

ಕ್ಯಾಲಿಫೋರ್ನಿಯಾ: ಕರೊನಾ ವೈರಸ್ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ಮಾಸ್ಕ್ ಕಡ್ಡಾಯವಾಗಿದೆ. ಆದರೆ ಮೇಕಪ್ ಮಾಡಿಕೊಂಡು ಇತರರಿಗೆ ಪ್ರದರ್ಶನ ಮಾಡಬೇಕೆನ್ನುವ ಲಲನೆಯರಿಗೆ ಮಾತ್ರ ಈ ಮಾಸ್ಕ್ ನುಂಗಲಾರದ ತುತ್ತಾಗಿದೆ. ಅದರಲ್ಲಿಯೂ ಲಿಪ್‌ಸ್ಟಿಕ್ ಪ್ರಿಯರಿಗೆ ಮಾಸ್ಕ್ ಎನ್ನುವುದು ದೊಡ್ಡ ತಲೆನೋವಾಗಿಬಿಟ್ಟಿದೆ.
ಅಂಥದ್ದೇ ಒಂದು ಲಿಪ್‌ಸ್ಟಿಕ್ ಪ್ರಕರಣದಲ್ಲಿ ಅಮೆರಿಕದ ರೆಸ್ಟೋರೆಂಟ್ ಒಂದರಲ್ಲಿ ಇಬ್ಬರು ಮಹಿಳೆಯರ ನಡುವೆ ಕಿತ್ತಾಟ ಶುರುವಾಗಿದ್ದು, ಹೋಟೆಲ್ ಸಿಬ್ಬಂದಿ ಕೆಲಸ ಬಿಟ್ಟು ಹೋಗುವ ಘಟನೆ ನಡೆದಿದೆ. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಆಗಿದ್ದೇನೆಂದರೆ, ರೆಸ್ಟೋರೆಂಟ್‌ಗೆ ಮೇಕಪ್ ರಂಗಿನಿಂದ ಮುಳುಗಿರುವ ಯುವತಿಯೊಬ್ಬಳು ಮಾಸ್ಕ್ ಧರಿಸದೇ ಬರುತ್ತಾಳೆ. ಆಗ ರೆಸ್ಟೋರೆಂಟ್‌ನ ಮಹಿಳಾ ಸಿಬ್ಬಂದಿ ಮಾಸ್ಕ್ ಧರಿಸುವಂತೆ ಹೇಳುತ್ತಾಳೆ. ಅದಕ್ಕೆ ಕಾರಣ ಕೇಳಿದಾಗ ತಾನು ದುಬಾರಿ ಬೆಲೆಯ ಲಿಪ್‌ಸ್ಟಿಕ್ ಹಚ್ಚಿಕೊಂಡಿದ್ದು ಮಾಸ್ಕ್ ಧರಿಸಿದರೆ ಅದು ಹಾಳಾಗುತ್ತದೆ ಎಂದಿದ್ದಾಳೆ. ಆದರೆ ನಿಯಮದ ಪ್ರಕಾರ ಮಾಸ್ಕ್ ಧರಿಸಲೇಬೇಕು ಎಂದು ಸಿಬ್ಬಂದಿ ಹೇಳಿದ್ದಾಳೆ.
ಜಪ್ಪಯ್ಯ ಎಂದರೂ ಪಟ್ಟುಬಿಡದ ಆ ಯುವತಿ ಗಲಾಟೆ ಮಾಡಲು ಶುರು ಮಾಡಿದ್ದಾಳೆ. ಬರುವ ಗ್ರಾಹಕರನ್ನು ಸೌಜನ್ಯದಿಂದ ನೋಡಿಕೊಳ್ಳುವುದು ಸಿಬ್ಬಂದಿಯ ಕರ್ತವ್ಯ. ಆದರೆ ಮಾಸ್ಕ್‌ನಿಂದ ಆ ಯುವತಿ ರೇಗಿದ್ದಕ್ಕೆ ಸಿಬ್ಬಂದಿ ಕೂಡ ರೇಗಾಡಬೇಕಾಗಿ ಬಂತು. ನಂತರ ಇದು ಅತಿಯಾದರೆ ತನ್ನದೇ ತಪ್ಪು ಎಂದು ಕೆಲಸದಿಂದ ತೆಗೆದು ಹಾಕುತ್ತಾರೆ ಎಂದು ಅರಿಯ ಈ ಮಹಿಳಾ ಸಿಬ್ಬಂದಿ ನಿಮ್ಮಂಥವರಿಂದಲೇ ನಮಗೆ ಕೆಲಸ ಮಾಡಲು ಕಷ್ಟವಾಗುತ್ತೆ ಎಂದು ಹೇಳಿ ಕೆಲಸವನ್ನೇ ಬಿಟ್ಟು ಹೋಗಿದ್ದಾಳೆ.