ಅತ್ತ 40 ಶಾಸಕರು ನನ್ನೊಂದಿಗಿದ್ದಾರೆ ಎಂದ ಶಿಂಧೆ: ಇತ್ತ ಸಿಎಂ ಠಾಕ್ರೆಗೆ ಕಾಣಿಸಿಕೊಂಡಿತು ಕರೊನಾ!

corona
Published on

ಮುಂಬೈ: ಶಿವಸೇನಾ ಮುಖಂಡ ಏಕನಾಥ್ ಶಿಂಧೆ ಕೊಟ್ಟ ಶಾಕ್​ಗೆ ಮಹಾರಾಷ್ಟ್ರ ಸರ್ಕಾರ ಪತನದ ಅಂಚಿನಲ್ಲಿದೆ. ಸರ್ಕಾರದ ಪತನಕ್ಕೆ ಇನ್ನೇನು ಕ್ಷಣಗಣನೆಗೆ ಆರಂಭವಾಗಿದೆ ಎಂದೇ ಹೇಳಲಾಗುತ್ತಿದೆ. ಸುಮಾರು 13 ಶಾಸಕರನ್ನು ಕರೆದುಕೊಂಡು ಬಂಡಾಯ ಎದ್ದಿರುವ ಶಿಂಧೆಯಿಂದಾಗಿ ಇದೀಗ ಭಾರಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ.

ಏಳು ಮಂದಿ ಸ್ವತಂತ್ರ ಶಾಸಕರು ಹಾಗೂ 33 ಶಿವಸೇನೆ ಶಾಸಕರು ಸೇರಿದಂತೆ ಮಹಾರಾಷ್ಟ್ರದ 40ಶಾಸಕರು ಶಿವಸೇನೆ ಬಂಡಾಯ ನಾಯಕ ಏಕನಾಥ್ ಶಿಂಧೆಯವರಿಗೆ ಬೆಂಬಲ ವ್ಯಕ್ತಪಡಿಸಿ ಪತ್ರಕ್ಕೆ ಸಹಿ ಹಾಕಿದ್ದು, ರಾಜ್ಯಪಾಲರ ಭೇಟಿಯಾಗಿ ವಿಶ್ವಾಸಮತ ಯಾಚನೆ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

ಇಂದು ಬೆಳಿಗ್ಗೆ ಗುವಾಹಟಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿರುವ ಶಿಂಧೆ, 40 ಶಾಸಕರು ನನ್ನೊಂದಿಗೆ ಇದ್ದಾರೆ. ಇನ್ನೂ 10 ಶಾಸಕರು ಶೀಘ್ರದಲ್ಲೇ ನಮ್ಮನ್ನು ಸೇರಿಕೊಳ್ಳಲಿದ್ದಾರೆ. ನಾನು ಯಾರನ್ನೂ ಟೀಕಿಸುತ್ತಿಲ್ಲ. ದಿವಂಗತ ಬಾಳಾಸಾಹೇಬ್ ಠಾಕ್ರೆ ಸ್ಥಾಪಿಸಿದ್ದ ಸೇನಾವನ್ನು ಮುಂದುವರಿಸಲು ನಾವು ಉತ್ಸುಕರಾಗಿದ್ದೇವೆಂದು ಹೇಳಿದರು.

ಇದರ ನಡುವೆಯೇ ಇದೀಗ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಅವರಿಗೆ ಕರೊನಾ ಪಾಸಿಟಿವ್​ ಕಾಣಿಸಿಕೊಂಡಿರುವುದಾಗಿ ವರದಿಯಾಗಿದೆ.

ಎಐಸಿಸಿ ವೀಕ್ಷಕ ಕಮಲ್​ನಾಥ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ರಾಜ್ಯದ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಇಂದು ಸಭೆ ನಡೆಯುತ್ತಲಿದೆ. ಸಭೆಗೂ ಮುನ್ನ ಠಾಕ್ರೆ ಅವರನ್ನು ಭೇಟಿಯಾಗಬೇಕಿತ್ತು. ಆದರೆ ಅವರಿಗೆ ಕರೊನಾ ಪಾಸಿಟಿವ್​ ಬಂದಿರುವುದು ತಿಳಿದುಬಂದಿದೆ ಎಂದು ಕಮಲ್​ನಾಥ್​ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net