

ಲಡಾಖ್: ಭಾರತ ಸೇರಿದಂತೆ ಬಹುತೇಕ ರಾಷ್ಟ್ರಗಳಿಂದ ಛೀಮಾರಿ ಹಾಕಿಸಿಕೊಂಡರೂ, ತಲೆ ಮೇಲೆ ಆಕಾಶ ಕಳಜಿಬಿದ್ದರೂ, ಕುತಂತ್ರ ಬುದ್ಧಿಯಿಂದ ಲಡಾಖ್‌ನಲ್ಲಿ ಪುನಃ ಭಾರತದ ಜತೆ ಚೀನಾ ಸಂಘರ್ಷಕ್ಕೆ ಇಳಿದಿದೆ.
ಭಾರತ-ಚೀನಾ ಮಧ್ಯೆ ಪೂರ್ವ ಲಡಾಖ್‌ನ ಗಡಿ ವಾಸ್ತವ ರೇಖೆಯಲ್ಲಿ ಪುನಃ ಉದ್ವಿಗ್ನ ವಾತಾವರಣ ನಡೆಯುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಣೆ ಅವರು ಲೇಹ್ ನಗರವನ್ನು ತಲುಪಿದ್ದಾರೆ.
ಲಡಾಖ್‌ನ ಅತಿದೊಡ್ಡ ನಗರ ಎಂದೇ ಕರೆಸಿಕೊಳ್ಳುತ್ತಿರುವ ಲೇಹ್ ನಗರವನ್ನು ತಲುಪಿರುವ ನರವಣೆ ಅವರು ಉದ್ವಿಗ್ನ ವಾತಾವರಣದ ಕುರಿತು ಪರಾಮರ್ಶೆ ನಡೆಸಲಿದ್ದಾರೆ. ಗಡಿ ನಿಯಂತ್ರಣ ರೇಖೆಯ ಬಳಿ ಭಾರತೀಯ ಸೇನೆಯ ಭದ್ರತಾ ಸ್ಥಿತಿಗತಿಗಳ ಕುರಿತು ಅವರು ಚರ್ಚಿಸಲಿದ್ದಾರೆ.
ಎರಡು ದಿನಗಳವರೆಗೆ ಸ್ಥಳದಲ್ಲಿ ಇರುವ ಅವರು, ವಸ್ತುಸ್ಥಿತಿಯ ಕುರಿತು ಪರಾಮರ್ಶಿಸಲಿದ್ದಾರೆ. ಗಡಿಯಲ್ಲಿ ಮತ್ತೆ ಉಲ್ಭಣಗೊಂಡಿರುವ ಸ್ಥಿತಿಗತಿ ಬಗ್ಗೆ ಅವರಿಗೆ ಹಿರಿಯ ಕಮಾಂಡರ್‌ಗಳು ವಿವರಿಸಲಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.
ಆಗಸ್ಟ್ 29 ಮತ್ತು 30 ರ ಮಧ್ಯರಾತ್ರಿಯಲ್ಲಿ ಲಡಾಖ್‌ನ ಚುಶುಲ್ ಬಳಿಯ ದಕ್ಷಿಣದ ದಂಡೆಯ ಪಾಂಗೊಂಗ್ ತ್ಸೊ ಬಳಿ ಚೀನಾ ಸೈನಿಕರ ಭಾರತದ ಪ್ರದೇಶಗಳಿಗೆ ಅತಿಕ್ರಮಣ ಪ್ರವೇಶ ಮಾಡಲು ಸಂಚುರೂಪಿಸಿದ್ದರು. ಈ ಪ್ರಯತ್ನವನ್ನು ಭಾರತೀಯ ಸೇನೆಯು ವಿಫಲಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ, ಸೇನಾ ಮುಖ್ಯಸ್ಥರು ಭೇಟಿಯಾಗಿದ್ದು, ಸಂಪೂರ್ಣ ಮಾಹಿತಿ ಪಡೆದುಕೊಳ್ಳಲಿದ್ದಾರೆ.