

ಕೊಚ್ಚಿ: ಭಾರತದ ಅತ್ಯಂತ ಪುರಾತನ ವೈದ್ಯ ಪದ್ಧತಿ ಆಯುರ್ವೇದದಲ್ಲಿ ಇರುವ ಶಕ್ತಿ ಕರೊನಾ ಕಾಲದಲ್ಲಿ ಜಗಜ್ಜಾಹೀರವಾಗಿದೆ. ಈ ಪದ್ಧತಿ ವಿರುದ್ಧ ಆಧುನಿಕ ವೈದ್ಯರು ತಿರುಗಿಬಿದ್ದರೂ ಆಯುರ್ವೇದ ಭಾರತದ ಗಡಿದಾಟಿ ಇಡೀ ಜಗತ್ತಿನ ಕಣ್ಣು ಭಾರತದತ್ತ ನೆಡುವಂತೆ ಮಾಡಿರುವುದೂ ಅಷ್ಟೇ ಸತ್ಯ.
ಇದೀಗ ತಮ್ಮ ಮಗಳು ಕಣ್ಣಿನ ದೃಷ್ಟಿಯನ್ನು ವಾಪಸ್ ಪಡೆದುಕೊಳ್ಳಬಲ್ಲಳು ಎಂಬ ನಂಬಿಕೆಯನ್ನೇ ಕಳೆದುಕೊಂಡಿದ್ದ ಕೀನ್ಯಾದ ಮಾಜಿ ಪ್ರಧಾನಿ ರೈಲಾ ಒಡಿಂಗಾರ ಮಗಳು ಆಯುರ್ವೇದ ಚಿಕಿತ್ಸೆಯಿಂದ ಮರಳಿ ಕಣ್ಣು ಪಡೆದುಕೊಂಡಿದ್ದಾರೆ. ಕೇರಳದ ಎರ್ನಾಕುಲಂನ ಕೂತ್ತಟ್ಟುಕುಳಂನಲ್ಲಿರುವ ಆಯುರ್ವೇದ ಕಣ್ಣಿನ ಆಸ್ಪತ್ರೆ-ಸಂಶೋಧನಾ ಕೇಂದ್ರದಲ್ಲಿ ಇವರ ಮಗಳಿಗೆ ದೃಷ್ಟಿಭಾಗ್ಯ ಸಿಕ್ಕಿದೆ.
ಇದಕ್ಕಾಗಿ ಭಾರತ ಮತ್ತು ಆಯುರ್ವೇದ ಪದ್ಧತಿಯನ್ನು ಹಾಡಿ ಹೊಗಳಿದ ರೈಲಾ ಒಡಿಂಗಾ ತಮ್ಮ ದೇಶದಲ್ಲಿಯೂ ಇದರ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ. ಈ ವರ್ಷದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಒಡಿಂಗಾ, ಮಗಳ ಚಿಕಿತ್ಸೆಗಾಗಿ ಕೇರಳಕ್ಕೆ ಬಂದಿದ್ದರು. ನಾನು ಕೀನ್ಯಾದ ಅಧ್ಯಕ್ಷನಾದರೆ ಕೀನ್ಯಾದಲ್ಲಿಯೂ ಆಯುರ್ವೇದ ಆಸ್ಪತ್ರೆ ತೆರೆಯುವುದಾಗಿ ಹೇಳಿದ್ದಾರೆ.
ಮಗಳು ದೃಷ್ಟಿ ಪಡೆಯುತ್ತಿದ್ದಂತೆಯೇ, ಖುಷಿಗೊಂಡಿರುವ ಒಡಿಂಗಾ ಈ ಕುರಿತು ಟ್ವೀಟ್ ಮಾಡಿದ್ದಾರೆ. ಇವರ ಮಗಳು ಕಣ್ಣಿನ ನರ ಹಾನಿಯ ನಂತರ 2017 ರಲ್ಲಿ ದೃಷ್ಟಿ ಕಳೆದುಕೊಂಡಿದ್ದರು. ದಕ್ಷಿಣ ಆಫ್ರಿಕಾ, ಇಸ್ರೇಲ್ ಮತ್ತು ಚೀನಾದಲ್ಲಿ ಚಿಕಿತ್ಸೆ ಪಡೆದಿದ್ದರೂ ದೃಷ್ಟಿ ಮರಳಿರಲಿಲ್ಲ. ನಂತರ ಆಯುರ್ವೇದದ ಬಗ್ಗೆ ಯಾರೋ ಹೇಳಿದ್ದನ್ನು ಕೇಳಿ ಒಡಿಂಗಾ ಭಾರತಕ್ಕೆ ಬಂದಿದ್ದರು.
ಕೇರಳದಲ್ಲಿ ಒಂದು ತಿಂಗಳ ಕಾಲ ಚಿಕಿತ್ಸೆ ಪಡೆದು ಮನೆಗೆ ಮರಳಿ ಅಲ್ಲಿ ತನ್ನ ಔಷಧಿಯನ್ನು ಮುಂದುವರೆಸಿದರು. ಮುಂದುವರಿದ ಚಿಕಿತ್ಸೆ ಮತ್ತು ತಪಾಸಣೆಯ ನಂತರ ಆಸ್ಪತ್ರೆಯ ಹೇಳಿಕೆಯ ಪ್ರಕಾರ, ರೋಸ್ಮರಿ ಒಡಿಂಗಾ ತನ್ನ ದೃಷ್ಟಿಯನ್ನು ಮರಳಿ ಪಡೆದಿದ್ದಾರೆ. ತಮ್ಮ ಮಗಳು ದೃಷ್ಟಿ ಪಡೆಯುತ್ತಲೇ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಅವರು, ಪ್ರಪಂಚದಾದ್ಯಂತ ಆಯುರ್ವೇದ ಐ ಕೇರ್ ಸಂಸ್ಥೆಗಳನ್ನು ಹೆಚ್ಚಿಸಬೇಕು ಎಂದು ಮನವಿ ಮಾಡಿದ್ದಾರೆ.