ಗೋಮಾಂಸದ ಕುರಿತು ಟ್ವೀಟ್​ ವಿವಾದ: ಕಂಗನಾ ವಿರುದ್ಧ ಸಲ್ಲಿಸಿದ್ದ ಅರ್ಜಿ ವಜಾ ಮಾಡಿದ ಹೈಕೋರ್ಟ್​

kangana
Published on

ನವದೆಹಲಿ: ಇದೀಗ ಬಾಲಿವುಡ್​ ನಟಿ ಕಂಗನಾ ರಣಾವತ್​ ಹೆಸರು ಭಾರಿ ಪ್ರಸಿದ್ಧಿ ಪಡೆದುಕೊಂಡಿದೆ. ನಟ ಸುಶಾಂತ್​ ರಜಪೂತ್​ ಅವರ ಸಾವಿನ ನಂತರ ಕಂಗನಾ ನೀಡುವ ಪ್ರತಿಯೊಂದು ಹೇಳಿಕೆಗಳೂ ಇದೀಗ ಭಾರಿ ಜನಪ್ರಿಯತೆ ಗಳಿಸಿಕೊಳ್ಳುತ್ತಿದ್ದು, ಅದೇ ಇನ್ನೊಂದೆಡೆ ವಿವಾದವನ್ನೂ ಸೃಷ್ಟಿಸುತ್ತಿದೆ.

ಇವರ ಟ್ವಿಟರ್​ ಖಾತೆಯಲ್ಲಿ ಶೇರ್​ ಆಗಿದ್ದ ಹಳೆಯ ಟ್ವೀಟ್​ ಒಂದನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬರು ಕಂಗನಾ ವಿರುದ್ಧ ಪಂಜಾಬ್​, ಹರಿಯಾಣ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಇಂದು ತೀರ್ಪು ಹೊರಬಂದಿದ್ದು, ಕಂಗನಾ ಪರವಾಗಿ ಕೋರ್ಟ್​ ಅದೇಶ ಹೊರಡಿಸಿದೆ.

ಏನಿದು ವಿವಾದ?  ಗೋಮಾಂಸದ ಕುರಿತಾದ ಟ್ವೀಟ್​ ಇದಾಗಿದೆ. 2019ರ ಮೇ ತಿಂಗಳಿನಲ್ಲಿ ಮಾಡಿರುವ ಟ್ವೀಟ್​ ಅನ್ನು ಪ್ರಶ್ನಿಸಿ ಲುಧಿಯಾನ ಮೂಲದ ನವನೀತ್ ಗೋಪಿ ಎನ್ನುವವರು ಅರ್ಜಿ ಸಲ್ಲಿಸಿದ್ದರು.

ಈ ಟ್ವೀಟ್​ನಲ್ಲಿ ಗೋಮಾಂಸದ ಕುರಿತಂತೆ ಬರೆಯಲಾಗಿದೆ. ಗೋಮಾಂಸ ತಿನ್ನುವುದು ತಪ್ಪೇನಲ್ಲ. ಇದು ಯಾವುದೇ ಧರ್ಮಕ್ಕೆ ಸೀಮಿತವಲ್ಲ. ಕಂಗನಾ ಎಂಟು ವರ್ಷಗಳ ಹಿಂದೆ ಯೋಗಿಯಾಗುವ ಸಲುವಾಗಿ ಮಾಂಸಾಹಾರ ತ್ಯಜಿಸಿದ್ದಾಳೆ. ಹಾಗೆಂದು ಆಕೆಯ ಸಹೋದರ ಗೋಮಾಂಸ ತಿನ್ನುತ್ತಾನೆ ಎಂದು ಅದರಲ್ಲಿ ಬರೆಯಲಾಗಿದೆ.

ಇದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ. ಮಾತ್ರವಲ್ಲದೇ ಗೋಮಾಂಸ ತಿನ್ನುವುದನ್ನು ಉತ್ತೇಜಿಸುತ್ತದೆ ಎಂದು ನವನೀತ್​ ಆರೋಪಿಸಿದ್ದರು. ಈ ಕುರಿತು ತಾವು ಲುಧಿಯಾನದ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದಿದ್ದರು.

ಪಂಜಾಬ್ ಹಸುವಿನ ವಧೆ ನಿಷೇಧ ಕಾಯ್ದೆ 1995, ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ರ ಸೆಕ್ಷನ್ 66 ಮತ್ತು 67 ಮತ್ತು ಸೆಕ್ಷನ್ 295 ರ ಭಾರತೀಯ ದಂಡ ಸಂಹಿತೆ, 1860 ರ ಅಡಿಯಲ್ಲಿ ನಟಿಯ ವಿರುದ್ಧ ಎಫ್ಐಆರ್ ದಾಖಲಿಸಬೇಕೆಂದು ಅರ್ಜಿದಾರರು ಕೋರಿದ್ದರು.

ಆದರೆ ಇದನ್ನು ಕೋರ್ಟ್​ ಮಾನ್ಯ ಮಾಡಲಿಲ್ಲ. ಏಕೆಂದರೆ, ಈ ಟ್ವೀಟ್​ನಲ್ಲಿ ಅವರೇ ಬರೆದಿದ್ದಾರೆ ಎನ್ನುವುದಕ್ಕೆ ಯಾವುದೇ ಪುರಾವೆಗಳು ಇಲ್ಲ. ಅರ್ಜಿಯಲ್ಲಿ ಅಸ್ಪಷ್ಟತೆ ಇದೆ.ಅವರೇ ಸ್ವತಃ ಸಸ್ಯಾಹಾರಿಯಾಗಿರುವುದಾಗಿ ಅದರಲ್ಲಿ ಬರೆಯಲಾಗಿದೆ. ಆದರೆ ಅವರೇ ಇದನ್ನು ಬರೆದಿರುವ ಬಗ್ಗೆ ಎಲ್ಲಿಯೂ ಉಲ್ಲೇಖವಿಲ್ಲ. ಭಾರತ ಮತ್ತು ವಿದೇಶಗಳಲ್ಲಿನ ಆಹಾರ ವ್ಯತ್ಯಾಸಗಳ ಕುರಿತು ಈ ಟ್ವೀಟ್​ನಲ್ಲಿ ಉಲ್ಲೇಖವಾಗಿದೆ. ಆದ್ದರಿಂದ ಅರ್ಜಿಯನ್ನು ಮಾನ್ಯ ಮಾಡಲು ಆಗುವುದಿಲ್ಲ ಎಂದು ಕೋರ್ಟ್​ ಹೇಳಿ ಅರ್ಜಿಯನ್ನು ವಜಾ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net