲುತ್ತವೆ. ರಕ್ತ ಮತ್ತು ಮೂತ್ರವನ್ನು ಪರೀಕ್ಷಿಸಿದಾಗ ಈ ಸೋಂಕು ಇರುವುದು ಕಂಡುಬರುತ್ತದೆ.
ಝಿಕಾ ಪ್ರಾಣಕ್ಕೆ ಅಪಾಯ ತರುತ್ತವೆಯೆ?
ಈ ಸೋಂಕಿಗೆ ಗುರಿಯಾದರೆ ಸಾಯುವುದು ಕಡಿಮೆ. ಅಂದರೆ ಇದು ಅಷ್ಟು ಮಾರಣಾಂತಿಕವಲ್ಲ. ಆದರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಭಾರತದಲ್ಲಿ ಎಲ್ಲಿ ಝಿಕಾ ವೈರಸ್ ತಪಾಸಣೆ ಮಾಡಲಾಗುತ್ತದೆ?
ದೆಹಲಿಯ ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ಡ್ ಕಂಟ್ರೋಲ್ ಮತ್ತು ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಾಜಿ.
ಈ ಸೋಂಕು ಬರದಂತೆ ಯಾವುದಾದರೂ ಲಸಿಕೆಗಳು ಇವೆಯೆ?
ಇದುವರೆಗೆ ಯಾವುದೇ ಲಸಿಕೆಯನ್ನು ಕಂಡುಹಿಡಿಯಲಾಗಿಲ್ಲ.
ಝಿಕಾ ಸೋಂಕಿನ ಲಕ್ಷಣಗಳು ಕಂಡುಬಂದರೆ ಏನು ಮಾಡಬೇಕು?
ಸಾಕಷ್ಟು ದ್ರವ ಆಹಾರಗಳನ್ನು ತೆಗೆದುಕೊಳ್ಳುವ ಮೂಲಕ ನಿರ್ಜಲೀಕರಣವನ್ನು ತಡೆಯಬೇಕು. ಸಾಕಷ್ಟು ವಿಶ್ರಾಂತಿ ಪಡೆಯಬೇಕು. ಜ್ವರ ಮತ್ತು ನೋವು ಕಡಿಮೆ ಮಾಡಲು ಔಷಧಗಳನ್ನು ತೆಗೆದುಕೊಳ್ಳಬೇಕು. ಆದಷ್ಟು ಬೇಗ ವೈದ್ಯರನ್ನು ಬೇಗನೆ ಸಂಪರ್ಕಿಸಬೇಕು.
ಸೋಂಕನ್ನು ತಡೆಗಟ್ಟುವುದು ಹೇಗೆ?
ಸಾಧ್ಯವಾದರೆ ಹವಾನಿಯಂತ್ರಿತ ಕೊಠಡಿಗಳನ್ನು ಬಳಸಬೇಕು. ಸೊಳ್ಳೆಗಳಿಂದ ರಕ್ಷಣೆ ಪಡೆಯಲು ಸೊಳ್ಳೆ ಪರದೆ ಬಳಸಬೇಕು. ಹೊರಾಂಗಣದಲ್ಲಿ ಮಲಗುವುದನ್ನು ತಪ್ಪಿಸಬೇಕು. ಸಾಧ್ಯವಾದಷ್ಟು ಉದ್ದನೆಯ ತೋಳಿನ ಶರ್ಟ್ ಮತ್ತು ಉದ್ದವಾದ ಪ್ಯಾಂಟ್ ಧರಿಸಬೇಕು.
ಗರ್ಭಿಣಿಯರಿಗೆ ಇದು ಅಪಾಯವೇಕೆ?
ಗರ್ಭಿಣಿಯರಿಗೆ ಝಿಕಾ ವೈರಸ್ ಅಪಾಯವಾಗಿದೆ. ಏಕೆಂದರೆ ಗರ್ಭಿಣಿ ಈ ವೈರಸ್‌ಗೆ ತುತ್ತಾದರೆ ಗರ್ಭದಲ್ಲಿ ಇರುವ ಭ್ರೂಣಕ್ಕೂ ಸೋಂಕು ತಗಲುವ ಸಾಧ್ಯತೆ ಇದೆ. ಆದ್ದರಿಂದ ಇದು ತುಂಬಾ ಅಪಾಯಕಾರಿ: ಗರ್ಭಾವಸ್ಥೆಯಲ್ಲಿ ಝಿಕಾ ಸೋಂಕು ಶಿಶುಗಳಲ್ಲಿ ಮೈಕ್ರೊಸೆಫಾಲಿ ಎಂಬ ಗಂಭೀರ ಜನನ ದೋಷಕ್ಕೆ ಕಾರಣವಾಗಬಹುದು. (ಮೈಕ್ರೋಸೆಫಲಿ ಎಂದರೆ ಮಗುವಿನ ಮೆದುಳಿನ ಬೆಳವಣಿಗೆ ಕುಂಠಿತವಾಗುವುದು)
ಯಾವಾಗ ಗರ್ಭ ಧರಿಸಬೇಕು?
ಪುರುಷನಿಗೆ ಈ ಸೋಂಕಿನ ಲಕ್ಷಣಗಳು ಪ್ರಾರಂಭವಾಗಿ ಅನಾರೋಗ್ಯಪೀಡಿತನಾದರೆ, ಗರ್ಭಧಾರಣೆಗೆ ಮೂರು ತಿಂಗಳು ಕಾಯಬೇಕು. ಒಂದು ವೇಳೆ ಈ ಸೋಂಕು ಪೀಡಿತ ಪ್ರದೇಶಗಳಿಗೆ ಪ್ರಯಾಣ ಬೆಳೆಸಿದ್ದರೂ ಕನಿಷ್ಠ ಮೂರು ತಿಂಗಳು ಕಾಯುವುದು ಕಡ್ಡಾಯ. ಮಹಿಳೆಗೆ ಏನಾದರೂ ಈ ಸೋಂಕಿನ ಲಕ್ಷಣಗಳು ಕಂಡುಬಂದಿದ್ದರೆ, ಗರ್ಭಿಣಿಯಾಗಲು ಪ್ರಯತ್ನಿಸುವ ಮೊದಲು ಎರಡು ತಿಂಗಳ ಕಾಯಬೇಕು, ಯಾವುದಾದರೂ ಪ್ರದೇಶಗಳಿಗೆ ಪ್ರಯಾಣ ಬೆಳೆಸಿದ್ದರೂ ಎರಡು ತಿಂಗಳು ಕಾದು ನಂತರ ಗರ್ಭ ಧರಿಸಿ. ಪುರುಷರು ಹೆಚ್ಚು ಕಾಯಬೇಕಿರುವುದು ಏಕೆಂದರೆ ಝಿಕಾ ವೈರಸ್ ದೇಹದ ಇತರ ದ್ರವಗಳಿಗಿಂತ ಹೆಚ್ಚು ವೀರ್ಯದಲ್ಲಿ ಉಳಿಯುತ್ತದೆ.