ರಾಜಪಕ್ಸ ರಾಜೀನಾಮೆ ಸ್ವೀಕೃತ- ಶಾಂತವಾದ ಲಂಕೆ: ಇನ್ನು ಏಳು ದಿನಗಳಲ್ಲಿ ನೂತನ ಅಧ್ಯಕ್ಷ

shreelanka
Published on

ಕೋಲಂಬೊ: ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟು ಮತ್ತು ರಾಜಕೀಯ ಅಸ್ಥಿರತೆ ನಡುವೆ ಅಧ್ಯಕ್ಷರಾಗಿದ್ದ ಗೋತಬಯ ರಾಜಪಕ್ಸ ಜುಲೈ 14ರ ರಾತ್ರಿ ಕೊನೆಗೂ ರಾಜೀನಾಮೆ ನೀಡಿದ್ದಾರೆ.

ಗೋತಬಯ ಅವರ ರಾಜೀನಾಮೆಗೆ ಆಗ್ರಹಿಸಿ ನಾಗರಿಕರು ದಂಗೆಯೇಳುವ ಮೂಲಕ ರಾಷ್ಟ್ರಪತಿ ಭವನಕ್ಕೆ ಮುತ್ತಿಗೆ ಹಾಕಿದ್ದರು. ಈ ಬೆನ್ನಲ್ಲೇ ರಾಷ್ಟ್ರಪತಿ ಭವನದಿಂದ ತಲೆಮರೆಸಿಕೊಂಡಿದ್ದ ಗೋತಬಯ ಕೊನೆಗೂ ತಮ್ಮ ಸ್ಥಾನಕ್ಕೆ ಇ-ಮೇಲ್​ ಮೂಲಕ ರಾಜೀನಾಮೆ ನೀಡಿದ್ದು, ಅದನ್ನು ಇಂದು ಸ್ಪೀಕರ್​ ಅಂಗೀಕರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಶ್ರೀಲಂಕಾ ಸದ್ಯ ಶಾಂತವಾಗಿದೆ. ಗೋತಬಯ ಅವರ ರಾಜೀನಾಮೆಗೆ ಆಗ್ರಹಿಸಿ ತೀವ್ರ ಸ್ವರೂಪದ ಪ್ರತಿಭಟನೆ ಹಮ್ಮಿಕೊಂಡಿದ್ದ ಇಲ್ಲಿಯ ಜನರು ಪ್ರತಿಭಟನೆಯನ್ನು ಹಿಂದಕ್ಕೆ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ, ಸದ್ಯ ಪರಿಸ್ಥಿತಿ ತಿಳಿಯಾಗಿರುವುದಾಗಿ ವರದಿಯಾಗಿದೆ.

ಹೊಸ ಅಧ್ಯಕ್ಷರನ್ನು ಇನ್ನು ಏಳು ದಿನಗಳಲ್ಲಿ ನೇಮಕ ಮಾಡುವುದಾಗಿ ಸ್ಪೀಕರ್​ ಹೇಳಿದ್ದಾರೆ. ಅಲ್ಲಿಯವರೆಗೂ ಹಂಗಾಮಿ ಅಧ್ಯಕ್ಷರಾಗಿ ನೇಮಕಗೊಂಡಿರುವ ರನಿಲ್ ವಿಕ್ರಮ ಸಿಂಘೆ ಅವರೇ ಮುಂದುವರೆಯಲಿದ್ದಾರೆ. ಈ ನಡುವೆಯೇ ಸಿಂಘೆ ಅವರನ್ನು ಹಂಗಾಮಿ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net