ಬಿಜೆಪಿ ಸೇರಿದ ಖುಷ್ಬೂ: ಅನುಮಾನಗಳಿಗೆ ತೆರೆ ಎಳೆದ ನಟಿ

khushboo1
Published on

ಚೆನ್ನೈ: ಕಾಂಗ್ರೆಸ್​ನ ಮಾಜಿ  ರಾಷ್ಟ್ರೀಯ ವಕ್ತಾರೆ, ಬಹುಭಾಷಾ ನಟಿ ಖುಷ್ಬೂ ಕೊನೆಗೂ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್​ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ರಾಜೀನಾಮೆ ಪತ್ರ ರವಾನಿಸಿದ್ದ ಖುಷ್ಬೂ ಅವರ ಮುಂದಿನ ನಡೆ ಏನು ಎಂಬ ಬಗ್ಗೆ ಎದ್ದಿದ್ದ ಪ್ರಶ್ನೆ, ಅನುಮಾನಗಳು ಇದೀಗ ಬಗೆಹರಿದಂತಾಗಿದೆ.

ಹಣೆಗೆ ದೊಡ್ಡ ತಿಲಕವಿಟ್ಟು ತಮ್ಮ ಟ್ವೀಟರ್‌ ಖಾತೆಯಲ್ಲಿ ತಿಲಕವೇ ಎದ್ದುಕಾಣುವಂಥ ಫೋಟೋ ಹಾಕಿಕೊಂಡಿದ್ದ ಖುಷ್ಬೂ, ಹಲವರು ನನ್ನಲ್ಲಿ ಬದಲಾವಣೆಗಳನ್ನು ಗುರುತಿಸುತ್ತಿದ್ದಾರೆ. ನಾವೆಲ್ಲರೂ ಕಲಿಯುತ್ತಾ ಬೆಳೆಯುತ್ತೇವೆ, ಇಷ್ಟ-ಅನಿಷ್ಟ, ಯೋಚನೆ ಮತ್ತು ಸಿದ್ಧಾಂತಗಳು ಹೊಸ ಕನಸಿನೊಂದಿಗೆ ಹೊಸ ರೂಪ ಪಡೆಯುತ್ತಿವೆ. ನೀವು ಇಷ್ಟ ಮತ್ತು ಪ್ರೀತಿಯ ಜತೆಗಿನ ವ್ಯತ್ಯಾಸ ಹಾಗೂ ತಪ್ಪು ಮತ್ತು ಸರಿಗಳ ಮಧ್ಯೆಯ ವ್ಯತ್ಯಾಸವನ್ನು ಅರ್ಥ ಮಾಡಿಕೊಳ್ಳಿ. ಜೀವನದಲ್ಲಿ ಬದಲಾವಣೆ ಅನಿವಾರ್ಯ ಎಂದು ಹೇಳುವ ಮೂಲಕ ಕಾಂಗ್ರೆಸ್​ ಬಿಟ್ಟು, ಬೇರೆ ಪಕ್ಷವನ್ನು ಸೇರುವ ಕುರಿತು ಹಿಂಟ್​ ನೀಡಿದ್ದರು.

ಕಾಂಗ್ರೆಸ್​ನ ಸಿದ್ಧಾಂತಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದ ಇವರು, 2014ರ ಚುನಾವಣೆಯಲ್ಲಿ ಸೋತರೂ ಕಾಂಗ್ರೆಸ್​ನ ಸಿದ್ಧಾಂತದಿಂದಾಗಿ ತಾನು ಪಕ್ಷಕ್ಕೆ ಸೇರ್ಪಡೆಯಾಗಿದ್ದೆ. ಹೆಸರು, ಕೀರ್ತಿ, ಹಣದ ಆಸೆ ಇರದ ಕಾರಣ ಅಲ್ಲಿಯೇ ಮುಂದುವರೆಯಲು ಇಚ್ಛಿಸಿದ್ದೆ. ಆದರೆ ಉನ್ನತ ಸ್ಥಾನದಲ್ಲಿ ಇರುವ ಕೆಲವರಿಗೆ ರಾಜಕೀಯದ ಮೂಲವೇ ಗೊತ್ತಿಲ್ಲ. ಉನ್ನತ ಸ್ಥಾನದಲ್ಲಿ ಇದ್ದವರು ಆಳುತ್ತಿರುವುದನ್ನು ನಾನು ನೋಡಲಾರೆ. ಆದ್ದರಿಂದ ಪಕ್ಷಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರ ನೂತನ ರಾಷ್ಟ್ರೀಯ ನೀತಿಯನ್ನು ಕೊಂಡಾಡುವ ಮೂಲಕ, ಬಿಜೆಪಿ ಸೇರುವ ಕುರಿತೂ ಸೂಚ್ಯವಾಗಿ ತಿಳಿಸಿದ್ದರು.

ಅದರಂತೆ ರಾಜೀನಾಮೆ ಪತ್ರವನ್ನು ಸೋನಿಯಾಗಾಂಧಿಯವರಿಗೆ ರವಾನಿಸಿ ಇದೀಗ ಬಿಜೆಪಿಯನ್ನು ಅಧಿಕೃತವಾಗಿ ಸೇರಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಯವರು ಖುಷ್ಬೂ ಅವರನ್ನು ಬರಮಾಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net