

ಕೊಚ್ಚಿ: ಕೇರಳದ ಸರ್ಕಾರವನ್ನೇ ಅಲ್ಲಾಡಿಸುವ ಹಂತಕ್ಕೆ ಬಂದಿರುವ ಚಿನ್ನದ ಸ್ಮಗ್ಲಿಂಗ್ ಕೇಸ್ನ ಆಳಕ್ಕೆ ಹೋದಷ್ಟೂ ತನಿಖಾಧಿಕಾರಿಗಳಿಗೆ ಹೊಸಹೊಸ ವಿಷಯಗಳು ತಿಳಿಯುತ್ತಲೇ ಸಾಗಿದೆ. ಇದೀಗ ಈ ಕೇಸ್ಗೆ ನೇರವಾಗಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ನಂಟಿದೆ ಎಂಬ ಅನುಮಾನವಿರುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ತಿಳಿದಿದೆ.
ಇದರಿಂದಾಗಿ ಕಳ್ಳ ಸಾಗಣೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಈ ಕುರಿತು ರಾಷ್ಟ್ರೀಯ ತನಿಖಾ ಸಂಸ್ಥೆ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದೆ. ಚಿನ್ನ ಕಳ್ಳಸಾಗಣೆ ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಐಎ, ಭೂಗತ ಪಾತಕಿಯ ದಾವೂದ್ ಇಬ್ರಾಹಿಂ ಜತೆಗೆ ತಾಂಜಾನಿಯಾಗೆ ಆರೋಪಿಗಳು ಹಲವು ಬಾರಿ ಭೇಟಿ ನೀಡಿದ್ದಾರೆ ಎಂಬ ವಿಷಯವನ್ನು ಬಹಿರಂಗಪಡಿಸಿದೆ.
ಈ ಪ್ರಕರಣದಲ್ಲಿ ಬಂಧಿತರಾಗಿರುವ ಕೆಲವು ಆರೋಪಿಗಳು ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ಎನ್ಐಎಎ ಅಧಿಕಾರಿಗಳು ಈ ಮಾಹಿತಿಗಳನ್ನು ಕೋರ್ಟ್ ಮುಂದಿಟ್ಟಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಗಳಾಗಿರುವ ರಮೀಜ್ ಮತ್ತು ಶರಾಫುದ್ದೀನ್ ಆಫ್ರಿಕಾ ದೇಶ ತಾಂಜೇನಿಯಾಕ್ಕೆ ಭೇಟಿ ನೀಡಿದ್ದರು. ಅಲ್ಲಿ ಗನ್ ಮಳಿಗೆಗಳಿಗೆ ಭೇಟಿ ನೀಡಿದ್ದರು. ತಾಂಜೇನಿಯಾದಲ್ಲಿ ರಮೀಜ್ ವಜ್ರದ ವ್ಯಾಪಾರಕ್ಕೆ ಲೈಸೆನ್ಸ್ ಪಡೆಯಲು ಯತ್ನಿಸಿದ್ದ.
ನಂತರ ಆತ ಚಿನ್ನವನ್ನು ಅರಬ್ ಸಂಯುಕ್ತ ಸಂಸ್ಥಾನಕ್ಕೆ ಕಳ್ಳಸಾಗಣೆ ಮಾಡಿದ್ದ. ಅಲ್ಲಿಂದ ಕೇರಳಕ್ಕೆ ತರಲಾಯಿತು ಎಂದಿರುವ ಎನ್‌ಐಎ ಪರ ವಕೀಲರು, ತಾಂಜೇನಿಯಾದಲ್ಲಿ ಶರಾಫುದ್ದೀನ್ ರೈಫಲ್‌ನೊಂದಿಗೆ ತೆಗೆಸಿಕೊಂಡಿರುವ ಫೋಟೊಗಳನ್ನು ತನಿಖಾಧಿಕಾರಿಗಳು ಸಂಗ್ರಹಿಸುವ ಬಗ್ಗೆ ನ್ಯಾಯಾಧೀಶರಿಗೆ ತಿಳಿಸಿದ್ದಾರೆ.
ತಾಂಜೇನಿಯಾ ಮತ್ತು ದುಬೈ ಎರಡೂ ಸಹ ಡಿ-ಕಂಪನಿ ಸಕ್ರಿಯವಾಗಿರುವ ದೇಶಗಳಾಗಿದ್ದು, ದಕ್ಷಿಣ ಭಾರತದ ಫಿರೋಜ್ ಒಯಾಸಿಸ್ ಈ ದೇಶಗಳಲ್ಲಿ ದಾವೂದ್‌ನ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾನೆ. ಹೀಗಾಗಿ ಈ ಪ್ರಕರಣದ ಆರೋಪಿಗಳು ದಾವೂದ್ ಜತೆ ನಂಟು ಹೊಂದಿರಬಹುದೆಂಬ ಬಲವಾದ ಶಂಕೆ ಇದೆ ಎಂದು ಎನ್‌ಐಎ ಹೇಳಿದೆ.
ಸದ್ಯ ಈ ಪ್ರಕರಣ ಪ್ರಮುಖ ಆರೋಪಿಗಳಾಗಿರುವ ಸ್ವಪ್ನ ಸುರೇಶ್ ಸೇರಿದಂತೆ ಹಲವರು ಜೈಲಿನಲ್ಲಿದ್ದಾರೆ. ಕಳೆದ ಜುಲೈ ತಿಂಗಳಿನಲ್ಲಿ ತಿರುವನಂತಪುರದ ವಿಮಾನ ನಿಲ್ದಾಣದಲ್ಲಿ ಅನಾಥವಾಗಿ ಬಿದ್ದಿದ್ದ ಸುಮಾರು 15 ಕೋಟಿ ರೂಪಾಯಿ ಮೌಲ್ಯದ 30 ಕೆ.ಜಿ. ಚಿನ್ನದ ಬ್ಯಾಗ್ ಪ್ರಕರಣ ಇದಾಗಿದೆ. ರಾಜತಾಂತ್ರಿಕ ರಕ್ಷಣೆ ಹೊಂದಿರುವ ‘ಡಿಪ್ಲೊಮ್ಯಾಟಿಕ್ ಬ್ಯಾಗೇಜ್’ನಲ್ಲಿ ಈ ಚಿನ್ನ ಸಿಕ್ಕಿತ್ತು.
ಇಷ್ಟೊಂದು ಭಾರಿ ಪ್ರಮಾಣದ ಚಿನ್ನ ಇಲ್ಲಿಗೆ ಹೇಗೆ ಬಂತು? ಅದೂ ರಾಜತಾಂತ್ರಿಕ ರಕ್ಷಣೆ ಹೊಂದಿರುವ ಡಿಪ್ಲೊಮ್ಯಾಟಿಕ್ ಬ್ಯಾಗೇಜ್‌ನಲ್ಲಿ ಇದು ಹೇಗೆ ಬಂತು ಎಂಬ ಬಗ್ಗೆ ತನಿಖೆ ನಡೆಯುವ ಸಂದರ್ಭದಲ್ಲಿ ತಿರುವನಂತಪುರದ ದೂತಾವಾಸ ಕಚೇರಿಯ ಮಾಜಿ ಉದ್ಯೋಗಿ ಸ್ವಪ್ನಾ ಸುರೇಶ್ ಹೆಸರು ಕೇಳಿಬಂದಿತ್ತು.
ಈ ಪ್ರಕರಣದ ಬೆನ್ನಟ್ಟಿ ಹೋಗಿದ್ದ ತನಿಖಾಧಿಕಾರಿಗಳಿಗೆ ನೇರವಾಗಿ ಮುಖ್ಯಮಂತ್ರಿ ಕಾರ್ಯಾಲಯದ ಲಿಂಕ್ ಇರುವುದೂ ತಿಳಿದಿತ್ತು. ನಂತರ ದೊಡ್ಡ ದೊಡ್ಡ ಅಧಿಕಾರಿಗಳು, ರಾಜಕಾರಣಿಗಳು ಇದರಲ್ಲಿ ಭಾಗಿಯಾಗಿರುವ ವಿಷಯ ತಿಳಿದಿತ್ತು. ಅಗೆದಷ್ಟೂ, ಬಗೆದಷ್ಟೂ ವಿಸ್ತಾರವಾಗಿ ಹೋಗುತ್ತಿರುವ ಈ ಗೋಲ್ಡ್ ಮಾಫಿಯಾ ಕೇಸ್ ಇದೀಗ ದಾವೂದ್ ಇಬ್ರಾಹಿಂವರೆಗೆ ಬಂದು ನಿಂತಿದೆ.