ಅರೆಸ್ಟ್‌ ಮಾಡಿದ ಪೊಲೀಸ್‌ ಅಧಿಕಾರಿಯ ಹತ್ಯೆಗೆ ಖ್ಯಾತ ನಟನ ಸಂಚು! ಬಯಲಾಯ್ತು ಭಯಾನಕ ರಹಸ್ಯ

dilip
Published on

ತಿರುವನಂತಪುರ: ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ತನ್ನನ್ನು ಬಂಧಿಸಿರುವ ಪೊಲೀಸ್ ಅಧಿಕಾರಿಗಳ ಕೈಕತ್ತರಿಸಿ, ಹತ್ಯೆ ಮಾಡುವ ಮಹಾಸಂಚನ್ನು ಕೇರಳದ ಪ್ರಸಿದ್ಧ ನಟ ರೂಪಿಸಿದ್ದ ಭಯಾನಕ ರಹಸ್ಯ ಬಯಲಾಗಿದೆ.

ನಟ ದಿಲೀಪ್‌ ವಿರುದ್ಧ ತನಿಖೆ ನಡೆಸುತ್ತಿರುವ ಅಧಿಕಾರಿಗೆ ಈ ರಹಸ್ಯ ಬಯಲಾಗಿದೆ. ಅಧಿಕಾರಿಯನ್ನು ಮುಗಿಸುವ ಸಂಬಂಧ ಆತ ಮಾಡಿರುವ ಆಡಿಯೋ ಕ್ಲಿಪ್ ಕೂಡ ರಿಲೀಸ್ ಆಗಿದೆ. ಇದಕ್ಕೆ ಸಂಬಂಧಿಸಿದಂತೆ ಆತನ ವಿರುದ್ಧ ಎಫ್‌ಐಆರ್‌ ದಾಖಲು ಮಾಡಲಾಗಿದೆ.

ಏನಿದು ಘಟನೆ?

ದಿಲೀಪ್ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲು ಮಾಡಿದ್ದರು. ಫೆಬ್ರವರಿ 2017 ರಲ್ಲಿ ಎರ್ನಾಕುಲಂನಲ್ಲಿ ನಡೆದ ಘಟನೆ ಇದಾಗಿದೆ. ನಟಿ ಶೂಟಿಂಗ್ ಮುಗಿಸಿಕೊಂಡು ಹೋಗುತ್ತಿರಬೇಕಾದರೆ ಆಕೆಯನ್ನು ಅಪಹರಿಸಲಾಗಿದೆ. ನಂತರ ಚಲಿಸುತ್ತಿದ್ದ ವಾಹನದಲ್ಲಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಅದು ಅಲ್ಲದೇ ಈ ದೃಶ್ಯಗಳನ್ನು ರೆಕಾರ್ಡ್ ಸಹ ಮಾಡಲಾಗಿದೆ.

ಇದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದ ಉಪ ಅಧೀಕ್ಷಕ ಬೈಜು ಪೌಲೋಸ್, ಈತನ ವಿರುದ್ಧ ಹಲವು ಮಾಹಿತಿ ಕಲೆ ಹಾಕಿದ್ದು, ಇನ್ನೂ ಹೆಚ್ಚಿನ ತನಿಖೆ ನಡೆಸುತ್ತಿದ್ದರು. ನಂತರ ಘಟನೆಗೆ ಸಂಬಂಧಿಸಿದಂತೆ ದಿಲೀಪ್‌ನನ್ನು ಬಂಧಿಸಲಾಗಿತ್ತು. ಇದರಿಂದ ಸಿಟ್ಟಿಗೆದ್ದಿದ್ದ ದಿಲೀಪ್‍ ತನ್ನ ಸೋದರ ಮಾವ ಸೂರಜ್ ಜತೆ ಸೇರಿ ಅಧಿಕಾರಿಯ ಮುಗಿಸುವ ಬಗ್ಗೆ ಫೋನ್ ನಲ್ಲಿ ಚರ್ಚೆ ಮಾಡಿದ್ದಾರೆ. ಈಗ ಆ ಆಡಿಯೋ ಕ್ಲಿಪ್ ವೈರಲ್‌ ಆಗಿದೆ. ಈ ಫೋನ್‌ನಲ್ಲಿರುವ ಧ್ವನಿ ದಿಲೀಪ್‌ ಮತ್ತು ಸೂರಜ್‌ದ್ದೇ ಎಂದು ಬಹಿರಂಗಗೊಂಡಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಸರ್ಕಾರ ತನಿಖಾ ತಂಡವನ್ನು ರಚಿಸಿದೆ. ಪ್ರಸ್ತುತ ದಿಲೀಪ್, ಸೂರಜ್, ದಿಲೀಪ್ ಅವರ ಸಹೋದರ ಅನೂಪ್, ಬಾಲಚಂದ್ರಕುಮಾರ್ ‘ವಿಐಪಿ’ ಎಂದು ಸಂಬೋಧಿಸಿದ ವ್ಯಕ್ತಿ ಮತ್ತು ಇತರ ಇಬ್ಬರು ಸೇರಿದಂತೆ ಆರು ಜನರ ವಿರುದ್ಧ ಹೊಸ ಎಫ್‌ಐಆರ್‌ನಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net