ಹೆಲಿಕಾಪ್ಟರ್‌ ಖರೀದಿಸಿ ಓಡಿಸಬೇಕಿದೆ... ಪ್ಲೀಸ್‌ ಪರವಾನಗಿ ನೀಡಿ: ಮಹಿಳೆಯೊಬ್ಬರಿಂದ ರಾಷ್ಟ್ರಪತಿಗೆ ಮನವಿ

helicoptor
Published on

ಭೋಪಾಲ್: ಹೆಲಿಕಾಪ್ಟರ್ ಖರೀದಿಗಾಗಿ ಸಾಲ ಬೇಕಿದೆ ಮತ್ತು ಅದನ್ನು ಚಲಾಯಿಸಲು ಪರವಾನಿಗೆ ಬೇಕಿದೆ. ದಯವಿಟ್ಟು ನನ್ನ ಮನವಿಯನ್ನು ಪುರಸ್ಕರಿಸಿ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿದ್ದಾರೆ.

ಭೋಪಾಲ್‌ನ ಮಾಂಡ್ಸೌರ್ ಜಿಲ್ಲೆ, ಅಗರ್ ಗ್ರಾಮದಲ್ಲಿ ವಾಸಿಸುತ್ತಿರುವ ಬಸಂತಿ ಬಾಯಿ ಲೋಹರ್ ಇಂಥದ್ದೊಂದು ಕುತೂಹಲದ ಬೇಡಿಕೆಯನ್ನು ರಾಷ್ಟ್ರಪತಿಯವರಿಗೆ ಸಲ್ಲಿಸಿದ್ದು, ಆ ಪತ್ರವೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಅಷ್ಟಕ್ಕೂ ಅವರು ಇಂಥದ್ದೊಂದು ಮನವಿ ಸಲ್ಲಿಸಲು ಕಾರಣ ಏನೆಂದರೆ, ಇವರ ಜಮೀನಿಗೆ ಹೋಗುವ ಮಾರ್ಗವನ್ನು ಓರ್ವ ವ್ಯಕ್ತಿ ಹಾಗೂ ಆತನ ಮಕ್ಕಳು ತಡೆದಿದ್ದಾರಂತೆ. ಆದ್ದರಿಂದ ತಮಗೆ ಬೇರೆ ದಾರಿ ಇಲ್ಲ, ಪತಿಯನ್ನು ಹೆಲಿಕಾಪ್ಟರ್‌ನಲ್ಲಿ ಜಮೀನಿಗೆ ಕಳುಹಿಸುತ್ತೇನೆ ಅನುಮತಿ ಕೊಡಿ ಎಂದು ಕೇಳಿದ್ದಾರೆ.

ಬಸಂತಿ ಬಾಯಿ ಲೋಹರ್ ಪತ್ರವನ್ನು ಹಿಂದಿಯಲ್ಲಿ ಬರೆದಿದ್ದು, ನನ್ನ ಮಕ್ಕಳಾದ ಲವ ಮತ್ತು ಕುಶ ಹಾಗೂ ಸ್ಥಳೀಯ ನಿವಾಸಿ ಪರಮಾನಂದ್ ಪಾಟಿದಾರ್ ಸೇರಿಕೊಂಡು ದಿನನಿತ್ಯ ನಾನೂ ಸಂಚರಿಸುವ ಜಮೀನಿನ ದಾರಿಯನ್ನು ಮುಚ್ಚಿದ್ದಾರೆ. ಹಾಗಾಗಿ ಜಮೀನಿಗೆ ಯಾವುದೇ ವಸ್ತುಗಳು ಮತ್ತು ದನಕರುಗಳನ್ನು ಕರೆದೊಯ್ಯಲು ಸಾಧ್ಯವಾಗುತ್ತಿಲ್ಲ. ಇದರಿಂದ ಮುಕ್ತಿ ಹೊಂದಲು ಹೆಲಿಕಾಪ್ಟರ್ ಖರೀದಿಗೆ ಸಾಲ ಕೊಡಿ ಎಂದು ಕೋರಿದ್ದಾರೆ.

ರಾಮಕರನ್ ಲೋಹರ್ ಅವರ ಪತ್ನಿ ಬಸಂತಿ ಅವರು ಈ ವಿಷಯವನ್ನು ಗ್ರಾಮ ಪಂಚಾಯಿತಿಯಿಂದ ಭೋಪಾಲ್‌ನ ಉನ್ನತ ಅಧಿಕಾರಿಗಳಿಗೆ ಹೇಳಿದರೂ ಪ್ರಯೋಜನ ಆಗಲಿಲ್ಲವಂತೆ. ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದರೂ ಸಮಸ್ಯೆ ಪರಿಹಾರವಾಗಿಲ್ಲ ಎನ್ನುವ ಕಾರಣಕ್ಕೆ ಇದೀಗ ಕೊನೆಯದಾಗಿ ರಾಷ್ಟ್ರಪತಿಗಳ ಮೊರೆ ಹೋಗಿದ್ದಾರೆ.

ಮಾಂಡ್ಸೌರ್ ಜಿಲ್ಲೆಯ ಸ್ಥಳೀಯಾಡಳಿತ ಪತ್ರದ ಕುರಿತು ತನಿಖೆ ನಡೆಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದೆ. ಪತ್ರ ವೈರಲ್ ಆಗುತ್ತಿದ್ದಂತೆ ಈ ಕುರಿತು ಕಂದಾಯ ಇಲಾಖೆ ಗಮನಹರಿಸಿದ್ದು ಜಿಲ್ಲಾ ತಾಹಶೀಲ್ದಾರ್ ಬಸಂತಿ ಅವರ ಮನೆಗೆ ತೆರಳಿ ಸ್ಥಳ ಪರಿಶೀಲಿಸಿದ್ದಾರೆ. ಆದರೆ ಅಲ್ಲಿ ಯಾವುದೇ ರೀತಿಯ ಸಮಸ್ಯೆ ಇರಲಿಲ್ಲ ಎಂದು ಜಿಲ್ಲಾಧಿಕಾರಿ ಮನೋಜ್ ಪುಷ್ಪ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net