ಕಾಬುಲ್‌ ವಿಮಾನ ನಿಲ್ದಾಣದಲ್ಲಿ ಶೂಟ್‌ಔಟ್‌: ಐವರ ಸಾವು- ಪ್ರಾಣ ಉಳಿಸಿಕೊಳ್ಳಲು ಬಂದು ಹೆಣವಾದರು!

kabul
Published on

ಕಾಬುಲ್‌: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಬರುತ್ತಿರುವ ನಡುವೆಯೇ, ದೇಶದಿಂದ ಪಲಾಯನ ಮಾಡಲು ವಿಮಾನ ನಿಲ್ದಾಣಕ್ಕೆ ಬರುವವರ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಪ್ರಾಣ ಉಳಿಸಿಕೊಳ್ಳಲು ಒಂದೇ ವಿಮಾನದಲ್ಲಿ ನೂಕು ನುಗ್ಗಲು ಉಂಟಾಗುತ್ತಿದೆ.

ಈ ನಡುವೆಯೇ ವಿಮಾನ ನಿಲ್ದಾಣದಲ್ಲಿಯೂ ಗುಂಡಿನ ದಾಳಿ ನಡೆದಿದೆ. ಇದರಲ್ಲಿ ಐವರು ಅಫ್ಘನ್ನರು ಮೃತಪಟ್ಟಿದ್ದಾರೆ. ಇವರ ಮೃತ ದೇಹಗಳನ್ನು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಹೊತ್ತೊಯ್ದಿದ್ದಾಗಿ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಆದರೆ ಈ ಗುಂಡು ಹಾರಿಸಿದ್ದು ಯಾರು ಎಂಬ ಬಗ್ಗೆ ತನಿಖೆ ಶುರುವಾಗಿದೆ. ದೇಶ ಬಿಟ್ಟು ಹೋಗುತ್ತಿರುವ ಕಾರಣದಿಂದಾಗಿ ತಾಲಿಬಾನಿಗಳೇ ಇವರ ಮೇಲೆ ಗುಂಡು ಹಾರಿಸಿದ್ದಾರೋ ಅಥವಾ ಇದು ಅಮೆರಿಕದ ಸೈನಿಕರ ಕೃತ್ಯವೋ ತಿಳಿಯುತ್ತಿಲ್ಲ. ಏಕೆಂದರೆ ನೂಕುನುಗ್ಗಲನ್ನು ನಿಯಂತ್ರಿಸಲು ಅಮೆರಿಕ ಸಾವಿರಕ್ಕೂ ಹೆಚ್ಚು ಸೈನಿಕರನ್ನು ನಿಯೋಜನೆ ಮಾಡಿದೆ. ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತು ಅಮೆರಿಕನ್ ಸೈನಿಕರು ಗಾಳಿಯಲ್ಲಿ ಗುಂಡು ಹಲವು ಸುತ್ತು ಗುಂಡು ಹಾರಿಸಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಅದೇ ಇನ್ನೊಂದೆಡೆ ಗುಂಡು ಹಾರಿಸಿರುವ ಶಬ್ದ ಕೇಳಿದ್ದು ನಿಜ. ಆದರೆ ಈ ಐವರು ಸತ್ತಿದ್ದು, ಕಾಲ್ತುಳಿತದಿಂದಲೂ ಇರಬಹುದು ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಜೀವ ಉಳಿಸಿಕೊಳ್ಳಲು ಪರದಾಡುತ್ತಿರುವ ಅಫ್ಘನ್ನರ ಬದುಕೀಗ ಅಕ್ಷರಶಃ ನರಕವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net