

ರಾಂಚಿ: ಹಿಂದೂ- ಮುಸ್ಲಿಂ ನಡುವೆ ಅಲ್ಲಲ್ಲಿ ಆಗಾಗ್ಗೆ ಸಂಘರ್ಷಗಳು ನಡೆಯುತ್ತಿದ್ದರೂ, ಕೆಲವೆಡೆಗಳಲ್ಲಿ ಎರಡೂ ಕೋಮಿನ ನಡುವೆ ಸಾರಮಸ್ಯದ ಘಟನೆಗಳೂ ನಡೆಯುತ್ತಿರುತ್ತವೆ. ಅಂಥದ್ದೇ ಒಂದು ಘಟನೆ ನಡೆದಿರುವುದು ಜಾರ್ಖಂಡ್ನಲ್ಲಿ. ಇಲ್ಲಿ ಮುಸ್ಲಿಂ ಉದ್ಯಮಿಯೊಬ್ಬರು 42 ಲಕ್ಷ ರೂ. ಖರ್ಚು ಮಾಡಿ ಶ್ರೀ ಕೃಷ್ಣನ ದೇವಸ್ಥಾನವನ್ನು ಕಟ್ಟಿಸಿದ್ದಾರೆ.
ಜಾರ್ಖಂಡ್‌ನ ದುಮ್ಕಾದ ಮಹೇಶ್‌ಬಥನ್‌ನಲ್ಲಿ ಉದ್ಯಮಿ ನೌಶಾದ್ ಶೇಖ್ 42 ಲಕ್ಷ ರೂಪಾಯಿ ವೆಚ್ಚದಲ್ಲಿ ಕೃಷ್ಣ ಮಂದಿರ ನಿರ್ಮಿಸಿದ್ದಾರೆ. ಶ್ರೀಕೃಷ್ಣನಿಂದ ಪ್ರಭಾವಿತರಾಗಿ ತಾವು ಇದನ್ನು ಕಟ್ಟಿಸಿರುವುದಾಗಿ ಹೇಳಿದ್ದಾರೆ.
ಈ ಬಗ್ಗೆ ಕೇಳಿದ ಪ್ರಶ್ನೆಗೆ ಉ್ತರಿಸಿದ ನೌಶಾದ್ ಶೇಖ್, ಎಲ್ಲರಿಗೂ ದೇವರು ಒಬ್ಬನೇ. ಆದ್ದರಿಂದ, ಒಬ್ಬೊಬ್ಬರು ದೇವಸ್ಥಾನ, ಮಸೀದಿ ಅಥವಾ ಚರ್ಚ್‌ನಲ್ಲಿ ಪೂಜಿಸುತ್ತಾರೆ. ನಾವು ಎಲ್ಲಿ ಪೂಜಿಸುತ್ತೇವೆ ಎಂಬುದು ಮುಖ್ಯವಲ್ಲ, ನಾವು ಎಷ್ಟು ಭಕ್ತಿಯನ್ನು ಹೊಂದಿದ್ದೇವೆ ಎಂಬುದು ಮುಖ್ಯ. ಕೃಷ್ಣ ಪರಮಾತ್ಮನೇ ನನ್ನ ಕನಸಿನಲ್ಲಿ ಬಂದು ತನಗಾಗಿ ದೇವಸ್ಥಾನವನ್ನು ನಿರ್ಮಿಸಲು ಪ್ರೇರೇಪಣೆ ನೀಡಿದ್ದಾನೆ. ನನಗೆ ಕೃಷ್ಣನಲ್ಲಿ ಭಕ್ತಿಯಿದೆ. ನಾನು ಶ್ರೀಕೃಷ್ಣನಿಂದ ಪ್ರಭಾವಿತನಾಗಿದ್ದೇನೆ’ ಎಂದಿದ್ದಾರೆ.
ಕಳೆದ ಸೋಮವಾರ ದೇವಸ್ಥಾನದ ‘ಪ್ರಾಣ-ಪ್ರತಿಷ್ಠೆ’ ನಡೆದಿದ್ದು, ಎಲ್ಲಾ ಸಮುದಾಯದ ಜನರು ಈ ದೇವಸ್ಥಾನಕ್ಕೆ ಆಗಮಿಸಿ, ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ. 3 ವರ್ಷಗಳಲ್ಲಿ ದೇವಾಲಯದ ನಿರ್ಮಾಣವಾಗಿದೆ. ಹಿಂದೂ ಪದ್ಧತಿಯಂತೆ 150 ಬ್ರಾಹ್ಮಣರಿಂದ ‘ಪ್ರಾಣ-ಪ್ರತಿಷ್ಠೆ’ ನೆರವೇರಿಸಲಾಯಿತು.