ಲಾಲುಗೆ ಸಿಕ್ತು ಬೇಲ್‌: ಆದರೆ ‘ಖಜಾನೆ’ಯಿಂದಾಗಿ ಸಿಕ್ತಿಲ್ಲ ಬಿಡುಗಡೆ- ಜೈಲೇ ಗತಿ!

laloo bail
Published on

ರಾಂಚಿ: ಬಹುಕೋಟಿ ಮೇವು ಹಗರಣದಲ್ಲಿ ಜೈಲುಪಾಲಾಗಿರುವ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ‌ ಯಾದವ್‌ ಅವರಿಗೆ ಜಾಮೀನು ಮಂಜೂರಾಗಿದೆ. ಆದರೂ ಅವರಿಗೆ ಜೈಲಿನಿಂದ ಬಿಡುಗಡೆಯ ಭಾಗ್ಯ ಇಲ್ಲವಾಗಿದೆ. ಜೈಲೇ ಗತಿಯಾಗಿದೆ!

ಏಕೆಂದರೆ, ಈಗ ಲಾಲೂ ಪ್ರಸಾದ್‌ ಅವರಿಗೆ ಜಾಮೀನು ಸಿಕ್ಕಿರುವ ಪ್ರಕರಣವೆಂದರೆ ಚಾಯಿಬಾಸಾ ಅವ್ಯವಹಾರದ ಕುರಿತಾಗಿ ದಾಖಲಾಗಿರುವ ಕೇಸಿನಲ್ಲಿ. ಈ ಕೇಸಿಗೆ ಸಂಬಂಧಿಸಿದಂತೆ ಜಾರ್ಖಂಡ್‌ ಹೈಕೋರ್ಟ್‌ ಇಂದು ಅವರಿಗೆ ಜಾಮೀನು ಮಂಜೂರು ಮಾಡಿದೆ.

ಆದರೆ ದುಮ್ಕಾ ಖಜಾನೆ ಅವ್ಯವಹಾರ ಪ್ರಕರಣದಲ್ಲಿಯೂ ಸಿಲುಕಿರುವ ಲಾಲೂ ಅವರಿಗೆ ಆ ಕೇಸಿನಲ್ಲಿ ಇದುವರೆಗೆ ಜಾಮೀನು ಮಂಜೂರು ಆಗಿಲ್ಲ. ಆದ್ದರಿಂದ ಅವರನ್ನು ಜೈಲಿನಲ್ಲಿ ಸದ್ಯ ಬಿಡುಗಡೆ ಮಾಡುವುದಿಲ್ಲ. ಹೀಗಾಗಿ ಅವರು ಜೈಲಿನಲ್ಲಿಯೇ ಇರಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

1992–93ರಲ್ಲಿ ಚಾಯಿಬಾಸಾ ಖಜಾನೆಯಿಂದ 33.67 ಕೋಟಿ ರೂ ಹಣವನ್ನು ಅಕ್ರಮವಾಗಿ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ) ಅಧ್ಯಕ್ಷ ಲಾಲು ಸೇರಿದಂತೆ ಒಟ್ಟು 16 ಮಂದಿಗೆ ಜೈಲು ಶಿಕ್ಷೆ ವಿಧಿಸಲಾಗಿತ್ತು. ಆ ಅವಧಿಯಲ್ಲಿ ಲಾಲು ಅವರೇ ಬಿಹಾರದ ಮುಖ್ಯಮುಂತ್ರಿ ಆಗಿದ್ದರು.

ಇನ್ನು ಇವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ದುಮ್ಕಾ ಖಜಾನೆಯಲ್ಲಿ ನಡೆದ 3.13 ಕೋಟಿ ರೂ. ಅವ್ಯವಹಾರಕ್ಕೆ ಸಂಬಂಧಿಸಿದ ಹಗರಣದಲ್ಲಿಯೂ ಇವರ ಭಾಗಿಯಾಗಿರುವುದು ಸಾಬೀತಾಗಿದ್ದು ಅದರಲ್ಲಿಯೂ ಶಿಕ್ಷೆ ಅನುಭವಿಸುತ್ತಿದ್ದಾರೆ. ಇದರ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಒಟ್ಟಾರೆಯಾಗಿ ಇವರಿಗೆ 14 ವರ್ಷದ ಜೈಲುಶಿಕ್ಷೆಯಾಗಿದೆ.

72 ವರ್ಷ ವಯಸ್ಸಿನ ಲಾಲು ಅವರು ರಾಂಚಿಯಲ್ಲಿರುವ ರಾಜೇಂದ್ರ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ (ರಿಮ್ಸ್‌) ಆಸ್ಪತ್ರೆಯಲ್ಲಿ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net