ಇದು ಹಿಂದೂ-ಮುಸ್ಲಿಂ ದುರಂತ ಲವ್​ ಸ್ಟೋರಿ: ಹಸೆಮಣೆ ಏರಲು ಸಿದ್ಧವಾದವರಿಗೆ ಕೊಳ್ಳಿ ಇಟ್ಟ 'ಲವ್​ ಜಿಹಾದ್​'

marriage
Published on

ಮುಂಬೈ: ಹಿಂದೂ- ಮುಸ್ಲಿಂ ನಡುವಿನ ಪ್ರೇಮದ ವಿಷಯ. ಹುಡುಗ- ಹುಡುಗಿ ಒಪ್ಪಿದರು, ಮನೆಯವರೂ ಓಕೆ ಅಂದರು. ಆದರೆ ಅವರಿವರ ಬಾಯಲ್ಲಿ ಈ ವಿವಾಹ ಲವ್​ ಜಿಹಾದ್​ ರೂಪ ಪಡೆದು ಮದುವೆ ಆಮಂತ್ರಣ ಪತ್ರಿಕೆ ಪ್ರಿಂಟ್​ ಆದ ಮೇಲೆ ವಿವಾಹ ಕ್ಯಾನ್ಸಲ್​ ಆಗಿರುವ ದುರಂತ ನಡೆದಿದೆ!

ಮಹಾರಾಷ್ಟ್ರದ ನಾಸಿಕ್​ನ ರಸಿಕಾ (28) ಮತ್ತು ಆಸೀಫ್ ಮದುವೆ ನಿಶ್ಚಯವಾಗಿತ್ತು. ಪರಸ್ಪರ ಪ್ರೇಮಿಸಿದ್ದ ಅವರ ಮದುವೆಗೆ ಮನೆಯವರೂ ಒಪ್ಪಿದ್ದರು. ಮದುವೆಗೆ ಕಲ್ಯಾಣ ಮಂಟಪ ಬುಕ್ ಮಾಡಲಾಗಿತ್ತು. ಆದರೆ ಮದುವೆ ಆಹ್ವಾನ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಬಳಿಕ ದೊಡ್ಡ ಗಲಾಟೆ ಶುರುವಾಗಿದ್ದರಿಂದ ಮದುವೆ ಕ್ಯಾನ್ಸಲ್​ ಮಾಡಬೇಕಾಗಿ ಬಂದಿದೆ.

ಈ ಕುರಿತು ದುಃಖ ತೋಡಿಕೊಂಡಿರುವ ಯುವತಿಯ ತಂದೆ ಪ್ರಸಾದ್​, ರಸಿಕಾ ಅಂಗವಿಕಲೆ. ಆದ್ದರಿಂದ ಲವ್ ಜಿಹಾದ್ ಮಾಡಲಾಗುತ್ತಿದೆ ಎಂದು ಆರೋಪಿಸಿ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ನನ್ನ ಮಗಳು ದಿವ್ಯಾಂಗ ಆಗಿರೋದರಿಂದ ಆಕೆಯ ಮದುವೆ ವಿಳಂಬವಾಗಿತ್ತು. ಕೊನೆಗೆ ಮಗಳು ತನ್ನ ಇಚ್ಛೆಯನ್ನು ನಮ್ಮ ಮುಂದೆ ಹೇಳಿಕೊಂಡಿದ್ದಳು. ಆಸೀಫ್ ಕುಟುಂಬಸ್ಥರು ಕೂಡ ಈಕೆಯನ್ನು ಸೊಸೆ ಮಾಡಿಕೊಳ್ಳಲು ಒಪ್ಪಿದ್ದರು. ಇಲ್ಲಿ ಯಾವುದೇ ಬಲವಂತ ಧರ್ಮ ಪರಿವರ್ತನೆ ನಡೆಯುತ್ತಿಲ್ಲ. ಆದರೂ ಹೀಗಾಯಿತು ಎಂದು ನೋವು ತೋಡಿಕೊಂಡರು.

ಹಿಂದೂ ಸಂಪ್ರದಾಯದಂತೆ ಮದುವೆ ನಡೆಸಲು ಒಪ್ಪಿಗೆ ಸೂಚಿಸಿರುವ ಕಾರಣ ಇದು ವೈರಲ್​ ಆಗಿತ್ತು. ಇದೇನು ದೊಡ್ಡ ವಿಷಯವಲ್ಲ, ಆದರೂ ಹೀಗೆ ಏಕೆ ಆಯಿತು ಎಂದು ಕುಟುಂಬಸ್ಥರು ವಿಷಾದಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net