ಕಂಗನಾ ವಿರುದ್ಧ ಅಜ್ಜಿ ಕಿಡಿಕಿಡಿ- ಟ್ವೀಟ್​ ಡಿಲೀಟ್​ ಬಳಿಕವೂ ನಟಿಗೆ ಸಿಗಲಿಲ್ಲ 'ಮುಕ್ತಿ'

kangana
Published on

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಭಾರಿ ಚರ್ಚೆಯಲ್ಲಿ ಇರುವ ನಟಿ ಎಂದರೆ ಕಂಗನಾ ರಣಾವತ್​. ಎಲ್ಲಾ ವಿಷಯಗಳಿಗೂ ಪ್ರತಿಕ್ರಿಯೆ ನೀಡುವ ಮೂಲಕ ಹಲವರಿಂದ ಶಹಭಾಸ್​ಗಿರಿ ಗಿಟ್ಟಿಸಿಕೊಂಡಿರುವ ಈ ನಟಿಯ ವಿರುದ್ಧ ಅಷ್ಟೇ ಟೀಕೆ-ಟಿಪ್ಪಣೆಗಳೂ ಬರುತ್ತಿವೆ. ಈ ಮೂಲಕ ಸದ್ಯದ ವಿವಾದಿತ ನಟಿ ಎಂದೂ ಕಂಗನಾ ಕರೆಸಿಕೊಂಡಿರುವುದುಂಟು.

ಇದೀಗ ಕೇಂದ್ರ ಸರ್ಕಾರದ ಕೃಷಿ ಕಾನೂನು ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ನಟಿ ಕಂಗನಾ ಮಾಡಿರುವ ಟ್ವೀಟ್​ ಒಂದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಮಾತ್ರವಲ್ಲದೇ, ಈ ಟ್ವೀಟ್​ 73 ವರ್ಷದ ಅಜ್ಜಿಯ ಸಿಟ್ಟಿಗೆ ಕಾರಣವಾಗಿದ್ದು, ಕಂಗನಾ ಅವರ ವಿರುದ್ಧ ಈ ವೃದ್ಧೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಇದಕ್ಕೆ ಕಾರಣ ಏನೆಂದರೆ, ಮೊಹಿಂದರ್ ಕೌರ್ ಎನ್ನುವ ವೃದ್ಧೆಯ ಫೋಟೋ ಹಾಕಿ ಟ್ವೀಟ್​ ಮಾಡಿದದ್ ಕಂಗನಾ, ಶಹೀನ್ ಭಾಗ್ ಪ್ರತಿಭಟನೆಯಲ್ಲಿ ತೊಡಗಿರುವ ದಾದಿ 100 ರೂ.ಕೊಟ್ಟರೆ ಎಲ್ಲ ಪ್ರತಿಭಟನೆಗಳಿಗೆ ಲಭ್ಯವಿರುತ್ತಾರೆ ಎಂದು ಬರೆದುಕೊಂಡಿದ್ದರು.

ಮೊಹಿಂದರ್ ಕೌರ್ ಅವರು, ಬಟಿಂಡಾದ ಬಹದ್ದೂರ್​ಘರ್​ ಜಂಡಿಯಾನ್ ಗ್ರಾಮದ ನಿವಾಸಿಯಾಗಿದ್ದು, ಸುಮಾರು 13 ಎಕರೆ ಕೃಷಿ ಭೂಮಿ ಹೊಂದಿದ್ದಾರೆ. ಪತಿಗೆ ಅಸ್ತಮಾ ಆಗಿದ್ದರಿಂದ ಮೊಹಿಮದರ್ ಕೌರ್ ಅವರೇ ಕೃಷಿಯಲ್ಲಿ ತೊಡಗಿದ್ದಾರೆ. ಶಹೀನ್ ಭಾಗ್‍ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಕೌರ್ ಅವರ ಫೋಟೋಗಳನ್ನು ಹಾಕಿ ಕಂಗನಾ ಟ್ವೀಟ್ ಮಾಡಿದ್ದರು. ಈ ಕುರಿತು ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಟ್ವೀಟ್ ಡಿಲೀಟ್ ಮಾಡಿದ್ದಾರೆ.

ಆದರೆ ಈ ಟ್ವೀಟ್​ ಬಗ್ಗೆ ಮೊಹಿಂದರ್​ ಅವರಿಗೆ ಯಾರೋ ಹೇಳಿದ್ದಾರೆ. ಇದರಿಂದ ತೀವ್ರ ಅಸಮಾಧಾನಗೊಂಡ ಅವರು, 'ನನ್ನ ಬಗ್ಗೆ ಬರೆದಿರುವ ನಟಿಗೆ ನಾನು ಹೇಳಲು ಬಯಸುತ್ತೇನೆ. ಅವರು ಎಂದೂ ನನ್ನ ಮನೆಗೆ ಭೇಟಿ ನೀಡಿಲ್ಲ, ನಾನು ಏನು ಮಾಡುತ್ತಿದ್ದೇನೆ ಎಂಬುದನ್ನು ನೋಡಿಲ್ಲ. ಆದರೆ 100ರೂ.ಗೆ ನಾನು ಸಿಗುತ್ತೇನೆ ಎಂದು ಹೇಳಿದ್ದಾರೆ. ನನಗೆ ಮೂವರು ಹೆಣ್ಣು ಮಕ್ಕಳು, ಎಲ್ಲರನ್ನೂ ವಿವಾಹ ಮಾಡಿದ್ದೇನೆ. ಮಗ ಮತ್ತು ಸೊಸೆ ಮಕ್ಕಳೊಂದಿಗೆ ನನ್ನೊಟ್ಟಿಗೇ ಇದ್ದಾರೆ.

ಈಗಲೂ ಕುಡಗೋಲಿನಿಂದ ಒಕ್ಕಣಿಗೆ ಮಾಡುತ್ತೇನೆ, ಹತ್ತಿ ಬಿಡಿಸುತ್ತೇನೆ. ಮನೆಗೆ ಬೇಕಾಗುವ ತರಕಾರಿಗಳನ್ನು ನಾವೇ ಬೆಳೆಯುತ್ತೇವೆ. ಇತ್ತೀಚೆಗೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೃಷಿ ಮಾಡುವುದು ಕಷ್ಟವಾಗಿದೆ. ಹೀಗಾಗಿ ನಾನು ಪ್ರತಿಭಟನೆಗೆ ತೆರಳಿ ರೈತರಿಗೆ ಬೆಂಬಲ ನೀಡುತ್ತಿದ್ದೇನೆ. ನಾನು ರೈತ ಮಹಿಳೆ, ಪ್ರತಿಭಟನೆ ಮಾಡಲು ಪೆಟ್ರೋಲ್ ಬಂಕ್‍ಗೆ ತೆರಳುತ್ತಿದ್ದೇನೆ. ಅಲ್ಲದೆ ನಾನು ಈಗಲೂ ದೆಹಲಿಗೆ ಹೋಗಬಲ್ಲೆ, ಆ ಉತ್ಸಾಹ ನನ್ನಲ್ಲಿದೆ. ನಾನು ರೈತರ ಭಾಗವಾಗಿದ್ದೇನೆ ಎಂದು ತಿರುಗೇಟು ನೀಡಿದ್ದಾರೆ.

ಕಂಗನಾ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿರುವ ಭಾರತೀಯ ಕಿಸಾನ್ ಸಂಘಟನೆ ಬ್ಲಾಕ್ ಅಧ್ಯಕ್ಷ ಧರ್ಮಪಾಲ್, ಮೊಹಿಂದರ್​ ಕೌರ್​ ಅವರು ಪ್ರತಿಭಟನೆ ನಡೆಸಲು ದಬ್ವಾಲಿ ಗಡಿ ಪ್ರವೇಶಿಸುತ್ತಿದ್ದಂತೆ ಮನೆಗೆ ಹೋಗುವಂತೆ ಸೂಚಿಸಿದೆವು. ವಯಸ್ಸಾಗಿದ್ದರಿಂದ ಪ್ರತಿಭಟನೆಗೆ ಬರುವುದು ಬೇಡ ಎಂದು ತಿಳಿ ಹೇಳಿದೆವು. ಆದರೂ ಅವರು ಕೇಳಲಿಲ್ಲ, ನಿಮ್ಮೊಂದಿಗೇ ಬರುತ್ತೇನೆ ಎಂದು ಹಠ ಹಿಡಿದರು ಎಂದು ತಿಳಿಸಿದ್ದಾರೆ. ಸದ್ಯ ಟ್ವೀಟ್​ ಡಿಲೀಟ್​ ಆದರೂ ಕಂಗನಾ ಭಾರಿ ಟ್ರೋಲ್​ ಆಗುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net